ಸಾವಯವ ಕೃಷಿ ಮಹತ್ವ ಸಾರುತ್ತಿರುವ ಶ್ರೀ

ಮಂಗಳವಾರ, ಜೂಲೈ 16, 2019
25 °C

ಸಾವಯವ ಕೃಷಿ ಮಹತ್ವ ಸಾರುತ್ತಿರುವ ಶ್ರೀ

Published:
Updated:

ಕಮಲಾಪುರ: ರೈತರು ಆಧುನಿಕ ಕೃಷಿ ಪದ್ಧತಿಗೆ ಶರಣಾಗಿ ಸಾಲ ಸೋಲ ಮಾಡಿ ಬೆಳೆ ಬೆಳೆದು ನೀರಿಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದಾಗ ಹತಾಶರಾಗಿ ಹೆಚ್ಚು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೊಸತಲ್ಲ. ಇದಕ್ಕೆಲ್ಲ ಕಾರಣ ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮತ್ತು ಸಾವಯವ ಕೃಷಿ ಮರೆತಿರುವುದು.ದಿನನಿತ್ಯ ಈ ರೀತಿ ಸಂಭವಿಸುತ್ತಿರುವ ಘಟನೆಗಳಿಂದ ಅರಿತ  ಗುಲ್ಬರ್ಗ ತಾಲ್ಲೂಕಿನ ಮುತ್ಯಾನ ಬಬಲಾದ ಗ್ರಾಮದ ಚನ್ನವೀರ ಮಠದ ಗುರುಪಾದಲಿಂಗ ಮಾಹಾಶಿವಯೋಗಿ ತಮ್ಮ ಇಡೀ ಜೀವನವನ್ನು ಸಾವಯವ ಕೃಷಿಯ ಉಳುವಿಗಾಗಿಯೇ ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ.ರಾಸಾಯನಿಕ ಗೊಬ್ಬರ ಉಪಯೋಗಿಸದೆ  ತಮ್ಮತೋಟದಲ್ಲಿಯೇ ತಯಾರಿಸಿದ ಎರೆ ಹುಳುವಿನ ಗೊಬ್ಬರ ಮಾತ್ರ ಉಪಯೋಗ ಮಾಡುವುದರ ಮೂಲಕ ಬಬಲಾದ ಗುರುಪಾದಲಿಂಗ ಶಿವಾಚಾರ್ಯರು ಮಠದ 25 ಎಕರೆಯ ತೋಟದಲ್ಲಿ ದ್ರಾಕ್ಷಿ, ಪಪ್ಪಾಯ, ಕಲ್ಲಂಗಡಿ, ನಿಂಬೆಹಣ್ಣು, ಕಬ್ಬು, ಈರುಳ್ಳಿ, ಗೋದಿ, ಮೆಕ್ಕೆ ಜೋಳ, ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ.ಬಬಲಾದ ಮಠದ ತೋಟದಲ್ಲಿಯೇ ಸುಮಾರು 50 ದನಗಳಿವೆ. ಅವುಗಳ ಸೆಗಣಿಯ ಗೊಬ್ಬರ ಅಲ್ಲದೆ ಹೊರಗಡೆಯಿಂದ ಖರೀದಿಸಿದ ತಿಪ್ಪೆ ಗೊಬ್ಬರವನ್ನು ತೋಟದ ಭೂಮಿಗೆ ಹಾಕುತ್ತಿದ್ದಾರೆ. ಶ್ರೀಗಳು ಸಾವಯವ ಎರೆಹುಳ ಗೊಬ್ಬರವನ್ನು ಸುಮಾರು 8 ವರ್ಷದಿಂದ ತಮ್ಮ ತೋಟದಲ್ಲಿಯೇ ತಯಾರಿಸಿ ಭೂಮಿಗೆ ಹಾಕುತ್ತಿದ್ದಾರೆ.25 ಎಕರೆ ತೋಟದಲ್ಲಿ 3 ಬೋರ್‌ವೆಲ್ ಮತ್ತು ಒಂದು ಬಾವಿ ಇದೆ. ತೋಟದ ನಿರ್ವಹಣೆಗಾಗಿ 30 ಜನ ಕೆಲಸಗಾರರಿದ್ದಾರೆ. ಅವರ ನಿಷ್ಠೆಯ ಕಾರ್ಯ ಮತ್ತು ಶ್ರೀಗಳ ಸಾವಯವ ಕೃಷಿಯ ಆಸಕ್ತಿಯಿಂದಾಗಿ ತೋಟ ಒಂದು ರೀತಿ ಕಾಡಿನಂತೆ ನಮಗೆ ಕಾಣುತ್ತದೆ.ಶರಣರಾಗಿ ಭಕ್ತರಿಗೆ ಕೇವಲ ಬೋಧನೆ ಮಾಡದೆ ಎಲ್ಲರಿಗೂ ರಾಸಾಯನಿಕ ಕೃಷಿಯ ಹಾನಿ ಮತ್ತು ಸಾವಯವ ಗೊಬ್ಬರದ  ಮಹತ್ವ ಮತ್ತು ಅದರ ಉಪಯೋಗ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಹನಿ ಹನಿ ನೀರಿಗೂ ರೈತರು ಪರದಾಡುವುದನ್ನು ಅರಿತಿರುವ ಶ್ರೀಗಳು ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಬೆಳೆಗಳನ್ನು ಸರಿಯಾಗಿ ಬೆಳೆಸುವ ಉದ್ದೇಶದಿಂದ ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೇ ಪ್ರಥಮವಾಗಿ ಇರಾನ್ ಮೂಲದ ನೇಟಾಫಾಮ್ ಕಂಪೆನಿಯ ಯಂತ್ರವನ್ನು ತಮ್ಮ ತೋಟದಲ್ಲಿ ಬಳಸುವುದರ ಮೂಲಕ ಗಿಡಗಳನ್ನು ಬೆಳೆಸುತ್ತಿದ್ದಾರೆ.`ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ದುಡ್ಡು ನಷ್ಟಮಾಡಿಕೊಳ್ಳುವುದಲ್ಲದೆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಎರೆಹುಳ ಗೊಬ್ಬರ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಇದರಿಂದ ಬೆಳೆ ಉತ್ತಮ ಇಳುವರಿ ಬರುವುದಲ್ಲದೇ ಭೂ- ಫಲವತ್ತತೆ ಯಥಾಸ್ಥಿತಿಯಾಗಿರುತ್ತದೆ. ತೋಟದಲ್ಲಿ ಬೆಳೆದ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ನಮ್ಮ ಮಠಕ್ಕೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದಿದ್ದನ್ನು ಗುಲ್ಬರ್ಗ ಮತ್ತು ಇತರೆ ಮಾರುಕಟ್ಟೆಗಳಿಗೆ ಕಳುಹಿಸುತ್ತೇವೆ~ ಎನ್ನುತ್ತಾರೆ ಕಾಯಕಯೋಗಿ ಗುರುಪಾದಲಿಂದ ಶಿವಯೋಗಿಗಳು.ಗುರುಪಾದಲಿಂಗ ಶಿವಯೋಗಿಗಳು ಆಧುನಿಕ ಕೃಷಿ ಪದ್ದತಿಯ ಅವಾಂತರಗಳ ಕುರಿತು ಅರಿವು ಮೂಡಿಸುವುದರ ಜೊತೆಗ ಸಾವಯವ ಕೃಷಿ ಪ್ರೋತ್ಸಾಹಿಸುವುದರ ಮೂಲಕ ಈ ಭಾಗದ ರೈತರಿಗೆ ಮಾದರಿಯಾಗಿದ್ದಾರೆ. ಸಾಧ್ಯವಾದಷ್ಟು ಜನರು ಆಧುನಿಕ ಕೃಷಿ ಪದ್ದತಿ ತ್ಯಜಿಸಿ ಸಾವಯವ ಕೃಷಿಯತ್ತ ಹೊರಳಬೇಕೆಂಬ ಬಯಕೆ ಅವರದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry