ಮಹಾಚೈತ್ರ ಹಾಗೆ ಬರೆಯಲು ಕಾರಣ?

7

ಮಹಾಚೈತ್ರ ಹಾಗೆ ಬರೆಯಲು ಕಾರಣ?

Published:
Updated:

ಗುಲ್ಬರ್ಗ:  ವಚನ ಚಳವಳಿಯನ್ನು ಕೆಳಸ್ತರದ ಹಿನ್ನೆಲೆಯಲ್ಲಿ ನೋಡಿ ಬರೆದೆ ವಿನಃ ನಾನು ಯಾರನ್ನೂ ನೋಯಿಸಲೆಂದು ‘ಮಹಾಚೈತ್ರ’ ನಾಟಕ ಬರೆಯಲಿಲ್ಲ... ಇದು ಖ್ಯಾತ ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ ಅವರು ನೀಡಿದ ಸ್ಪಷ್ಟನೆ.ಗುಲ್ಬರ್ಗದ ವೀರಮ್ಮ ಗಂಗಸಿರಿ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಸಮಾರಂಭದಲ್ಲಿ ಸಂವಾದಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತತ್ವಪದಕಾರರು, ವಚನ ಚಳವಳಿ, ಸೂಫಿ-ಸಂತರು, ನಾಥ ಪಂಥಗಳೇ ನನ್ನ ಕಾವ್ಯದ ಪ್ರೇರಣೆ ಎಂದು ತಿಳಿಸಿದರು. ನವ್ಯ ಕವಿಗಳಂತೆ ಇಂಗ್ಲಿಷ್‌ನಲ್ಲಿ ಇದ್ದುದನ್ನು ಭಟ್ಟಿ ಇಳಿಸದೆ, ದಲಿತ-ಬಂಡಾಯದ ಕಾವು ಬಳಸದೆ ನನ್ನದೇ ಆದ ರೀತಿಯಲ್ಲಿ ಬರವಣಿಗೆಯಲ್ಲಿ ತೊಡಗಿದ್ದರಿಂದ ವಿಭಿನ್ನವಾಗಿ ಬರೆಯಲು ಸಾಧ್ಯವಾಯಿತು. ಕೆಳಸ್ತರದ ಅನುಭಾವಗಳಿಂದ ಕೂಡಿದ ಬರವಣಿಗೆ ನನ್ನದಾದ್ದರಿಂದ ಕಾವ್ಯದ ಏಕತಾನತೆಯನ್ನು ಮೀರಲು ಸಾಧ್ಯವಾಯಿತು ಎಂದು ತಮ್ಮ ಕಾವ್ಯ ಪ್ರೇರಣೆ ಕುರಿತು ವಿವರಿಸಿದರು.ವಸ್ತುವಿನಂತೆ ಭಾಷೆ ಕೂಡ ಮುಖ್ಯ ಎಂದು ಭಾವಿಸಿದ್ದ ಬೇಂದ್ರೆ, ಕುವೆಂಪು, ಮಧುರಚನ್ನರು ನನ್ನ ಕಾವ್ಯದ ಲಯಕ್ಕೆ ಕಾರಣರು. ಅಂತಯೇ ಮುಕ್ತ ಛಂದಸ್ಸು, ಸನೀತ, ತ್ರಿಪದಿ, ಜೋಗುಳದ ಪದಗಳನ್ನು ಕೂಡ ಬರೆದಿದ್ದೇನೆ ಎಂದರು.ಮಾತೆ ಅಮೃತಾನಂದಮಯಿ ಬೆಸ್ತರ ಹೆಣ್ಣುಮಗಳು. ಒಬ್ಬ ಮಠಾಧಿಪತಿಯಾಗಿ ಬಹುದೊಡ್ಡ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದ್ದಾಳೆ. ಅವರಿಗೆ ಜಾತಿ ಬೆಂಬಲವೂ ಇಲ್ಲ. ಏಕಾಂಗಿಯಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಿರುವ ಅವರು ನನಗೆ ತುಂಬಾ ಇಷ್ಟ ಎಂದು ಅಮೃತಾನಂದಮಯಿ ಅವರ ಹತ್ತಿರ ತಾವು ಹೋಗುವುದನ್ನು ಸಮರ್ಥಿಸಿಕೊಂಡರು.ಡಾ. ಬಸವರಾಜ ಸಬರದ, ಡಾ. ಶಿವಗಂಗಾ ರುಮ್ಮಾ , ರಾವೂಫ್ ಖಾದ್ರಿ, ಡಾ. ಶಾಂತಪ್ಪ ಡಂಬಳ, ಅಮೃತಾ ಕಟಕೆ, ಕಾಶಿನಾಥ ಅಂಬಲಗಿ, ಶಂಕ್ರಯ್ಯ ಘಂಟಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಡಾ. ಈಶ್ವರಯ್ಯ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry