ಪಬ್‌ ಮೇಲೆ ದಾಳಿ: ಯುವತಿಯರ ರಕ್ಷಣೆ

7
ಲೈವ್‌ಬ್ಯಾಂಡ್‌ ಆರೋಪ: ‘ಮ್ಯಾಂಗೊ ಟ್ರೀ ಬ್ರಿಸ್ಟ್ರೊ’ದ ಆರು ಕೆಲಸಗಾರರ ಬಂಧನ

ಪಬ್‌ ಮೇಲೆ ದಾಳಿ: ಯುವತಿಯರ ರಕ್ಷಣೆ

Published:
Updated:

ಬೆಂಗಳೂರು:‌ ಎಚ್‌ಎಎಲ್‌ ಎರಡನೇ ಹಂತದಲ್ಲಿರುವ ‘ಮ್ಯಾಂಗೊ ಟ್ರೀ ಬ್ರಿಸ್ಟ್ರೊ’ ಪಬ್ ಮೇಲೆ ದಾಳಿ ನಡೆಸಿದ ಜೀವನ್‌ಬಿಮಾ ನಗರ ಪೊಲೀಸರು 32 ಯುವತಿಯರನ್ನು ರಕ್ಷಿಸಿದ್ದಾರೆ. 

ಸ್ವಾಧೀನಾನುಭವ ಪ್ರಮಾಣ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್‌) ಪಡೆಯದೆ ಪಬ್‌ನಲ್ಲಿ ಲೈವ್‌ಬ್ಯಾಂಡ್‌ (ಧ್ವನಿಮುದ್ರಿತ ಸಂಗೀತ) ನಡೆಸಲಾಗುತ್ತಿತ್ತು. ಆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಜೂನ್ 30ರಂದು ರಾತ್ರಿ ಪಬ್‌ ಮೇಲೆ ದಾಳಿ ಮಾಡಿ ಆರು ಕೆಲಸಗಾರರನ್ನು ಬಂಧಿಸಿದ್ದಾರೆ. ಮಾಲೀಕ ಪರಾರಿಯಾಗಿದ್ದಾರೆ.

ಅನಧಿಕೃತ ಲೈವ್‌ಬ್ಯಾಂಡ್‌ಗಳನ್ನು ಮುಚ್ಚಿಸುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೆ ಹೈಕೋರ್ಟ್‌ ಇತ್ತೀಚೆಗಷ್ಟೇ ನಿರ್ದೇಶನ ನೀಡಿತ್ತು. ಈ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.

‘ಮದ್ಯ ಸರಬರಾಜಿನ ನಡುವೆಯೇ ಯುವತಿಯರಿಂದ ಅರೆನಗ್ನ ನೃತ್ಯ ಮಾಡಿಸಲಾಗುತ್ತಿತ್ತು. ಅದಕ್ಕಾಗಿ 32 ಯುವತಿಯರನ್ನು ನಿಯೋಜಿಸಿಕೊಳ್ಳಲಾಗಿತ್ತು. ಬಹುಪಾಲು ಯುವತಿಯರು ಉತ್ತರ ಭಾರತದವರು. ಅವರೆಲ್ಲರನ್ನೂ ರಕ್ಷಿಸಿ ಮನೆಗೆ ಕಳುಹಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಸಂಜೆ 6 ಗಂಟೆಯಿಂದ ತಡರಾತ್ರಿಯವರೆಗೂ ಪಬ್‌ ತೆರೆದಿರುತ್ತಿತ್ತು. ನಿತ್ಯವೂ 1,500ಕ್ಕೂ ಹೆಚ್ಚು ಗ್ರಾಹಕರು ಈ ಪಬ್‌ಗೆ ಹೋಗುತ್ತಿದ್ದರು. ದಾಳಿ ವೇಳೆಯಲ್ಲೂ 100ಕ್ಕೂ ಹೆಚ್ಚು ಗ್ರಾಹಕರು ಇದ್ದರು. ಕೆಲವರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಅವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಮಾಡಲಿದ್ದೇವೆ’ ಎಂದು ತಿಳಿಸಿದರು.

ಇಂದಿರಾನಗರ, ಎಂ.ಜಿ.ರಸ್ತೆ, ಕೋರಮಂಗಲ ಹಾಗೂ ಸುತ್ತಮುತ್ತಲು ಪಬ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಲೈವ್‌ಬ್ಯಾಂಡ್‌ ನಡೆಯುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಖಚಿತ ಮಾಹಿತಿ ಸಿಕ್ಕ ಕೂಡಲೇ ದಾಳಿ ಮಾಡಲಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. 

ಬಿಬಿಎಂಪಿಗೆ ಪತ್ರ: ‘ಹರೀಶ್‌ ಎಂಬುವರ ಹೆಸರಿನಲ್ಲಿ ಪರವಾನಗಿ ಪಡೆದು ಈ ಪಬ್‌ ನಡೆಸಲಾಗುತ್ತಿದೆ. ಅದರ ಅಸಲಿ ಮಾಲೀಕರು ಬೇರೆಯವರಿದ್ದಾರೆ. ಅವರು ಯಾರು ಎಂಬುದನ್ನು ತಿಳಿಯಲು ಬಿಬಿಎಂಪಿಗೆ ಪತ್ರ ಬರೆದಿದ್ದೇವೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ಶಾಸಕರ ಪುತ್ರನ ಒತ್ತಡ
ಪಬ್ ಮೇಲೆ ದಾಳಿ ನಡೆಯುತ್ತಿದ್ದಂತೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಶಾಸಕರೊಬ್ಬರ ಪುತ್ರ, ದಾಳಿ ಬಗ್ಗೆ ವಿಚಾರಿಸಿದ್ದಾರೆ.

‘ಅದು ನನ್ನ ಸ್ನೇಹಿತನ ಪಬ್‌. ಬಂಧಿತರನ್ನು ಬಿಟ್ಟು ಬಿಡಿ’ ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು. 

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !