ತೊಗರಿ ಸಸಿಯಿಂದ ಉತ್ತಮ ಇಳುವರಿ

ಬುಧವಾರ, ಜೂಲೈ 17, 2019
28 °C

ತೊಗರಿ ಸಸಿಯಿಂದ ಉತ್ತಮ ಇಳುವರಿ

Published:
Updated:

ಗುಲ್ಬರ್ಗ: ಪ್ರಕೃತಿದತ್ತವಾಗಿಯೇ ಈ ಭಾಗದಲ್ಲಿ ದ್ವಿದಳಧಾನ್ಯ ಬೆಳೆಯಲು ಸಾಕಷ್ಟು ಅನುಕೂಲವಿದೆ. ಈಚೆಗೆ ಅಭಿವೃದ್ಧಿ ಪಡಿಸಿರುವ ತೊಗರಿ ಸಸಿ ನಾಟಿಯಿಂದ ರೈತರು ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ ಎಂದು ರಾಜ್ಯ ಕೃಷಿ ಮಿಷನ್ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಶನಿವಾರ ಇಲ್ಲಿ ಹೇಳಿದರು.ಗುಲ್ಬರ್ಗದ ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ರಾಯಚೂರು ಕೃಷಿ ವಿವಿ ಸಹಯೋಗದಲ್ಲಿ ಆಯೋಜಿಸಿರುವ ದ್ವಿದಳಧಾನ್ಯ ಬೆಳೆಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ನಾಲ್ಕು, ಆರು ಅಡಿ ಅಂತರದಲ್ಲಿ ತೊಗರಿ ಸಸಿ ನೆಟ್ಟು ರೈತರು ಈಗಾಗಲೇ ಅಧಿಕ ಇಳುವರಿ ತೆಗೆದಿದ್ದಾರೆ. ಬೀದರ್‌ನಲ್ಲಿ ಈ ಸಲ ಆರು ಸಾವಿರದಿಂದ ಏಳು ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಸಸಿ ನೆಡಲಾಗುತ್ತಿದೆ. ಗುಲ್ಬರ್ಗದಲ್ಲಿ ಎಂಟು ನೂರರಿಂದ ಒಂದು ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಸಸಿ ನೆಡಲಾಗುವುದು ಎಂದು ತಿಳಿಸಿದರು.ಒಂದು ಎಕರೆ ಭೂಮಿಗೆ ಎರಡರಿಂದ ಮೂರು ಸಾವಿರ ಸಸಿಗಳನ್ನು ನೆಡಬೇಕಾಗುತ್ತದೆ. ಒಂದು ಎಕರೆಗೆ ಬೇಕಾಗುವ ಬೀಜದ ವೆಚ್ಚಕ್ಕೆ ಹೋಲಿಸಿದರೆ, ಇದು ಅಗ್ಗವಾಗಿದೆ. ಎಕರೆಗೆ ಎಂಟು ಕ್ವಿಂಟಾಲ್ ತೊಗರಿ ಬೆಳೆದ ರೈತರಿದ್ದಾರೆ. ಹುಮನಾಬಾದ್‌ನಲ್ಲಿ ಪಿಯುಸಿ ಫೇಲ್ ಆಗಿ ಕೃಷಿ ಮಾಡುತ್ತಿರುವ ಬಿರಾದಾರ ಎನ್ನುವ ರೈತ, ಈ ಸಾಧನೆ ಮಾಡಿದ್ದಾರೆ ಎಂದರು.ಸದ್ಯ ಗುಲ್ಬರ್ಗ ಜಿಲ್ಲೆಯಲ್ಲಿ ಸರಾಸರಿ ಎಕರೆಗೆ ಮೂರು ಕ್ವಿಂಟಾಲ್ ತೊಗರಿ ಬೆಳೆಯಲಾಗುತ್ತಿದೆ. ಈ ಪ್ರಮಾಣವನ್ನು ಎಂಟು ಕ್ವಿಂಟಾಲ್‌ಗೆ ಒಯ್ಯಬೇಕಿದೆ. ಈ ಸಲ ಅತಿಹೆಚ್ಚು ತೊಗರಿ ಫಸಲು ಬಂದಿದ್ದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಯಾವುದು ಅಧಿಕವಾಗಿ ಪೂರೈಕೆಯಾಗುತ್ತದೆ, ಆ ಉತ್ಪಾದನೆಯ ದರ ಕಡಿಮೆಯಾಗುವುದು ಸಹಜ ಎಂದು ತಿಳಿಸಿದರು.`ಭೂ ಚೇತನ ಯೋಜನೆ~ ಅಡಿಯಲ್ಲಿ ಕೃಷಿ ಕೈಗೊಂಡು ಅಧಿಕ ಇಳುವರಿ ಪಡೆದುಕೊಂಡಿದ್ದ ವಿವಿಧ ಜಿಲ್ಲೆಗಳ ರೈತರು ಅನಿಸಿಕೆ ವ್ಯಕ್ತಪಡಿಸಿದರು.ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸಂದೀಪ ದವೆ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ಎ. ಪಾಟೀಲ, ಕೃಷಿ ಇಲಾಖೆ ಆಯುಕ್ತ ಡಾ. ಬಾಬುರಾವ ಮುಡಬಿ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ಡಾ. ಎಸ್.ಬಿ. ಮುದ್ಗಲ್, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ಹಾಗೂ ಎನ್‌ಸಿಡಿಎಕ್ಸ್ ಅಧಿಕಾರಿ ರಮೇಶ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry