ಕನ್ನಡಕ್ಕೆ ಕಸುವು ತುಂಬಿದ ಕುಸನೂರ

ಮಂಗಳವಾರ, ಜೂಲೈ 23, 2019
20 °C

ಕನ್ನಡಕ್ಕೆ ಕಸುವು ತುಂಬಿದ ಕುಸನೂರ

Published:
Updated:

ಗುಲ್ಬರ್ಗ: ಅಸಂಗತ ನಾಟಕಗಳನ್ನು ಮೊದಲಿಗೆ ಬರೆದವರು, ಹೈಕು ಕಾವ್ಯರೂಪವನ್ನು ಪರಿಚಯಿಸಿದವರು. ಉತ್ತಮ ಅನುವಾದಕರು, ಚಿತ್ರ ವಿಮರ್ಶಕರೂ ಆಗಿರುವ ಚಂದ್ರಕಾಂತ ಕುಸನೂರ. ವಿಶಿಷ್ಟ ಪ್ರಯೋಗಗಳಿಂದ ಆಧುನಿಕ ಕನ್ನಡ ಕಾವ್ಯ, ಕಥೆ, ನಾಟಕ ಕ್ಷೇತ್ರಕ್ಕೆ ಕಸುವು ತುಂಬಿದವರು. ಇಂದಿನಿಂದ ನಡೆಯಲಿರುವ ಅವಿಭಜಿತ ಗುಲ್ಬರ್ಗ ಜಿಲ್ಲೆಯ 12ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.ಗುಲ್ಬರ್ಗದಲ್ಲಿ 1931ರಲ್ಲಿ ಜನಿಸಿದ ಚಂದ್ರಕಾಂತ ಕುಸನೂರ. ಮಾತೃ ಭಾಷೆ ಕನ್ನಡವಾದರೂ ಪ್ರಾಥಮಿಕ ಶಾಲೆಯಿಂದ ಹಿಡಿದು ಬಿ.ಎ ವರೆಗೆ ಓದಿದ್ದು ಉರ್ದು ಮಾಧ್ಯಮದಲ್ಲಿ. ಎಂ.ಎ.ಪಡೆದಿದ್ದು ಹಿಂದಿ ಸಾಹಿತ್ಯದಲ್ಲಿ. ಬಿ.ಎಡ್ ಗಳಿಸಿದ್ದು ಇಂಗ್ಲಿಷ್‌ನಲ್ಲಿ.ಪ್ರಾಥಮಿಕ ಶಾಲಾ ಶಿಕ್ಷಕನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕನವರೆಗೆ ವೃತ್ತಿ ಪೂರೈಸಿದರು. ಹಿಂದಿ ಭಾಷೆಯಿಂದ ಬರವಣಿಗೆ ಆರಂಭಿಸಿದ್ದರೂ, ನಂತರದ ದಿನಗಳಲ್ಲಿ ಕನ್ನಡದೆಡೆಗೆ ಹೊರಳಿ ನೋಡುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶದ ಸಾಂಸ್ಕೃತಿಕ ನಾದ, ಲಯ ಬೆಳಗಿಸಿದರು.ಕುಸನೂರ ವ್ಯಕ್ತಿತ್ವ ವಿಶೇಷವೆಂದರೆ ಕನ್ನಡ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್‌ಗಳಲ್ಲಿ ಸಮಾನ ಪ್ರಭುತ್ವ ಪಡೆದಿರುವುದು. ಅಸಂಗತ ನಾಟಕ ಪರಂಪರೆಗೆ ನಾಂದಿ ಹಾಡಿದ ಕುಸನೂರರ ಮೊದಲು ಪ್ರಕಟವಾದ ಕೃತಿ ನಾಟಕವಲ್ಲ. ಕವನ ಸಂಕಲನ ನಂದಿಕೋಲು (1967). ಆಮೇಲೆ ಬರೆದದ್ದು ಕಾದಂಬರಿ ಯಾತನಾ ಶಿಬಿರ.

ಬೇರೆ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸುತ್ತಿದ್ದ ಕುಸನೂರ ಕನ್ನಡದಲ್ಲಿ ಕೃತಿ ರಚಿಸಲಾರಂಭಿಸಿದ್ದು ಅಪೂರ್ವ ಸನ್ನಿವೇಶ. ಹಿಂದಿ ಪ್ರಚಾರ ಸಭಾದವರು ಗೋಲ್ಡನ್ ಜ್ಯುಬಿಲಿ ಸಲುವಾಗಿ ಧಾರವಾಡಲ್ಲಿ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ನಡೆದ ಕವಿ ಸಮ್ಮೇಳನಕ್ಕೆ  ದ.ರಾ. ಬೇಂದ್ರೆ ಅಧ್ಯಕ್ಷರು. ಕುಸನೂರ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದು ಹಿಂದಿ ಕವಿಯಾಗಿ !. ಕವಿತೆಯನ್ನು ಬಹಳವಾಗಿ ಮೆಚ್ಚಿದ ಬೇಂದ್ರೆ, `ನಿನ್ನ ಮಾತೃ ಭಾಷೆ ಯಾವುದು?~ ಎಂದು ಪ್ರಶ್ನಿಸಿದ್ದಕ್ಕೆ ಕುಸನೂರರು `ಕನ್ನಡ~ ಎಂದರು. `ಮತ್ತ ಕನ್ನಡದಾಗ ಯಾಕ ಕವಿತಾ ಬರಿಯೋದಿಲ್ಲ ? ಇನ್ ಮ್ಯಾಲೆ ಕನ್ನಡದಲ್ಲಿ ಕವಿತಾ ಬರಿ ಅಂದ್ರು~. `ಆಯ್ತು ಪ್ರಯತ್ನ ಮಾಡ್ತೀನಿ~ ಎಂದು ಕುಸನೂರ ನೀಡಿದ ಉತ್ತರ.ಕನ್ನಡದಲ್ಲಿ ಬರೆಯುವ ಬಗ್ಗೆ ಕುಸನೂರರಿಗೆ ಇದ್ದ ಅಳುಕನ್ನು ನಿವಾರಿಸಿದವರು ಸಿದ್ಧಲಿಂಗ ಪಟ್ಟಣಶೆಟ್ಟರು. ಏನಾದರೂ ಬರೆದು ಕೊಡುವಂತೆ ಶೆಟ್ಟರು ಒತ್ತಾಯಿಸಿದ್ದರ ಫಲವೇ ಅಸಂಗತ ಮತ್ತು ಜಪಾನಿನ ಹೈಕುಗಳು. ಶಾಂತರಸರ ಪರಿಚಯ ಮತ್ತು ಆತ್ಮೀಯತೆ ಹೆಚ್ಚಾಗಿ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿತು ಎನ್ನುತ್ತಾರೆ ಕುಸನೂರ.ಚಿತ್ರಕಲೆ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಕುಸನೂರ ಭಾಷಾಂತರದಲ್ಲಿ ಸಿದ್ಧಹಸ್ತರು. ಡಾ. ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಮತ್ತು ಆಲನಹಳ್ಳಿ ಕೃಷ್ಣ ಅವರ ಕಾಡು ಕಾದಂಬರಿಯನ್ನು ಹಿಂದಿಗೆ ಅನುವಾದಿಸಿದ ಹಿರಿಮೆ ಅವರದು.ನಂದಿಕೋಲು, ಕನಸು, ಹಳ್ಳಾಕೊಳ್ಳಾ ನೀರು, ಮೂರು ಅಸಂಗತ ನಾಟಕ, ಬೆಕ್ಕು ಮತ್ತು ಇತರ ಕಥೆಗಳು, ಗೋಹರಜಾನ ಮಾಲತಿ ಮತ್ತು ನಾನು, ಕಲೆ ಅನುಭವ ಮತ್ತು ಅನುಭಾವ ಮುಂತಾದ ಕಾವ್ಯ, ನಾಟಕ, ಕಾದಂಬರಿ, ಕಥೆ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಈವರೆಗೆ ಒಟ್ಟು 36 ನಾಟಕ, 5 ಕಾದಂಬರಿ, 2 ಕಥಾ ಸಂಕಲನ, 1 ಕವನ ಸಂಕಲನ, 3 ಕಲಾ ವಿಮರ್ಶೆ, 2 ಅನುವಾದ, 2 ಹಿಂದಿ ಕೃತಿಗಳನ್ನು ರಚಿಸಿದ್ದಾರೆ.ಸಂಸ್ಕಾರ ಕಾದಂಬರಿ ಹಿಂದಿ ಅನುವಾದಕ್ಕಾಗಿ ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಪ್ರತಿಷ್ಠಾನದ ಬಹುಮಾನಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ನಾಟಕ ಆಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಕೀರ್ತಿ ಕುಸನೂರ ಅವರದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry