ಬುಧವಾರ, ಮೇ 18, 2022
25 °C

ಆಮರಣ ಉಪವಾಸ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ತಕ್ಷಣದಿಂದಲೇ ತೊಗರಿ ಖರೀದಿ ಆರಂಭಿಸಬೇಕು. ತೊಗರಿ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲ್ಲೂಕು ಜಾತ್ಯತೀತ ಜನತಾದಳ ಹಾಗೂ ತಾಲ್ಲೂಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ರೈತರು ಬೆಳೆದ ತೊಗರಿಯನ್ನು ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿಸಬೇಕು. ಸರ್ಕಾರವೇ ವಿತರಿಸಿದ ತೊಗರಿ ಬೀಜಗಳು ಕಳಪೆಯಿಂದ ಕೂಡಿದ್ದು, ರೈತರು ಬಿತ್ತಿದ ತೊಗರಿ ಬೆಳೆ ಸಂಪೂರ್ಣ ಹಾನಿಗೀಡಾಗಿದ್ದು, ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕೆಂದು ಹಿರೇಮಠ ಒತ್ತಾಯಿಸಿದ್ದಾರೆ.  ಈ ಮುಂಚೆ ಜ.12ರಿಂದ 20ರವರೆಗೆ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸಲಾಯಿತು. ಅಂದು ಶಾಸಕರು, ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ತುರ್ತು ಸಂಪುಟ ಸಭೆ ಕರೆದು ರೂ.4 ಸಾವಿರ  ಪ್ರತಿ ಕ್ವಿಂಟಲ್‌ದಂತೆ ತೊಗರಿ ಖರೀದಿಸಲಾಗುವುದೆಂದು ತಿಳಿಸಿದ್ದರು. ಆದರೆ ಜಿಲ್ಲೆಯಲ್ಲಿ ಇದುವರೆಗೂ ತೊಗರಿ ಖರೀದಿ ಕೇಂದ್ರ ಆರಂಭಿಸಿಲ್ಲ. ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ವಿತರಿಸಿಲ್ಲ.  ರಾಜ್ಯ ಸರ್ಕಾರದ ವಚನ ಭ್ರಷ್ಟ ನೀತಿ ಖಂಡಿಸಿ ಹಾಗೂ ಕ್ಷೇತ್ರದ ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆವಿರೋಧಿಸಿ ತಾವು ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಹಿರೇಮಠ ಸ್ಪಷ್ಟಪಡಿಸಿದರು. ತಹಸೀಲ್ದಾರ್ ಡಿ.ವೈ.ಪಾಟೀಲ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.  ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಾನಂದ ದ್ಯಾಮಗೊಂಡ, ಕಾರ್ಯಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ತಾಲ್ಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಸ್.ಸಲಗರ್, ಎಸ್.ಕೆ.ಹೇರೂರ, ಚಂದ್ರಶೇಖರ ಮಲ್ಲಾಬಾದ, ರಾಜಶೇಖರ ಪಾಟೀಲ, ಪ್ರಕಾಶ ಪಾಟೀಲ ಯತ್ನಾಳ, ಎ.ಬಿ.ಹಿರೇಮಠ, ಸದಾನಂದ ಪಾಟೀಲ, ಜಗಲೆಪ್ಪ ಪೂಜಾರಿ, ಸೈಯದ ಪಟೇಲ ಸೈದಾಪುರ, ಮಲ್ಲಿಕಾರ್ಜುನ ದುಮ್ಮದ್ರಿ, ಬಸವರಾಜ ಆಲೂರ, ರುದ್ರಗೌಡ ಹಾವಳಗಿ, ನೂರಾರು ರೈತರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.