ಎನ್‌ಡಿಎ ಸರ್ಕಾರಕ್ಕೆ ವರ್ಷ: ತಂದಿದೆಯೇ ಹರ್ಷ?

4

ಎನ್‌ಡಿಎ ಸರ್ಕಾರಕ್ಕೆ ವರ್ಷ: ತಂದಿದೆಯೇ ಹರ್ಷ?

Published:
Updated:

ಸರ್ಕಾರದ ಮುಖ್ಯಸ್ಥರ ಕಾರ್ಯವೈಖರಿಯನ್ನು ಕಾಲ ಕಾಲಕ್ಕೆ ಪರಾಮರ್ಶಿಸುವುದು, ಅಂಕಗಳನ್ನು ನೀಡುವುದು ವಿಶ್ವದಾದ್ಯಂತ ಬಳಕೆಯಲ್ಲಿ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಸರ್ಕಾರವೊಂದು ಆರಂಭದ ನೂರು ದಿನ ಪೂರೈಸುವುದನ್ನೂ ಸಾಧನೆಗಳ ಪರಾಮರ್ಶೆಗೆ ಪರಿಗಣಿಸಲಾಗುತ್ತದೆ. ಅಲ್ಲಿ ಸರಿಯಾದ ಅಂದಾಜು ಮಾಡಲು ಸಾಧ್ಯವಾಗದಿದ್ದರೂ, ಸರ್ಕಾರವೊಂದು ಒಂದು ವರ್ಷ ಪೂರ್ಣಗೊಳಿಸಿದಾಗ  ಅದರ ಸಾಧನೆ– ವೈಫಲ್ಯಗಳನ್ನು ಗಂಭೀರವಾಗಿ ಪರಾಮರ್ಶಿಸಬಹುದು. 

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಈಗ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು ಹೊಸ ಸರ್ಕಾರದಿಂದ ಮತ್ತು ಮೋದಿ ನಾಯಕತ್ವದಿಂದ ದೇಶದ ಜನರಿಗೆ ದೊರೆತಿರುವ ಪ್ರಯೋಜನಗಳೇನು ಮತ್ತು ವಿದೇಶಿಯರು ಮೋದಿ ಅವರನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ.

ಹಲವಾರು ಮಾಧ್ಯಮ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ, ಒಂದು ವರ್ಷದ ಅವಧಿಯಲ್ಲಿ ಮೋದಿ ಅವರ ಜನಪ್ರಿಯತೆಗೆ ಅಷ್ಟೇನೂ ಧಕ್ಕೆಯಾಗಿಲ್ಲ. ಒಟ್ಟಾರೆ ಸಾಧನೆಗೆ ವಿವಿಧ ಸಮೀಕ್ಷೆಗಳು ಶೇ 61ರಷ್ಟು ಅಂಕಗಳನ್ನು ನೀಡಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇದ್ದ ಶೇ 74ಕ್ಕಿಂತ ಇದು ಕಡಿಮೆಯಾಗಿದ್ದರೂ ಸರ್ಕಾರದ ವರ್ಚಸ್ಸಿಗೆ ಗಮನಾರ್ಹ ಎನ್ನಬಹುದಾದ ಧಕ್ಕೆ ಒದಗದಿರುವುದು ಈ ಸಮೀಕ್ಷೆ ಗಳಿಂದ ತಿಳಿದುಬಂದಿದೆ.

ಕೆಲ ನಿರ್ದಿಷ್ಟ ವಿಷಯಗಳಲ್ಲಿ ಮೋದಿ ಅವರ   ಜನಪ್ರಿಯತೆ ಗರಿಷ್ಠ ಮಟ್ಟದಲ್ಲಿಯೇ ಇದ್ದರೂ, ಇನ್ನು ಹಲವು ವಿಷಯಗಳಲ್ಲಿ ಅವರ ಜನಪ್ರಿಯತೆ ಮಟ್ಟ ಕುಸಿದಿದೆ. ಉದಾಹರಣೆಗೆ ಉದ್ಯೋಗಸೃಷ್ಟಿ ವಿಷಯದಲ್ಲಿ ಮೋದಿ ಅವರಿಗೆ ಅತಿ ಕಡಿಮೆ ಅಂಕಗಳು ದೊರೆತಿವೆ. ಶೇ 17ರಷ್ಟು ಜನರು ಮಾತ್ರ ಮೋದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದರೆ, ಶೇ 30ರಷ್ಟು ಜನರು ಸಾಧಾರಣ ಮಟ್ಟದ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಇಂತಹ ಸಮೀಕ್ಷೆಗಳಿಗೆ ಅವುಗಳದ್ದೇ ಆದ ಅನೇಕ ಇತಿ ಮಿತಿಗಳೂ ಇರುತ್ತವೆ ಎನ್ನುವುದನ್ನೂ ನಾವು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಸಮೀಕ್ಷೆಗೆ ಆಯ್ದುಕೊಂಡ ಮಾದರಿಗಳಲ್ಲಿ ಕೆಲವೇ  ಜನರಿಂದ ಜನಾಭಿಪ್ರಾಯ ಸಂಗ್ರಹಿಸುವುದು ಅಂತಹ ಮಿತಿಗಳಲ್ಲಿ ಒಂದಾಗಿದೆ.

ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯೊಂದು ಈ ಬಾರಿ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿರುವ ಜನರ ಸಂಖ್ಯೆ ಬರಿ 1,300. ಈ ಸೀಮಿತ ಸಂಖ್ಯೆಯ ಜನರು ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಸ್ತ್ರೀ- ಪುರುಷರಾಗಿದ್ದರೂ, ಇಂತಹ ಸಮೀಕ್ಷೆಗಳು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತದಂತಹ   ಮಹಾನಗರಗಳಲ್ಲಿ ಮಾತ್ರ ನಡೆದಿರುತ್ತವೆ ಎನ್ನುವುದನ್ನೂ ನಾವು ಇಲ್ಲಿ ಪರಿಗಣಿಸಬೇಕಾಗುತ್ತದೆ.

ಆದರೆ, ದೇಶ- ವಿದೇಶಗಳಲ್ಲಿನ ಗಣ್ಯರ ದೃಷ್ಟಿಯಲ್ಲಿ ಮಾತ್ರ  ಮೋದಿ ಅವರ ಒಂದು ವರ್ಷದ ಸಾಧನೆ ಮತ್ತು ಜನರು ಅವರನ್ನು ಗ್ರಹಿಸಿರುವ ಸ್ವರೂಪ ಮಾತ್ರ ಒಂದೇ ರೀತಿಯಲ್ಲಿ ಇದೆ. ಅಂತರರಾಷ್ಟ್ರೀಯ ಖ್ಯಾತಿಯ ‘ಟೈಮ್’ ನಿಯತಕಾಲಿಕೆಯು ಮೋದಿ ಅವರ ಚಿತ್ರವನ್ನು ಮುಖಪುಟ ದಲ್ಲಿ ಪ್ರಕಟಿಸಿ, ಅವರ ಸರ್ಕಾರದ ಸಾಧನೆ ಬಗ್ಗೆ ವಿಶ್ಲೇಷಣಾ ತ್ಮಕ ಲೇಖನ ಮತ್ತು ವಿಶೇಷ ಸಂದರ್ಶನವನ್ನು ಪ್ರಕಟಿಸಿರು ವುದು ಗಮನಿಸಬೇಕಾದ ಸಂಗತಿಯಾಗಿದೆ.  

ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಹೊಗಳಿ ರುವ ನಿಯತಕಾಲಿಕೆ, ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಬೇಕು. ಅಂತಹ ಕನಸನ್ನು ಸಾಕಾರಗೊಳಿ ಸುವ ಸಾಮರ್ಥ್ಯವು ನರೇಂದ್ರ ಮೋದಿ ಅವರಲ್ಲಿ ಇದೆಯೇ? ಎನ್ನುವ ಅರ್ಥದ ವಿಶ್ಲೇಷಣಾತ್ಮಕ ವರದಿ ಪ್ರಕಟ ಮಾಡಿತ್ತು. 

ಕೆಲ ವಿಷಯಗಳಲ್ಲಿ ಮೋದಿ ಕಾರ್ಯವೈಖರಿಯನ್ನು ಅವರ  ಕಟು ಟೀಕಾಕಾರರೂ ಮೆಚ್ಚಿಕೊಳ್ಳುತ್ತಾರೆ. ಕುಂಟುತ್ತ ಸಾಗಿದ್ದ ದೇಶಿ ಅರ್ಥ ವ್ಯವಸ್ಥೆಗೆ ಉತ್ಸಾಹ ಮತ್ತು  ಶಕ್ತಿ ತುಂಬಿದ್ದಾರೆ ಹಾಗೂ ಜನರಲ್ಲಿ ಹೊಸ ಆಶಾಭಾವ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎನ್ನುವ ಮಾತನ್ನು ಬಹುಸಂಖ್ಯಾತರು ಅನುಮೋದಿಸುತ್ತಾರೆ.

ಉತ್ಸಾಹ ಮೂಡಿಸಿದ ಮೋದಿ ಅವರ ಚುನಾವಣಾ ಭರವಸೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ, ತಗ್ಗಿದ ವಿತ್ತೀಯ ಕೊರತೆ, ನಿಯಂತ್ರಣದಲ್ಲಿ ಇರುವ ಹಣದುಬ್ಬರ, ಹೊಸ ಎತ್ತರಕ್ಕೆ ಏರಿದ ಷೇರುಪೇಟೆ, ಮೂಲ ಸೌಕರ್ಯ ರಂಗಗಳ ಬಂಡವಾಳ ಸಂಗ್ರಹ ಮತ್ತು  ಉದ್ದಿಮೆ ಸಂಸ್ಥೆಗಳು ದಿವಾಳಿ ಏಳುವುದಕ್ಕೆ ತಡೆ ಬಿದ್ದಿರುವುದು ದೇಶಿ ಅರ್ಥ ವ್ಯವಸ್ಥೆಯಲ್ಲಿ ಉತ್ಸಾಹ ಮೂಡಿಸಿವೆ.

ವಿವಿಧ ಉದ್ದಿಮೆ ಸಂಸ್ಥೆಗಳ ಷೇರು ಬೆಲೆಗಳು ಗಮನಾರ್ಹ  ಪ್ರಮಾಣದಲ್ಲಿ ಏರಿಕೆ ದಾಖಲಿಸಿವೆ.  ಹಲವಾರು ಮಾನದಂಡಗಳ ಪ್ರಕಾರ ಅರ್ಥ ವ್ಯವಸ್ಥೆಯು ಉತ್ತಮ ಸಾಧನೆ ಪ್ರದರ್ಶಿಸದಿದ್ದರೆ ಷೇರುಪೇಟೆಯು ಯಾವುದೇ ಹಂತದಲ್ಲಿ ದಿಢೀರ್‌ ಕುಸಿತ ಕಾಣಲಿದೆ. ಕಳೆದ ತಿಂಗಳು ಷೇರುಪೇಟೆಯಲ್ಲಿನ ಭಾರಿ ಏರಿಳಿತವು ಈ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿದೆ.

ಮೋದಿ  ತಮ್ಮ ವಿಶಿಷ್ಟ ವರ್ಚಸ್ಸಿನ  ವ್ಯಕ್ತಿತ್ವ, ಸರ್ಕಾರದ ಮೇಲೆ ಬಿಗಿ ಹಿಡಿತ ಮತ್ತು ಎರಡು ಅಧಿಕಾರ ಕೇಂದ್ರಗಳ ತಲೆಬೇನೆ ಇಲ್ಲದೆ ನಿರ್ಣಾಯಕ ಮುಖಂಡನಾಗಿ ಹೊರ ಹೊಮ್ಮಿದ್ದಾರೆ.  ಲೋಕಸಭೆಯಲ್ಲಿ ಮಿತ್ರ ಪಕ್ಷಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಇಲ್ಲದ ಸ್ಪಷ್ಟ ಬಹುಮತವು ಮೋದಿ ತಮ್ಮನ್ನು ಜಾಗತಿಕ ಮುಖಂಡನಾಗಿ ಬಿಂಬಿಸಿಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಿದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ  (ಐಎಂಎಫ್‌) ಮತ್ತಿತರ ಅಂತರರಾಷ್ಟ್ರೀಯ  ಆರ್ಥಿಕ ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷ ಮತ್ತು ಮುಂದಿನ ವರ್ಷ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 7.5ರಷ್ಟು ಇರಲಿದ್ದು, ಚೀನಾವನ್ನೂ ಹಿಂದಿಕ್ಕಲಿದೆ ಎಂದು ಅಂದಾಜು ಮಾಡಿರುವುದು ಸರ್ಕಾರದ ಪಾಲಿಗೆ ಉತ್ತೇಜನಕಾರಿಯಾಗಿದೆ.

ಎಲ್ಲ ದೇಶಗಳ ಜತೆಗಿನ ರಾಜತಾಂತ್ರಿಕ ಬಾಂಧವ್ಯ ವೃದ್ಧಿಯಲ್ಲಿಯೂ ಮೋದಿ  ಸಾಧನೆ ವಿಶಿಷ್ಟವಾಗಿದೆ. ವಿಶ್ವದ ಎಲ್ಲ ಪ್ರಮುಖ ಶಕ್ತ ರಾಷ್ಟ್ರಗಳಿಗೆ ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದುವುದರ ಪ್ರಯೋಜನಗಳನ್ನು ಮೋದಿ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಮಹತ್ವಾಕಾಂಕ್ಷೆಯ  ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಮೋದಿ, ದೇಶದಲ್ಲಿನ   ಎಲ್ಲ ನದಿಗಳಲ್ಲಿ ತುಂಬಿರುವ ಕಸ, ಮಾಲಿನ್ಯ ದೂರ ಮಾಡುವುದು ಸೇರಿದಂತೆ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ಸಿಗಬೇಕು ಎನ್ನುವ ಜಾಗೃತಿ ಮೂಡಿಸುವಲ್ಲಿಯೂ ಸಫಲರಾಗಿದ್ದಾರೆ.

ಕಡುಬಡವರಿಗೆ ನೇರವಾಗಿ ಸಬ್ಸಿಡಿ ತಲುಪಿಸಲು, ‘ಆಧಾರ್‌’ ಕಾರ್ಡ್‌ ಉಳಿಸಿಕೊಂಡಿರುವ ಮೋದಿ, ಎಲ್ಲರಿಗೂ ಆರ್ಥಿಕ ಲಾಭದ ‍ ಪ್ರಯೋಜನ ದೊರಕಿಸಲು, ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಅಂಗವಾಗಿ ಬ್ಯಾಂಕಿಂಗ್‌ ರಂಗದಲ್ಲಿ ಅನೇಕ ವಿನೂತನ ಯೋಜನೆಗಳನ್ನೂ ಕಾರ್ಯಗತಗೊಳಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿವಿಧ ದೇಶಗಳ ಪ್ರಜೆಗಳಿಗೆ ‘ಇ–ವೀಸಾ’ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.

ಸುರಕ್ಷತೆಯನ್ನೂ ಬದಿಗೊತ್ತಿ ಚೀನಾದ ನಾಗರಿಕರಿಗೂ ಈ ಸೌಲಭ್ಯ ವಿಸ್ತರಿಸಿದ್ದಾರೆ. ಇದರಿಂದ ವಿದೇಶಿ ಪ್ರವಾಸಿಗರು ಮತ್ತು ಸಾಗರೋತ್ತರ ಉದ್ದಿಮೆದಾರರು ಸುಲಭವಾಗಿ ಭಾರತಕ್ಕೆ ಭೇಟಿ ನೀಡಬಹುದಾಗಿದೆ. ಇದರಿಂದ ದೀರ್ಘಾವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆಗೆ ತುಂಬ ಪ್ರಯೋಜನ ಲಭಿಸಲಿದೆ. ಮೊಬೈಲ್‌ ತರಂಗಾಂತರ  ಮತ್ತು ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆಯ ಹರಾಜು   ಪ್ರಕ್ರಿಯೆ ಮೂಲಕ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡುವಲ್ಲಿಯೂ ಸರ್ಕಾರ ಸಫಲವಾಗಿದೆ.

ಈ ಹಿಂದಿನ ಯುಪಿಎ ಸರ್ಕಾರ, ಆಯ್ದ ಕೆಲವೇ ಕೆಲ ಸಂಸ್ಥೆಗಳಿಗೆ ಮೊಬೈಲ್‌ ತರಂಗಾಂತರ ಮತ್ತು ಬಂಡವಾಳಶಾಹಿಗಳಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡುವುದರ ಮೂಲಕ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿತ್ತು ಎನ್ನುವ ನಿವೃತ್ತ ಮಹಾಲೇಖಪಾಲ ವಿನೋದ್‌ ರೈ ಅವರ ಆರೋಪದಲ್ಲಿ ಸಾಕಷ್ಟು ಹುರುಳಿತ್ತು ಮತ್ತು   ಬೊಕ್ಕಸಕ್ಕೆ ನಯಾಪೈಸೆಯ ನಷ್ಟ ಉಂಟಾಗಿಲ್ಲ ಎನ್ನುವ ಕಾಂಗ್ರೆಸ್‌ನ  ಪ್ರತಿಪಾದನೆ ಸುಳ್ಳು ಎನ್ನುವುದು ಇದರಿಂದ ಸಾಬೀತಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರದ ಉನ್ನತ ಹಂತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂಬುದನ್ನು ಮೋದಿ   ಸಾಬೀತುಪಡಿಸಿದ್ದಾರೆ. ಸಚಿವರ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುವುದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ.  ತಮ್ಮ ಪ್ರತಿಯೊಂದು ನಡೆಯ ಮೇಲೆ ಮೋದಿ ಅವರು ಕಣ್ಣಿಟ್ಟಿರುವುದು ಕೇಂದ್ರದ ಪ್ರತಿಯೊಬ್ಬ ಸಚಿವರು ಮತ್ತು ಉನ್ನತ ಅಧಿಕಾರಿಗಳ ಅನುಭವಕ್ಕೆ ಬಂದಿದೆ. ಹೀಗಾಗಿ ಅವರೆಲ್ಲ ತುಂಬ ಎಚ್ಚರಿಕೆಯಿಂದಲೇ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.

ಗೌರವಾನ್ವಿತ ಆರ್ಥಿಕ ತಜ್ಞರಾಗಿರುವ ಸ್ವಾಮಿನಾಥನ್‌ ಅಂಕ್ಲೆಸರಿಯಾ ಅಯ್ಯರ್‌ ಅವರು ಮೋದಿ ಅವರ  ಅಭಿಮಾನಿ ಏನಲ್ಲ. ಅವರು ತಮ್ಮ   ‘ಮೋದಿ ಅವರ ಅತಿ ದೊಡ್ಡ ಸಾಹಸ: ಭ್ರಷ್ಟಾಚಾರ ಒದ್ದೋಡಿಸಿರುವುದು’ ಲೇಖನದಲ್ಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿರುವುದು ಮೋದಿ ಅವರ ಮೊದಲ  ವರ್ಷದ ಅಧಿಕಾರಾವಧಿಯಲ್ಲ್ಲಿನ ಅತಿದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಪ್ರಮುಖ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳು ಭಾಗಿಯಾಗಿರುವ ಭ್ರಷ್ಟಾಚಾರ ಪ್ರಕರಣಗಳು ಗಮನಾರ್ಹವಾಗಿ ಕುಸಿದಿವೆ ಎನ್ನುವುದರ  ಬಗ್ಗೆ ಖಚಿತವಾದ ಸಾಕ್ಷ್ಯಾಧಾರಗಳೇನೂ ಇಲ್ಲದಿರುವಾಗ ಹೀಗೆ ವಾದಿಸುವುದು ಚರ್ಚಾಸ್ಪದವಾಗಿದೆ. ಇಂತಹದೊಂದು ಅಭಿಪ್ರಾಯ ಜನಸಾಮಾನ್ಯರಲ್ಲಿಯೂ ಇದೆ. 

ಮೋದಿ ಅವರ ಕಾರ್ಯವೈಖರಿ ಬಗ್ಗೆ ದೇಶ– ವಿದೇಶಗಳಲ್ಲಿ    ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಕೆಲ ಮಟ್ಟಿಗೆ  ಕಳವಳವೂ ಕಂಡು ಬರುತ್ತಿದೆ. ಮೋದಿ ಅವರ ಸರ್ಕಾರದಲ್ಲಿ ಪ್ರತಿಭಾನ್ವಿತರ ಕೊರತೆ ಇದೆ. ಸಂಪುಟಕ್ಕೆ ಪ್ರತಿಭಾನ್ವಿತರನ್ನು ಸೇರ್ಪಡೆ ಮಾಡಿಕೊಳ್ಳುವ ವಿಷಯದಲ್ಲಿ ಮೋದಿ ಅವರಿಗೆ ಹೆಚ್ಚಿನ ಆಯ್ಕೆಗಳೇನೂ ಇಲ್ಲ. ಪ್ರಾಮಾಣಿಕತೆಯ ಕೊರತೆ ಇರುವ, ಅನುಮಾನಾಸ್ಪದ ಪೂರ್ವಾಪರ ಇರುವ ಅನೇಕರಿಗೆ ಅವರು ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿದ್ದಾರೆ. 

ಪ್ರಧಾನಿ ಕಚೇರಿಯಲ್ಲಿಯೇ ಅಧಿಕಾರ ಹೆಚ್ಚು ಕೇಂದ್ರೀಕೃತವಾಗಿದೆ.  ಸಚಿವರ ಮಟ್ಟದಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ. ಪ್ರತಿಯೊಂದು ನಿರ್ಧಾರವನ್ನು  ಪ್ರಧಾನಿ ಕಚೇರಿ ಒರೆಗೆ ಹಚ್ಚುತ್ತಿದೆ. ಸಚಿವರ ಕಾರ್ಯದರ್ಶಿಗಳು ಪ್ರಧಾನಿಯ ಪ್ರಧಾನ ಕಾರ್ಯದರ್ಶಿ ಅಥವಾ ಮೋದಿ ಅವರಿಗೆ ವರದಿ ಮಾಡಿಕೊಳ್ಳುತ್ತಾರೆ ಎನ್ನುವ ಅಭಿಪ್ರಾಯವೂ ಎಲ್ಲೆಡೆ ಇದೆ.

ವಿದೇಶಗಳಲ್ಲಿ ಭಾರತದ ಬಗೆಗಿನ ಪರಿಕಲ್ಪನೆ ಬದಲಾಗಿದೆ. ಉದ್ದಿಮೆ ವಹಿವಾಟಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು  ಮೋದಿ ಅವರು ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಭಾರತ ಈಗಲೂ ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲಕರವಲ್ಲದ, ಉದ್ಯಮ ಸ್ನೇಹಿಯಾಗಿರದ ದೇಶವಾಗಿಯೇ ಉಳಿದಿದೆ. 

ನಿಯಮಗಳು, ನಿಯಂತ್ರಣ ಕ್ರಮಗಳು ಮತ್ತು ‘ಉದ್ಯಮ ಸ್ನೇಹಿ’  ವಾತಾವರಣ ಕಲ್ಪಿಸಲು ತಲೆಕೆಡಿಸಿಕೊಳ್ಳದ ಕುಖ್ಯಾತ ಅಧಿಕಾರಶಾಹಿಯ ದುರ್ವರ್ತನೆಯ ಫಲವಾಗಿ ಯೋಜನೆಗಳಿಗೆ ಅನುಮತಿ ಪಡೆದುಕೊಳ್ಳುವುದು ಉದ್ಯಮಿಗಳ ಪಾಲಿಗೆ ಈಗಲೂ ದುಃಸ್ವಪ್ನವಾಗಿ ಕಾಡುತ್ತಿದೆ.

ಸಚಿವರ ಮಟ್ಟದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೂ, ಜನಸಾಮಾನ್ಯರ ವಿಷಯದಲ್ಲಿ ಹೇಳುವುದಾದರೆ, ಕೇಂದ್ರ ಮತ್ತು ಬಿಜೆಪಿ ಆಡಳಿತ ಇರುವುದೂ  ಸೇರಿದಂತೆ ಯಾವುದೇ ರಾಜ್ಯಗಳಲ್ಲಿ ಹೆಚ್ಚಿನ  ಬದಲಾವಣೆ ಕಂಡು ಬಂದಿಲ್ಲ. ಸುಲಭವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು, ಉದ್ದಿಮೆ ವಹಿವಾಟು ನಡೆಸಲು ಅಗತ್ಯವಾದ ಪರಿಸರ ಕಲ್ಪಿಸುವ ವಿಷಯದಲ್ಲಿ ವಿಶ್ವಬ್ಯಾಂಕ್‌ ಸಿದ್ಧಪಡಿಸಿದ ಪಟ್ಟಿಯಲ್ಲಿ ಭಾರತ ಅತ್ಯಂತ ಕೆಳಮಟ್ಟದಲ್ಲಿ (147ನೇ ರ್‍ಯಾಂಕ್‌) ಇದೆ. 

ಭ್ರಷ್ಟಾಚಾರ ಸೂಚ್ಯಂಕ ವಿಷಯದಲ್ಲಿಯೂ  ಇದೇ ಮಟ್ಟದಲ್ಲಿ ಇದೆ. ಈ ಎರಡೂ ವಿಷಯಗಳ ರ್‍ಯಾಂಕ್‌ ವಿಷಯದಲ್ಲಿ ಭಾರತ 50ನೇ ಸ್ಥಾನದಲ್ಲಿ ಇರಬೇಕು ಎನ್ನುವುದು ಮೋದಿ ಅವರ ಆಶಯವಾಗಿದೆ. ‘ಭಾರತದಲ್ಲಿಯೇ ತಯಾರಿಸಿ’ ಘೋಷಣೆಗೆ ಪೂರಕವಾಗಿ ಸರಕುಗಳ ತಯಾರಿಕೆ ರಂಗದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಮೋದಿ  ಸಾಕಷ್ಟು ಉತ್ತೇಜನ ನೀಡಿದ್ದರೂ, ವಾಸ್ತವದಲ್ಲಿ ಎಫ್‌ಡಿಐ ಶೇ ಒಂದರಷ್ಟೂ ಹೆಚ್ಚಾಗಿಲ್ಲ.

‘ಪ್ರಧಾನಿ ಮೋದಿ ಅವರು ಒಂದು ವರ್ಷದಲ್ಲಿ 17 ದೇಶಗಳನ್ನು ಸುತ್ತಿ ರಾಜತಾಂತ್ರಿಕ ಬಾಂಧವ್ಯ ಬೆಸೆಯುವಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಈಗ ಭಾರತವನ್ನು ಮುನ್ನಡೆಸುವ ನಿಟ್ಟಿನಲ್ಲಿ ವೈಯಕ್ತಿಕ ಗಮನ ನೀಡಿ, ತಮ್ಮೆಲ್ಲ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕಾಗಿದೆ’ ಎಂದು  ಟೈಮ್‌ ಮತ್ತು ಫಾರ್ಚೂನ್‌ ನಿಯತಕಾಲಿಕೆಗಳ ಹಿಂದಿನ ಹಿರಿಯ ಪತ್ರಕರ್ತ ಜಾನ್‌ ಎಲಿಯಟ್‌  ಅಭಿಪ್ರಾಯಪಟ್ಟಿರುವುದನ್ನು ಮೋದಿ ಅವರು ಗಮನಿಸಿರುವರೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry