ಸೋಮವಾರ, ಡಿಸೆಂಬರ್ 9, 2019
24 °C

ಪ್ಯಾರಾಸೇಲಿಂಗ್ ತಂದ ರೋಮಾಂಚನ

Published:
Updated:
ಪ್ಯಾರಾಸೇಲಿಂಗ್ ತಂದ ರೋಮಾಂಚನ

ಗುಲ್ಬರ್ಗ:  ಗಣರಾಜ್ಯೋತ್ಸವದ ಅಂಗವಾಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆದ ’ಪ್ಯಾರಾಸೇಲಿಂಗ್’ ಜನರಲ್ಲಿ ರೋಮಾಂಚನ ಮೂಡಿಸಿತು. ಎನ್‌ಸಿಸಿ ಕೆಡೆಟ್‌ಗಳು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಈ ಪ್ರದರ್ಶನವನ್ನು ಗುಲ್ಬರ್ಗದಲ್ಲಿ ನೀಡಿದರು.ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿ ಪರಮೇಶ್ವರ ಸಂಪೂರ್ಣ ರಕ್ಷಾ ಕವಚ ತೊಟ್ಟು ಪ್ಯಾರಾಚೂಟ್ ಕಟ್ಟಿಕೊಂಡರು. ಈ ಪ್ಯಾರಾಚೂಟನ್ನು ಹಗ್ಗದ ಮೂಲಕ ಜೀಪ್‌ಗೆ ಕಟ್ಟಲಾಯಿತು. ಜೀಪ್ ಮುಂದಕ್ಕೆ ಚಲಿಸಲು ಆರಂಭಿಸಿದಂತೆ ಪ್ಯಾರಾಚೂಟ್‌ನಲ್ಲಿ ಗಾಳಿ ತುಂಬಿಕೊಂಡು ಪರಮೇಶ್ವರ ಮೇಲಕ್ಕೆ ಏರಿದರು. ಕೆಲಕ್ಷಣಗಳ ಕಾಲ ಬಾನಿನಲ್ಲಿ ತೇಲಾಡಿದ ಅವರು, ಜೀಪ್ ವೇಗ ಕಡಿಮೆಯಾಗಿ ನಿಲ್ಲುತ್ತಿದ್ದಂತೆ ಕೆಳಗೆ ಇಳಿದರು. ಕೊನೇ ಕ್ಷಣದಲ್ಲಿ ಉಂಟಾದ ಗೊಂದಲದಿಂದ ಅವರು ಸುರಕ್ಷಿತವಾಗಿ ಇಳಿಯದೇ ಧೊಪ್ಪನೇ ಬಿದ್ದರು. ಶರೀರಕ್ಕೆ ಸುರಕ್ಷಾಕವಚ ಇದ್ದ ಕಾರಣ ಅಪಾಯವೇನೂ ಆಗಲಿಲ್ಲ.ಕರ್ನಲ್ ಮುಖೇಶ ಸಿಂಗ್ ಅವರು ‘ಲಾಂಚಿಂಗ್’ಗೆ ನಿರ್ದೇಶನ ನೀಡಿದರೆ, ಪೈಲಟ್ ಸುಬೇದಾರ ರಾಜೇಶ ಚೌಹಾಣ್ ಪೈಲಟ್ ಜೀಪ್ ಚಲಾಯಿಸಿದರು.  ಎಲ್ಲ ಚಟುವಟಿಕೆಯನ್ನು ಹವಲ್ದಾರ್ ಕದಮ್ ನಿಯಂತ್ರಿಸಿದರು.ಮೊದಲ ಬಾರಿಗೆ ಇಂಥ ಪ್ರದರ್ಶನ ನೋಡಿದ ಜನತೆ, ರೋಮಾಂಚನಗೊಂಡರು. ಪರಮೇಶ್ವರ ಮೇಲಕ್ಕೆ ಹಾರುತ್ತಿದ್ದಂತೆ ಪ್ರೇಕ್ಷಕ ಸಮೂಹದಿಂದ ಭಾರಿ ಕರತಾಡನ ಹಾಗೂ ಹರ್ಷೋದ್ಗಾರ ಕೇಳಿಬಂದವು. “ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ, ಧೈರ್ಯ ತುಂಬುವ ಪ್ಯಾರಾ ಸೇಲಿಂಗ್, ಗುಂಪಿನಲ್ಲಿ ಕೆಲಸ ನಿರ್ವಹಿಸುವ ಮನೋಭಾವ ಬೆಳೆಸುವಲ್ಲಿ ನೆರವಾಗುತ್ತದೆ. ಪ್ಯಾರಾಸೇಲಿಂಗ್‌ನಲ್ಲಿ ಗಾಳಿ ವೇಗ, ಸುರಕ್ಷತಾ ವ್ಯವಸ್ಥೆ, ರಸ್ತೆ, ಮಾನಸಿಕ ಮತ್ತು ದೈಹಿಕ ಸಿದ್ಧತೆ, ವಾಹನ ವೇಗ ನಿಯಂತ್ರಣ, ಸಾಮರ್ಥ್ಯ, ಟೇಕ್ ಆಫ್ (ಮೇಲೇರುವುದು) ಮತ್ತು ಲ್ಯಾಂಡಿಂಗ್ (ಕೆಳಗಿಳಿಯುವುದು) ಮುಖ್ಯ” ಎಂದು ಕದಮ್ ಹೇಳಿದರು.ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್, ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಎಸ್‌ಪಿ ಪದ್ಮನಯನ ಇತರರು ಹರ್ಷಚಿತ್ತರಾಗಿ ಪ್ರದರ್ಶನ ವೀಕ್ಷಿಸಿದರು.

ಪ್ರತಿಕ್ರಿಯಿಸಿ (+)