ಕ್ಯಾನ್ಸರ್ ಆಸ್ಪತ್ರೆ ಪುನರ್ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

ಬುಧವಾರ, ಜೂಲೈ 17, 2019
25 °C

ಕ್ಯಾನ್ಸರ್ ಆಸ್ಪತ್ರೆ ಪುನರ್ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

Published:
Updated:

ಗುಲ್ಬರ್ಗ: ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಗುಲ್ಬರ್ಗದ ಸುತ್ರಾವೆ ಸ್ಮಾರಕ ಫೆರಿಫೇರಿಲ್ ಕ್ಯಾನ್ಸರ್ ಆಸ್ಪತ್ರೆಯನ್ನು ಪುನರ್ ಆರಂಭಿಸಬೇಕು ಎಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಹೈದರಾಬಾದ್ ಕರ್ನಾಟಕ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟಿರುವ ಮುಖ್ಯಮಂತ್ರಿಗಳು, ವೈದ್ಯಕೀಯ ಸೌಲಭ್ಯ ನೀಡುತ್ತಿದ್ದ ಆಸ್ಪತ್ರೆಯೊಂದನ್ನು ಶಾಶ್ವತವಾಗಿ ಕಿತ್ತುಹಾಕಿರುವುದು ಅಚ್ಚರಿ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರವಾನಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.50 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಕಟ್ಟಡ, ನೂರಾರು ಕೋಟಿ ಮೌಲ್ಯದ ಕೋಬಾಲ್ಟ್ ಉಪಕರಣ, ನ್ಯೂಕ್ಲಿಯರ್ ವೆುಡಿಸಿನರ್, ಎಕ್ಸ್‌ರೇ ಇನ್ನಿತರ ಉಪಕರಣ ಹೊಂದಿರುವ ಆಸ್ಪತ್ರೆ ಇಂದು ದನದ ಕೊಟ್ಟಿಗೆಯಂತಾಗಿದೆ.ಕಿದ್ವಾಯಿ ಕ್ಯಾನ್ಸರ್ ಕೇಂದ್ರದ ನಿರ್ದೇಶಕರಾಗಿದ್ದ ಡಾ. ಕೃಷ್ಣ ಭಾರ್ಗವ 1990ರಲ್ಲಿ ಈ ಭಾಗದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡುವ ಉದಾತ್ತ ಧ್ಯೇಯದಿಂದ ಇಲ್ಲೊಂದು ಆಸ್ಪತ್ರೆ ಸ್ಥಾಪಿಸಿದ್ದರು. ಎರಡು ದಶಕ ಉತ್ತಮವಾಗಿಯೇ ಸೇವೆ ಸಲ್ಲಿಸಿರುವ ಆಸ್ಪತ್ರೆಯನ್ನು ಕಿದ್ವಾಯಿ ಸಂಸ್ಥೆಯ ಮಲತಾಯಿ ಧೋರಣೆಯಿಂದಾಗಿ ಶಾಶ್ವತವಾಗಿ ಮುಚ್ಚಲಾಗಿದೆ. ಇದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಪ್ರಶ್ನಿಸಿದ್ದಾರೆ.14 ಜಿಲ್ಲೆಗಳ ಬಡ ರೋಗಿಗಳಿಗೆ ಈ ಆಸ್ಪತ್ರೆಯು ಸಂಜೀವಿನಿಯಾಗಿತ್ತು. ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಅನ್ನನಾಳ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ತಡೆಗಟ್ಟಲು ಈ ಕೇಂದ್ರವು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು.

 

ಈ ಆಸ್ಪತ್ರೆಯ ಸ್ಥಾಪನೆಗಾಗಿ ಹಲವು ದಾನಿಗಳು ಉದಾರ ಧನ ಸಹಾಯ ಮಾಡಿದ್ದರು. ಖ್ಯಾತ ಕಲಾವಿದರಾದ ಡಾ. ರಾಜ್‌ಕುಮಾರ ಹಾಗೂ ಮಹೇಂದ್ರ ಕಪೂರ ಆಸ್ಪತ್ರೆ ಸಹಾಯಾರ್ಥವಾಗಿ ಸಂಗೀತ ಸಂಜೆ ಕಾರ್ಯಕ್ರಮ ನೀಡಿದ್ದರು.ಗುಲ್ಬರ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಮುಚ್ಚಿರವುದರಿಂದ ಉತ್ತರ ಕರ್ನಾಟಕದಿಂದ  ನಿತ್ಯವೂ ನೂರಾರು ಕ್ಯಾನ್ಸರ್ ಪೀಡಿತರು ಹೈದರಾಬಾದ್, ಮೀರಜ್, ಮುಂಬೈ, ಸೋಲಾಪುರಕ್ಕೆ ಹೋಗುತ್ತಿದ್ದಾರೆ. ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಈ ಭಾಗದ ರೋಗಿಗಳಿಗೆ ವರದಾನವಾಗಿದ್ದ ಆಸ್ಪತ್ರೆಯನ್ನು ಮುಚ್ಚಲು ಆದೇಶ ಹೊರಡಿಸಿರುವುದು ಎಷ್ಟು ಸಮಂಜಸ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.ನೂರಾರು ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿರುವ ಸರ್ಕಾರ ಗುಲ್ಬರ್ಗದಲ್ಲೊಂದು ಕ್ಯಾನ್ಸರ್ ಆಸ್ಪತ್ರೆ ಉಳಿಸಿಕೊಳ್ಳಲು ಸೋತಿರುವುದು ಒಂದು ದುರಂತ. ಈ ಆಸ್ಪತ್ರೆಯನ್ನು ಶೀಘ್ರ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಶಹಾಬಜಾರ್ ಸುಲಫಲ ಮಠದ ಮಹಾಂತ ಶಿವಾಚಾರ್ಯ, ರಮೇಶಸ್ವಾಮಿ, ಜಗನ್ನಾಥ ಪಟ್ಟಣಶೆಟ್ಟಿ, ನಟರಾಜ ಕಟ್ಟಿಮನಿ, ಬಸವರಾಜ, ಮುಕ್ರಮಖಾನ, ಯಲ್ಲಪ್ಪ ಯಾದವ, ಶ್ರೀಕಾಂತ ಜಾದವ, ರಾಮು ಯಾದವ, ಸಚಿನ ಪರ್ತಾಬಾದ, ಸಿದ್ದು ಬಿದ್ದನೂರ, ರವಿ ಮಡಿವಾಳ, ವಿದ್ಯಾರ್ಥಿ ಘಟಕದ ರಾಗು, ಅಲೀಮಖಾನ, ನಾಗು ಕಲಶೆಟ್ಟಿ, ಶರಣು ಭೂಸಾ, ಫಾರುಕ, ಪ್ರಫುಲಕುಮಾರ, ರಹೇಮಾನ, ರಾಜು ಉಪ್ಪಳ್ಳಿ, ಸಿದ್ದು ಪಡಶೆಟ್ಟಿ, ಶರಣು ಬಾನೇಕರ್, ವೆಂಕಟೇಶ ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry