ಗುಲ್ಬರ್ಗದಲ್ಲಿ 24/7 ನೀರು

ಮಂಗಳವಾರ, ಜೂಲೈ 23, 2019
24 °C

ಗುಲ್ಬರ್ಗದಲ್ಲಿ 24/7 ನೀರು

Published:
Updated:

ಗುಲ್ಬರ್ಗ: ವಾರದ ಎಲ್ಲಾ ದಿನ (24/7)ಗಳಲ್ಲಿ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆಗಿಂತಲೂ, ಗುಲ್ಬರ್ಗ ನಗರದಲ್ಲಿ ಹೆಚ್ಚಿನ ಅನುಕೂಲಗಳಿವೆ.ರಾಜ್ಯದ ವಿವಿಧ ನಗರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಿರುವ `ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‌ಸಿ)ವು ವಿವಿಧ ನಗರಗಳಲ್ಲಿ ಕುಡಿಯುವ ನೀರಿನ ಮೂಲಗಳ ಬಗ್ಗೆ ಕೈಗೊಂಡಿದ್ದ ಸಮೀಕ್ಷೆಯಲ್ಲಿ ಈ ಕುರಿತು ವರದಿ ನೀಡಿದೆ.ಬೇರೆಬೇರೆ ನಗರಗಳಿಗೆ ಹೋಲಿಸಿದರೆ ಗುಲ್ಬರ್ಗಕ್ಕೆ ಕುಡಿಯುವ ನೀರು ಪೂರೈಸುವ ಮೂಲಗಳು ಹೆಚ್ಚಾಗಿವೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ಯೋಜನೆಯನ್ನು ಅನುಷ್ಠಾನಗೊಳಿಸುವ ಮೊದಲು ಪ್ರಾಯೋಗಿಕವಾಗಿ ಈಗಾಗಲೇ ಗುಲ್ಬರ್ಗದ 11 ವಾರ್ಡ್‌ಗಳಿಗೆ ನಿರಂತರ ನೀರಿನ ಸೌಲಭ್ಯವನ್ನು ವರ್ಷದ ಹಿಂದೆಯೇ ಕಲ್ಪಿಸಿದೆ.

ಪ್ರಾಯೋಗಿಕ ಯೋಜನೆ ಯಶಸ್ವಿ: ನಿರಂತರ ಕುಡಿಯುವ ನೀರು ಪೂರೈಕೆಯ ಪ್ರಯೋಗಿಕ ಯೋಜನೆಗೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹಾನಗರವ್ಯಾಪಿ ಯೋಜನೆಯನ್ನು ಜಾರಿಗೊಳಿಸಲು ಯಾವುದೇ ತೊಂದರೆಯಿಲ್ಲ ಎನ್ನುವುದನ್ನು ಈ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ.ನೀರಿನ ಮೂಲಗಳು: ಸದ್ಯ ಗುಲ್ಬರ್ಗದಲ್ಲಿ ಪೂರೈಸುತ್ತಿರುವ ಕುಡಿಯುವ ನೀರನ್ನು ಶೇ. 70ರಷ್ಟು ಭೀಮಾನದಿಯಿಂದ ಹಾಗೂ ಶೇ. 30ರಷ್ಟು ಭೋಸ್ಗಾ ಕೆರೆಯಿಂದ ಪಡೆಯಲಾಗುತ್ತಿದೆ. ನಿರಂತರ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸುವುದಾದರೆ, ಬೆಣ್ಣೆತೊರಾ ಆಣೆಕಟ್ಟೆಯಿಂದಲೂ ನೀರು ಪಡೆಯಬಹುದಾಗಿದೆ. ಇವೆಲ್ಲವೂ ನಗರದಿಂದ 40 ಕಿಲೋ ಮೀಟರ್‌ಗಿಂತಲೂ ಕಡಿಮೆ ವ್ಯಾಪ್ತಿಯಲ್ಲಿವೆ. ಒಂದಿಲ್ಲ ಒಂದು ಕಡೆಯಿಂದ ನೀರಿನ ಲಭ್ಯತೆ ವರ್ಷವಿಡಿ ಇದ್ದೇ ಇರುತ್ತದೆ ಎನ್ನುವುದು ಕೆಯುಐಡಿಎಫ್‌ಸಿ ಸಮೀಕ್ಷೆಯ ವಿವರ.`ಬೇರೆ ನಗರಗಳಿಗಿಂತಲೂ ಗುಲ್ಬರ್ಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಆದರೆ, ಸಮಯಾವಕಾಶ ಬೇಕು. ಈಗ ಕುಡಿಯುವ ನೀರು ಪೂರೈಸಲು ಸುಮಾರು ನಾಲ್ಕು ಅಡಿ ಆಳದಲ್ಲಿ ತುಂಬಾ ಹಿಂದೆಯೇ ಒಳಚರಂಡಿ ನಿಗಮ ಕೊಳವೆಗಳನ್ನು ಹಾಕಿದೆ. ಈಗ ನೀರು ಪೂರೈಕೆ ಕೆಲಸವನ್ನು ಪಾಲಿಕೆ ನಿರ್ವಹಿಸುತ್ತಿದೆ.ನಗರದ ಕೆಲವು ಕಡೆಗಳಲ್ಲಿ ಕೊಳವೆಗಳು ಶಿಥಿಲಗೊಂಡು ಸೋರಿಕೆ ಕಂಡು ಬರುತ್ತಿದೆ. ನೆಲ ಅಗೆದು ರಿಪೇರಿ ಮಾಡುವುದು ಕಷ್ಟವಾಗುತ್ತಿದೆ. ಇದರ ಬದಲಾಗಿ ಕೆಯುಐಡಿಎಫ್‌ಸಿ ಯೋಜನೆ ಜಾರಿಗೊಳಿಸಿ ಎರಡು ಅಡಿ ಆಳಕ್ಕೆ ನಗರದಾದ್ಯಂತ ಹೊಸ ಕೊಳವೆಗಳನ್ನು ಅಳವಡಿಸುವುದು ಸೂಕ್ತ~ ಎನ್ನುತ್ತಾರೆ ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತ ಮನೋಜಕುಮಾರ್ ಜೈನ್.`ಕೆಯುಐಡಿಎಫ್‌ಸಿ ಯೋಜನೆ ಜಾರಿಗೊಳಿಸಲು ಅಂದಾಜು ಒಟ್ಟು 200 ಕೋಟಿ ರೂಪಾಯಿ ಬೇಕಾಗುತ್ತದೆ. ಗುಲ್ಬರ್ಗದಲ್ಲಿ 100 ಕೋಟಿ ಯೋಜನೆ ಇನ್ನು ಅನುಷ್ಠಾನ ಹಂತದಲ್ಲಿದೆ. ಗುಲ್ಬರ್ಗದಲ್ಲಿ ಗುತ್ತಿಗೆದಾರರು ಸಾಕಷ್ಟು ಪ್ರಮಾಣದಲ್ಲಿ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಹೊರಗಿನವರು ಇಲ್ಲಿಗೆ ಬರುವುದಿಲ್ಲ. ಹೀಗಾಗಿ ಒಟ್ಟು ಯೋಜನೆ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ~ ಎನ್ನುವುದು ಅವರ ವಿವರಣೆ.ಗುಲ್ಬರ್ಗಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸಂತೋಷದ ಸಂಗತಿ. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆಯಾಗುವ ಬಗ್ಗೆ ನಾಗರಿಕರಲ್ಲಿ ಸಂಶಯವಿದೆ. ಸದ್ಯ, ನಗರದ ಎಲ್ಲ  ಬಡಾವಣೆಗಳಲ್ಲಿ ದೊರೆಯುತ್ತಿರುವ ನೀರಿನ ಗುಣಮಟ್ಟ ಕಳಪೆಯಾಗಿರುವುದು ಈ ಸಂಶಯಕ್ಕೆ ಕಾರಣ.ಸಣ್ಣ ನೀರಾವರಿ ಇಲಾಖೆಯು ಭೀಮಾನದಿಯಿಂದ ನೀರು ಪಂಪ್ ಮಾಡಿಕೊಂಡು ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ನಗರದಲ್ಲಿ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಮಾಡುತ್ತಿದೆ. ಕಳಪೆ ನೀರು ಪೂರೈಕೆಯಾಗುವುದಕ್ಕೆ ಯಾರೂ ಜವಾಬ್ದಾರರು ಎನ್ನುವುದು ಗುಲ್ಬರ್ಗ ಜನರಿಗೆ ಇನ್ನು ಪರಿಹಾರವಾಗದ ಪ್ರಶ್ನೆಯಾಗಿ ಉಳಿದುಕೊಂಡಿದೆ.ನೀರು ಶುದ್ಧೀಕರಣ ಚೆನ್ನಾಗಿ ಮಾಡಲಾಗುತ್ತಿದೆ ಎನ್ನುವುದು ಶುದ್ಧೀಕರಣ ಘಟಕದ ವಾದ. ಮುಖ್ಯ ಟ್ಯಾಂಕ್‌ನಿಂದ ಒದಗಿಸುವ ನೀರನ್ನೇ ನಾವು ಜನರಿಗೆ ಕೊಡುತ್ತಿದ್ದೇವೆ. ಅದರಲ್ಲಿ ಕೊಳಕು ಇತ್ಯಾದಿ ಬಂದರೆ, ಅದಕ್ಕೆ ನಾವು ಹೊಣೆಯಲ್ಲ ಎನ್ನುವುದು ಪಾಲಿಕೆಯ ವಾದ. ಪೂರೈಕೆಯ ಹಂತದಲ್ಲಿ ಕುಡಿಯುವ ನೀರಿನ ಕೊಳವೆಗಳಲ್ಲಿ ಸೇರಿಕೊಳ್ಳುತ್ತಿರುವ ಕೊಳಚೆಯಿಂದ ಮುಕ್ತಿ ಪಡೆಯಲು ಇನ್ನು ಸಾಧ್ಯವಾಗಿಲ್ಲ. ಮಹಾನಗರ ಪಾಲಿಕೆ ಆಯುಕ್ತರು ಹೇಳಿರುವಂತೆ ನಗರದಾದ್ಯಂತ ಹೊಸ ಕೊಳವೆಗಳನ್ನು ಅಳವಡಿಸುವ ಯೋಜನೆ ಜಾರಿ ಆಗುವುದು ಯಾವಾಗ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry