ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ

ಬುಧವಾರ, ಜೂಲೈ 17, 2019
24 °C

ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಯವರ ಆಪ್ತ ಸಹಾಯಕ ಶ್ರೀಮಂತ ಪಟ್ಟೇದಾರವರ ಮೇಲೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿ ತಲೆಮರೆಸಿಕೊಂಡು 12 ದಿನಗಳು ಗತಿಸಿವೆ.

 

ದೌರ್ಜನ್ಯಕೋರರನ್ನು ಪೊಲೀಸರು ಬಂಧಿಸದೆ ರಾಜಕೀಯ ಲಾಬಿಗೆ ಬಲಿಯಾಗಿ ಪಾಟೀಲರನ್ನು ಸಹಕರಿಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಹನುಮಂತ ಜಿ.ಯಳಸಂಗಿ ಇಲ್ಲಿ ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಕಾನೂನಿಗೆ ಗೌರವ ಕೊಡದೆ ಪೊಲೀಸರಿಗೆ ಚಳ್ಳೆಹಳ್ಳು ತಿನ್ನಿಸುತ್ತಿರುವ ಅಮರನಾಥ ಪಾಟೀಲರನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು.ಜಿಲ್ಲಾಡಳಿತವು ಬಿ ರಿಪೋರ್ಟ್ ಹಾಕುವ ಮೂಲಕ ಈ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ. ಈ ರೀತಿ ಕ್ರಮ ಕೈಗೊಂಡರೆ ದಲಿತ ಸಮನ್ವಯ ಸಮಿತಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಿರಂತರ ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾದ ಜಿಲ್ಲಾಧಿಕಾರಿಗಳು ಇವುಗಳಿಗೂ ತಮಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.ವೀರಶೈವ ಸಮಾಜದವರು ಜಾತಿ ವೈಷಮ್ಯದಿಂದ  ಪಾಟೀಲರ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರಿಗೆ ಕಾನೂನಿನ ಬಗ್ಗೆ ಗೌರವವಿದ್ದರೆ ಕೂಡಲೇ ಪಾಟೀಲರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಸಾವಯವ ಕೃಷಿ ಕಾರ್ಯಕ್ರಮಕ್ಕಾಗಿ ಜೂನ್ 25ರಂದು ಜಿಲ್ಲೆಗೆ ಬರುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.ಉದ್ದೇಶಪೂರ್ವಕವಾಗಿ ಕರ್ತವ್ಯಲೋಪ ಎಸಗುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ಅಟ್ರಾಸಿಟಿ ಕಾಯಿದೆಯಡಿ ಸ್ಟೇಶನ್ ಬಜಾರ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಅರ್ಜುನ ಭದ್ರಿ, ಮಾಪಣ್ಣ ಗಂಜಗೇರಿ, ಭೀಮರಾವ ಟಿ.ಟಿ. ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry