ಸನ್ನತಿ ಅಂತರರಾಷ್ಟ್ರೀಯ ಬೌದ್ಧಕೇಂದ್ರ

7

ಸನ್ನತಿ ಅಂತರರಾಷ್ಟ್ರೀಯ ಬೌದ್ಧಕೇಂದ್ರ

Published:
Updated:

ಸನ್ನತಿ (ಚಿತ್ತಾಪುರ ತಾ.): ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ ಕಂಡುಬಂದಿರುವ ಬೌದ್ಧ ಸ್ತೂಪ ಹಾಗೂ ಹಾಗೂ ಇತರ ಸ್ಮಾರಕಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಕೊನೆಗೂ ‘ಮುಹೂರ್ತ’ ಕೂಡಿಬಂದಂತಾಗಿದೆ.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೈಗೊಳ್ಳಲಿರುವ ಈ ಕಾರ್ಯದಿಂದ ಸನ್ನತಿಯು ಅಂತರರಾಷ್ಟ್ರೀಯ ಬೌದ್ಧ ಕೇಂದ್ರವಾಗಿ ರೂಪುಗೊಳ್ಳಲಿದೆ.ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಜಾಮದಾರ್ ಈಚೆಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ತೂಪಗಳ ಪುನರ್‌ಸ್ಥಾಪನೆ ಹಾಗೂ ಪುನರ್‌ನಿರ್ಮಾಣದ ನೀಲನಕ್ಷೆ ರೂಪಿಸಿಕೊಡುವ ಜವಾಬ್ದಾರಿಯನ್ನು ‘ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಎಂ.ಐ.ಟಿ.) ತಜ್ಞರ ತಂಡಕ್ಕೆ ವಹಿಸಲಾಗಿದೆ. ಈ ಸಂಬಂಧ ತಜ್ಞರು ಈಗಾಗಲೇ ನೀಲನಕ್ಷೆ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಮುಂದಿನ ತಿಂಗಳ ಅಂತ್ಯಕ್ಕೆ ಎಂ.ಐ.ಟಿ. ತಜ್ಞರು ತಮ್ಮ ವಿಸ್ತೃತ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಈ ವರದಿಯನ್ನು ಅವಲೋಕಿಸಿದ ಬಳಿಕ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ತನ್ನ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.ಪ್ರಸ್ತುತ ಈ ತಾಣದಲ್ಲಿ ಹಲವು ಸ್ಮಾರಕಗಳು ಲಭ್ಯವಾಗಿದ್ದು, ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡಲಾಗಿದೆ. ಸನ್ನತಿಯ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿರುವ ಆಸಕ್ತರು ವಿವಿಧೆಡೆಯಿಂದ ಇಲ್ಲಿಗೆ ಬರುತ್ತಿದ್ದಾರೆ. “ನಾನು ಇಲ್ಲಿಗೆ ಬರುತ್ತಿರುವುದು ಎರಡನೇ ಸಲ. ಆರು ತಿಂಗಳ ಹಿಂದೊಮ್ಮೆ ಭೇಟಿ ಕೊಟ್ಟಿದ್ದೆ. ಇಲ್ಲಿ ಕಂಡು ಬಂದಿರುವ ಸ್ತೂಪಗಳು ಹಾಗೂ ಸ್ಮಾರಕಗಳು ಇದೊಂದು ಮಹತ್ವದ ಬೌದ್ಧ ಕೇಂದ್ರವಾಗಿದ್ದವು ಎಂಬುದರ ಸುಳಿವು ನೀಡುತ್ತವೆ” ಎಂದು ಧರ್ಮಶಾಲಾದಿಂದ ಆಗಮಿಸಿದ್ದ ಪ್ರವಾಸಿಗ ದೊರ್ಜ್ ಚಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.ಬೌದ್ಧ ಧರ್ಮ: ಕೆಲವು ದಶಕಗಳ ಹಿಂದೆ, ಕರ್ನಾಟಕಕ್ಕೂ ಬೌದ್ಧಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದೇ ಭಾವಿಸಲಾಗಿತ್ತು. ಮಸ್ಕಿ ಹಾಗೂ ಕೊಪ್ಪಳದಲ್ಲಿ ದೊರೆತ ಅಶೋಕನ ಶಿಲಾಶಾಸನದಿಂದ ಬೌದ್ಧ ಧರ್ಮದೊಂದಿಗೆ ಈ ಪ್ರದೇಶ ಹೊಂದಿದ್ದ ಸಂಪರ್ಕ ಪ್ರಕಟಗೊಂಡಿತು. ಆದರೆ ಸನ್ನತಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ವಿದೇಶಿ ಸಂಶೋಧಕರು ನಡೆಸಿದ ಉತ್ಖನನದಿಂದ ಕರ್ನಾಟಕ ಕೂಡ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿತ್ತು ಎಂಬ ಮಹತ್ವದ ಅಂಶ ತಿಳಿದುಬಂತು.1994ರಿಂದ 2001ರವರೆಗೆ ನಡೆಸಿದ ಉತ್ಖನನದಲ್ಲಿ 81 ಶಿಲಾಶಾಸನಗಳು, ಎರಡು ಸ್ತೂಪಗಳು, ಮೂರು ‘ದಿಬ್ಬ’ (ಎತ್ತರದ ಪ್ರದೇಶ) ಹಾಗೂ ಕೋಟೆಯ ಅವಶೇಷ ಸನ್ನತಿಯಲ್ಲಿ ಪತ್ತೆಯಾಗಿವೆ. ನಾಲ್ಕು ಮಹತ್ವದ ಶಾಸನಗಳ ಪೈಕಿ ಒಂದು ಶಾಸನ ಅಶೋಕನ ಕಾಲದ್ದು ಎಂದು ಸಂಶೋಧಕರು ಹೇಳಿದ್ದಾರೆ. ಸ್ತೂಪ, ಬುದ್ಧವಿಹಾರ, ರಣಮಂಡಲ ಇತರ ಸ್ಮಾರಕಗಳು ಈ ತಾಣ ಹಿಂದೊಮ್ಮೆ ಬೌದ್ಧಧರ್ಮದ ಪ್ರಮುಖ ನೆಲೆಯಾಗಿತ್ತು ಎಂಬುದನ್ನು ಸಾಬೀತುಪಡಿಸಿವೆ.ಮಹಾಸ್ತೂಪ: ವಿಸ್ತೃತ ಉತ್ಖನನದ ಬಳಿಕ ಮಹಾಸ್ತೂಪ ಸಮುಚ್ಚಯದ ಅವಶೇಷ ಪತ್ತೆಯಾಗಿದ್ದು, ಇಲ್ಲಿನ ಶಾಸನಗಳು ಈ ಸ್ತೂಪವನ್ನು ‘ಅಧೋಲೋಕ ಮಹಾಚೈತ್ಯ’ ಎದು ಬಣ್ಣಿಸಿವೆ. ಸುಣ್ಣದಕಲ್ಲು ಬಳಸಿ, ಅಲಂಕೃತ ಶೈಲಿಯಲ್ಲಿ ಕಟ್ಟಿದ ಈ ಸ್ತೂಪ 22 ಮೀಟರ್ ವ್ಯಾಸ ಹಾಗೂ 17 ಮೀಟರ್ ಎತ್ತರ ಹೊಂದಿತ್ತು. ಇದು ಸಾಂಚಿಯ ಪ್ರಖ್ಯಾತ ಸ್ತೂಪಕ್ಕಿಂತಲೂ ಎತ್ತರವಾಗಿತ್ತು ಎಂದು ಇತಿಹಾಸಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೌರ್ಯ, ಆರಂಭ ಶಾತವಾಹನ ಹಾಗೂ ಅಂತ್ಯ ಶಾತವಾಹನ ಕಾಲದ ಮೂರು ಹಂತಗಳಲ್ಲಿ ಈ ಸ್ತೂಪ ನಿರ್ಮಾಣಗೊಂಡಿದ್ದು, ಇದರ ಸುತ್ತಲೂ ಕಿರುಸ್ತೂಪ, ಚೈತ್ಯಗೃಹ, ಶಿಲ್ಪ ಹಾಗೂ ಹತ್ತು ಇಟ್ಟಿಗೆ ಕಟ್ಟಡಗಳು ಕಂಡುಬಂದಿವೆ.ಅಭಿವೃದ್ಧಿ: ಉತ್ಖನನ ಹಾಗೂ ಸಂಶೋಧನೆಗೆ ರಾಜ್ಯ ಸರ್ಕಾರ ಸನ್ನತಿ ಸುತ್ತಲಿನ 16 ಎಕರೆ ಜಮೀನನ್ನು ನೀಡಿದೆ. ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ’ವು ಇಲ್ಲಿ ಹಲವು ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ. ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸುವುದು, ಶಿಲ್ಪ, ಶಾಸನ, ಸ್ಮಾರಕಗಳ ಪ್ರದರ್ಶನಕ್ಕೆ ಮ್ಯೂಸಿಯಂ ನಿರ್ಮಿಸಲು ನಿರ್ಧರಿಸಲಾಗಿದೆ. ಇದಲ್ಲದೇ, ರಾಜ್ಯ ಸರ್ಕಾರ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿರುವ ‘ಪಾಲಿ ಭಾಷೆ ಸಂಶೋಧನಾ ಕೇಂದ್ರ’ವನ್ನು ಸನ್ನತಿಯಲ್ಲಿ ಸ್ಥಾಪಿಸುವ ಪ್ರಸ್ತಾವ ಸಹ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry