ಮಾಹಿತಿ ನೀಡದ ಪಾಲಿಕೆ ಅಧಿಕಾರಿಗೆ ದಂಡ

ಶುಕ್ರವಾರ, ಜೂಲೈ 19, 2019
28 °C

ಮಾಹಿತಿ ನೀಡದ ಪಾಲಿಕೆ ಅಧಿಕಾರಿಗೆ ದಂಡ

Published:
Updated:

ಗುಲ್ಬರ್ಗ: ಸಮರ್ಪಕ ಮಾಹಿತಿ ಕೊಡದ ಗುಲ್ಬರ್ಗ ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಕರ್ನಾಟಕ ಮಾಹಿತಿ ಆಯೋಗವು 5,000 ರೂಪಾಯಿ ದಂಡ ವಿಧಿಸಿದೆ. ಇದರ ಜತೆಗೆ, ಅರ್ಜಿದಾರರಿಗೆ 15 ದಿನಗಳ ಒಳಗೆ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ನೋಂದಾಯಿತ ಅಂಚೆಯಲ್ಲಿ ನೀಡುವಂತೆಯೂ ನಿರ್ದೇಶನ ನೀಡಿದೆ.`ಕನ್ನಡ ಸೇನೆ ಕರ್ನಾಟಕ~ ಸಂಘಟನೆ ಅಧ್ಯಕ್ಷ ಸಂಗಮನಾಥ ಬಿ. ಹಿರೇಗೌಡ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಆಯೋಗವು, ಈ ಆದೇಶ ನೀಡಿದೆ.ವಿವರ: `1955ರಲ್ಲಿ ನಗರದ ಯಾವ ಸ್ಥಳಗಳಲ್ಲಿ, ಎಷ್ಟು ಸಣ್ಣ ಕೆರೆಗಳಿದ್ದವು? ಅವುಗಳ ವಿಸ್ತೀರ್ಣ ಎಷ್ಟು? 2010ರಲ್ಲಿ ಈ ಎಲ್ಲ ಕೆರೆಗಳು ಏನಾಗಿವೆ?~ ಎಂಬ ಮಾಹಿತಿಯನ್ನು ಬಯಸಿ ಸಂಗಮನಾಥ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 2010ರ ಏಪ್ರಿಲ್ 28ರಂದು ಅರ್ಜಿ ಸಲ್ಲಿಸಿದ್ದರು.ಒಂದು ತಿಂಗಳಾದರೂ ಮಾಹಿತಿ ಸಿಗದಿದ್ದರಿಂದ ಸಂಗಮನಾಥ, ಮೇಲ್ಮನವಿ ಪ್ರಾಧಿಕಾರ ಹಾಗೂ ಪಾಲಿಕೆಯ ಆಯುಕ್ತರಿಗೆ ಮೇ 28ರಂದು ಪ್ರಥಮ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಕೋರಿಕೆ ಮೇರೆಗೆ ಪಾಲಿಕೆಯ ಮಾಹಿತಿ ಅಧಿಕಾರಿಯು ಅರ್ಜಿಯನ್ನು ಎಕ್ಸಿಕ್ಯೂಟಿವ್ ಎಂಜಿನಿಯರ್ ಎಚ್.ಎ.ಪೀರ್ ಅವರಿಗೆ ಜೂನ್ 1ರಂದು ವರ್ಗಾಯಿಸಿದ್ದರು.ಜುಲೈ 2ರಂದು ಎಚ್.ಎ.ಪೀರ್ ಅರ್ಜಿದಾರ ಸಂಗಮನಾಥ ಅವರಿಗೆ ಪತ್ರ ಬರೆದು, ಮಾಹಿತಿಗೆ ಸಣ್ಣ ನೀರಾವರಿ ಇಲಾಖೆಯಿಂದ ವರದಿ ಪಡೆಯಬಹುದು ಎಂದು ತಿಳಿಸಿದ್ದರು. ತಮಗೆ ಅಪೂರ್ಣ ಮಾಹಿತಿಯನ್ನು ಕೊಡಲಾಗಿದೆ ಎಂದು ಸಂಗಮನಾಥ 2010ರ ಜುಲೈ 27ರಂದು ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಆಯೋಗ 2011ರ ಮೇ 16ರಂದು ಸಮನ್ಸ್ ಜಾರಿಗೊಳಿಸಿತ್ತು.ಆಯೋಗದ ಸಮನ್ಸ್ ಸ್ವೀಕರಿಸಿದ ಬಳಿಕವೂ ಪ್ರತಿವಾದಿಯು ಅರ್ಜಿದಾರರಿಗೆ ಮಾಹಿತಿ ನೀಡಿರಲಿಲ್ಲ.ಸರ್ಕಾರದ ಸುತ್ತೋಲೆ ಪ್ರಕಾರ ಕೆರೆ ಅಂಗಳ, ತೋಪು, ಸ್ಮಶಾನ ಇತರ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಪ್ರಕರಣಗಳನ್ನು 15 ದಿನಕ್ಕೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂಬ ನಿರ್ದೇಶನ ಇದ್ದರೂ, ಅರ್ಜಿದಾರರು ಕೋರಿದ ಮಾಹಿತಿ ತಮ್ಮಲ್ಲಿ ಲಭ್ಯವಿಲ್ಲ ಎಂದು ಪ್ರತಿವಾದಿಯ ಪ್ರತಿನಿಧಿಯು ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ ಎಂದು ಆಯೋಗ ಪ್ರತಿಕ್ರಿಯಿಸಿತು.ವೇತನದಲ್ಲಿ ಕಡಿತ: ಆಯೋಗದ ಸಮನ್ಸ್ ಸ್ವೀಕರಿಸಿದ ನಂತರವೂ ಮಾಹಿತಿ ನೀಡದ ಅಧಿಕಾರಿಯು `ಮಾಹಿತಿ ಹಕ್ಕು ಕಾಯ್ದೆ~ಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ ಆಯೋಗ, ಪ್ರತಿವಾದಿಯಾದ ಎಚ್.ಎ.ಪೀರ್ ಅವರಿಗೆ ರೂ. 5,000 ದಂಡ ವಿಧಿಸಿತು. ಇದರ ಜತೆಗೆ ಅರ್ಜಿದಾರರು ಕೋರಿದ ಮಾಹಿತಿಯನ್ನು 15 ದಿನಗಳೊಳಗೆ ಉಚಿತವಾಗಿ ನೋಂದಾಯಿತ ಅಂಚೆಯಲ್ಲಿ ರವಾನಿಸಿ, ಅದರ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿತು.ಪೀರ್ ಅವರಿಗೆ ಕೊಡಲಾಗುವ ಜೂನ್ ತಿಂಗಳ ವೇತನದಲ್ಲಿ ದಂಡದ ಹಣವನ್ನು ಕಡಿತಗೊಳಿಸಿ, ಅದನ್ನು ಜಮಾ ಮಾಡಿದ ರಸೀದಿಯೊಂದಿಗೆ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪಾಲಿಕೆ ಆಯುಕ್ತ ಮನೋಜ ಜೈನ್‌ಗೆ ಸೂಚಿಸಿತು.ಜಾತಿ ನಿಂದನೆಗೆ ಶಿಕ್ಷೆ

ಗುಲ್ಬರ್ಗ:
ಜಾತಿ ನಿಂದನೆ ಹಾಗೂ ಹಲ್ಲೆ ನಡೆಸಿದ ಆರೋಪಿಗಳಿಗೆ 10,000 ರೂಪಾಯಿ ದಂಡ ಹಾಗೂ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ.ಅಂಬು ಮಲ್ಕಣ್ಣ ಕುಂಬಾರ, ಶರಣು ಮಲ್ಕಣ್ಣ, ಶಂಕರ ಬಾಬುರಾವ ಜಮಾದಾರ, ಬಾಬು ಮೈಲಾರಿ ಮರಗುತ್ತಿ ಮತ್ತು ಶಿವು ನಂದಕುಮಾರ ಶಿಕ್ಷೆಗೆ ಗುರಿಯಾಗಿದ್ದಾರೆ. ಗುಲ್ಬರ್ಗ ರಾಜೀವಗಾಂಧಿ ನಗರದ ಉಮೇಶ ಗೇಮು ರಾಠೋಡ್ ಎಂಬವರ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಗುಲ್ಬರ್ಗ ಎ-ಉಪವಿಭಾಗದ ಡಿಎಸ್ಪಿ ಸಿ.ಕೆ.ಬಾಬಾ ದೋಷಾರೋಪಣ ಪತ್ರ ಸಲ್ಲಿಸಿದ್ದರು. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಬೆಳವಿಗಿ ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ 2ನೇ ಅಪರ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ದೇವಾಪೂರ ವೆಂಕಣ್ಣ ವಾದ ಮಂಡಿಸಿದ್ದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry