‘ಹೋಲಿ ಏಂಜೆಲ್ಸ್‌’ಗೆ 30ರ ಸಂಭ್ರಮ

7

‘ಹೋಲಿ ಏಂಜೆಲ್ಸ್‌’ಗೆ 30ರ ಸಂಭ್ರಮ

Published:
Updated:
Prajavani

ಗುಣಾತ್ಮಕ ಶಿಕ್ಷಣದ ಗುರಿಯೊಂದಿಗೆ ಸ್ಥಾಪನೆಯಾದ ಹಂಪಿನಗರದ ಹೋಲಿ ಏಂಜೆಲ್ಸ್‌ ಶಿಕ್ಷಣ ಸಂಸ್ಥೆಗೀಗ 30ರ ಸಂಭ್ರಮ. ಸಂಸ್ಥೆ ತನ್ನ ಬೆಳ್ಳಿಹಬ್ಬ ಪೂರೈಸಿ 30ನೇ ವರ್ಷ ಕಾಲಿಟ್ಟ ಸಂಭ್ರಮವನ್ನು ಸ್ಮರಣೀಯಗೊಳಿಸಲು ‘ಸಂಸ್ಕೃತಿ–2019’ ಎಂಬ ಸಾಂಸ್ಕೃತಿಕ ನೃತ್ಯೋತ್ಸವ ಹಮ್ಮಿಕೊಂಡಿದೆ.

1989ರಲ್ಲಿ ರಾಜ್ಯ ಪಠ್ಯಕ್ರಮ ಒಳಗೊಂಡ ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದವರು ಟಿ. ಪುರುಷೋತ್ತಮ್. ಅವರೀಗ ಶಾಲೆಯ ಅಧ್ಯಕ್ಷರು.

30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸು
ತ್ತಿರುವ ಈ ಹೋಲಿ ಏಂಜೆಲ್ಸ್ ಸಂಸ್ಥೆ ಪ್ರಾರಂಭದಲ್ಲಿ ಒಂದು ಸಣ್ಣ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತ್ತು. ಅತ್ಯಲ್ಪಾವಧಿಯಲ್ಲಿಯೇ ಅದು ಹಂಪಿನಗರ, ವಿಜಯನಗರ, ದೀಪಾಂಜಲಿನಗರ, ಅತ್ತಿಗುಪ್ಪೆ, ಚಂದ್ರಾಬಡಾವಣೆ, ಮೂಡಲಪಾಳ್ಯ, ಅಮರಜ್ಯೋತಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಸಿದ್ಧಿಯಾಯಿತು. ಇಲ್ಲಿನ ಗುಣಮಟ್ಟದ ಶಿಕ್ಷಣದಿಂದ ಹೆಚ್ಚಿನ ಜನರು ತಮ್ಮ ಮಕ್ಕಳನ್ನು ದಾಖಲಿಸಿದರು. ಇದರ ಪರಿಣಾಮ ಈ ಶಾಲೆ ಇಂದು ಸುಮಾರು ನಾಲ್ಕು ಅಂತಸ್ತಿನ ಎಂಟು ಕಟ್ಟಡಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿದೆ.

ಕೇವಲ 90 ವಿದ್ಯಾರ್ಥಿಗಳಿಂದ ಆರಂಭವಾದ ರಾಜ್ಯಪಠ್ಯಕ್ರಮದ ಈ ಶಾಲೆಯಲ್ಲೀಗ 3,500 ವಿದ್ಯಾರ್ಥಿಗಳಿದ್ದಾರೆ. 2003ರಲ್ಲಿ ಐಸಿಎಸ್‌ಇ ಪಠ್ಯಕ್ರಮವನ್ನೂ ಇಲ್ಲಿ ಪರಿಚಯಿಸಿದ್ದು, ಅಲ್ಲೀಗ 2,500ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಒಟ್ಟಾರೆ ಈ ಶಿಕ್ಷಣ ಸಂಸ್ಥೆಯಲ್ಲಿ ಈಗ ಸುಮಾರು 6,000 ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆಯ ಬೆಳವಣಿಗೆಯಲ್ಲಿ ಶಾಲೆಯ ಕಾರ್ಯದರ್ಶಿ ಪಾರ್ವತಿ ಪುರುಷೋತ್ತಮ್‌ ಅವರ ಪಾತ್ರವೂ ಪ್ರಮುಖವಾದದ್ದು.

ರಾಜ್ಯಪಠ್ಯಕ್ರಮ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ 10ನೇ ತರಗತಿಗೆ ಪ್ರತಿ ವರ್ಷವೂ ಉತ್ತಮ ಫಲಿತಾಂಶ ಶಾಲೆಗೆ ಬರುತ್ತಿದೆ. ಈ ವರ್ಷವೂ ಇದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ ಪಿ. ಲೋಕೇಶ್‌ ಮತ್ತು ನಿರ್ದೇಶಕ ಪಿ. ಚಂದ್ರಮೋಹನ್‌.

ಸ್ವತಂತ್ರವಾಗಿ ವಿಚಾರ ಮಾಡುವ, ಸ್ವತಂತ್ರವಾಗಿ ಬರೆಯುವ ಮತ್ತು ಸ್ವತಂತ್ರವಾಗಿ ಮಾತನಾಡುವ ಸಾಮರ್ಥ್ಯವನ್ನು ವೃದ್ಧಿಸುವುದೇ ನಮ್ಮ ಸಂಸ್ಥೆಯ ಧ್ಯೇಯ ಎನ್ನುತ್ತಾರೆ ಲೋಕೇಶ್‌.

ಇಲ್ಲಿನ ಶಾಲೆಯ ಶಿಕ್ಷಕರಲ್ಲಿ ಉತ್ತಮ ಬೋಧನಾ ಕೌಶಲ, ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ, ನಿರಂತರ ಅಧ್ಯಯನ ಕಾರ್ಯಗತವಾಗುವಂತೆ ಮಾಡುವಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಿ. ರಾಧಿಕಾ ಅವರ ಪಾತ್ರ ಅಪಾರ.

ವರ್ಷ ಪೂರ್ತಿ ನಾನಾ ಚಟುವಟಿಕೆಗಳು ನಿರಂತರವಾಗಿ ಶಾಲಾ ಆವರಣದಲ್ಲಿ ನಡೆದು
ಕೊಂಡು ಬರುತ್ತಿವೆ. ಇವು ವಿದ್ಯಾರ್ಥಿಗಳ ಬೆಳವಣಿಗೆಗೆ, ಕ್ರಿಯಾತ್ಮಕ ಚಿಂತನೆಗೆ ಪೂರಕವಾಗಿವೆ. ಮಾನವೀಯತೆ, ಪ್ರೀತಿ, ವಾತ್ಸಲ್ಯ, ಮಮತೆ, ಅನುಕಂಪದೊಂದಿಗೆ ಶಿಸ್ತು, ಏಕಾಗ್ರತೆ, ಜವಾಬ್ದಾರಿ ಹೀಗೆ ಎಲ್ಲದರ ಸಮತೋಲನ ಇಲ್ಲಿದೆ. ಶಾಲೆಯಲ್ಲಿ ಮಕ್ಕಳ ಮನಸ್ಸು ಕಟ್ಟುವ ಕೆಲಸವೂ ಆಗುತ್ತಿದೆ. ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಿಗೂ ಶಾಲೆಯಲ್ಲಿ ಆದ್ಯತೆ ನೀಡಲಾಗಿದೆ. ವಿವಿಧ ಹಂತದ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ, ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಎನ್‌ಸಿಸಿಯ ಮೊದಲ ಬ್ಯಾಚ್‌ (2013) ವಿದ್ಯಾರ್ಥಿಗಳು ‘ಎ’ ದರ್ಜೆಯ ಪ್ರಮಾಣ ಪತ್ರ ಪಡೆದಿದ್ದಾರೆ.

ಬಡವರಿಗೆ, ಅನಾಥರಿಗೆ, ಅಂಗವಿಕಲರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸ್ಥಾಪನೆಗೊಂಡಿರುವ ಐ.ಡಿ.ಎಫ್‍ಗೆ (ಇಂಡಿಯನ್ ಡೆವಲಪ್‍ಮೆಂಟ್ ಫೌಂಡೇಷನ್) ವಿದ್ಯಾರ್ಥಿಗಳು ಪ್ರತಿವರ್ಷ ಸಾಕಷ್ಟು ಹಣವನ್ನು ಸಂಗ್ರಹಿಸಿ ನೀಡುತ್ತಿದ್ದಾರೆ.

ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪ್ರಸಿದ್ಧ ಕೃಷ್ಣ ಅಂತರರಾಷ್ಟ್ರೀಯ ಮಟ್ಟದ ಈಜು ಸ್ಫರ್ಧೆಯಲ್ಲಿ ಸ್ಪರ್ಧಿಸಿ ಎರಡು ಬಾರಿ ಪ್ರಥಮ ಬಹುಮಾನವನ್ನು ಪಡೆದಿದ್ದಾನೆ. ವಿವಿಧ ರಾಜ್ಯಗಳಲ್ಲಿನ ಈಜು ಸ್ಫರ್ಧೆಯಲ್ಲಿ ಸ್ಪರ್ಧಿಸಿ ಮೂರು ಬಾರಿ ಪ್ರಥಮ ಬಹುಮಾನವನ್ನು ಪಡೆದಿದ್ದಾನೆ. ಒಟ್ಟಾರೆ ಇಲ್ಲಿಯ ತನಕ 37 ಚಿನ್ನದ ಪದಕ, 14 ಬೆಳ್ಳಿ ಪದಕ, 12 ಕಂಚಿನ ಪದಕಗಳನ್ನು ಒಟ್ಟು 63 ಪದಗಳನ್ನು ಪಡೆದುಕೊಳ್ಳುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ ಎನ್ನುತ್ತಾರೆ ಶಾಲೆಯ ನಿರ್ದೇಶಕ ಪಿ. ಚಂದ್ರಮೋಹನ್‌.‌

ಏಳನೇ ತರಗತಿ ವಿದ್ಯಾರ್ಥಿ ಮಹಮದ್‌ ಶೋಯೆಬ್‌ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾನೆ. ಇಲ್ಲಿಯವರೆಗೆ 24 ಸಿನಿಮಾಗಳಲ್ಲಿ ಅಭಿನಯಿಸಿ ‘ಹರಿವು’ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮತ್ತು ಸೀಮಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ.  9ನೇ ತರಗತಿ ವಿದ್ಯಾರ್ಥಿ ಯದುನಂದನ್ ಎನ್.ಸಿ.ಸಿ ಕೆಡೆಟ್ ಆಗಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದ ಎನ್.ಸಿ.ಸಿ ಪೆರೇಡ್‍ನಲ್ಲಿ ಐ.ಜಿ.ಸಿ (ಇಂಟರ್ ಗ್ರೂಪ್ ಕಾಂಪಿಟೇಷನ್) ಹಂತವನ್ನು ಪೂರ್ಣಗೊಳಿಸಿರುವುದು ಸಂತೋಷದ ವಿಷಯ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಶಾಲೆಯಲ್ಲಿ ಪ್ರತಿವರ್ಷ ವಿಜ್ಞಾನ ವಸ್ತು ಪ್ರದರ್ಶನ, ಕ್ರೀಡೋತ್ಸವ ನಡೆಯುತ್ತದೆ. ನವೆಂಬರ್‌ನಲ್ಲಿ ‘ವಿನಯಸದರ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳ ಕೌಶಲಗಳನ್ನು ಪ್ರದರ್ಶಿಸಲಾಗುತ್ತದೆ. ಕರವಸ್ತ್ರ ತಯಾರಿಕೆ, ಪಾಟ್ ಪೇಂಟಿಂಗ್‌, ವೆಜಿಟೇಬಲ್ ಕಾರ್ವಿಂಗ್, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಫರ್ಧೆ, ಚರ್ಚಾಸ್ಪರ್ಧೆ ಇನ್ನಿತರ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ.

ಶಾಲೆಯು ಉತ್ತಮ ಕಟ್ಟಡ, ಬೋಧನಾ ಕೊಠಡಿಗಳು, ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ತಜ್ಞ ಬೋಧಕರನ್ನು ಒಳಗೊಂಡಿದೆ. ಇದರಿಂದಾಗಿ ಶಾಲೆಯ ಫಲಿತಾಂಶ ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಾ ಸಾಗಿದೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯನ್ನು ಆರಂಭಿಸುವ ಉದ್ದೇಶವನ್ನೂ ಶಾಲಾ ಆಡಳಿತ ಮಂಡಳಿ ಹೊಂದಿದೆ. 

ಎರಡು ದಿನಗಳ ನೃತ್ಯೋತ್ಸವ

ಇದು ಎರಡು ದಿನಗಳ (ಇದೇ 19, 20) ಕಾರ್ಯಕ್ರಮವಾಗಿದ್ದು, ಶಾಲಾ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ವಿವಿಧ ನೃತ್ಯ ಪ್ರಕಾರಗಳನ್ನು ಸಂಯೋಜಿಸಿ ಪ್ರದರ್ಶನ ನೀಡುವರು. ಇದೇ 19ರಂದು ಉತ್ಸವವನ್ನು ಡಿಸಿಪಿ ರವಿ ಡಿ. ಚನ್ನಣ್ಣನವರ್‌ ಉದ್ಘಾಟಿಸುವರು. ಶಾಸಕ ಎಂ. ಕೃಷ್ಣಪ್ಪ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವರು. ಇದೇ 20ರಂದು ನಡೆಯುವ ಕಾರ್ಯಕ್ರಮವನ್ನು ಬಿಬಿಎಂಪಿ ಸದಸ್ಯ ಆನಂದ್‌ ಸಿ. ಹೊಸೂರು ಉದ್ಘಾಟಿಸುವರು. ಅತಿಥಿಯಾಗಿ ಪಾಲ್ಗೊಳ್ಳುವ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ ಹೆಗ್ಡೆ ಬಹುಮಾನ ವಿತರಿಸುವರು. ಎರಡೂ ದಿನ ಸಂಜೆ 4.30 ಗಂಟೆಗೆ ಉತ್ಸವ ಆರಂಭವಾಗಲಿದೆ.

ಸ್ಥಳ: ಕ್ರೀಡಾಂಗಣ, ಬಸ್‌ ನಿಲ್ದಾಣದ ಹಿಂಭಾಗ, ಹಂಪಿನಗರ, ವಿಜಯನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !