ಶುಕ್ರವಾರ, ಮೇ 20, 2022
19 °C

21 ತಾಲ್ಲೂಕಿನಲ್ಲಿ ಕ್ರೀಡಾಂಗಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರ ಭೇಟಿ

ರಾಯಚೂರು: ಇಲ್ಲಿನ ಮಹಾತ್ಮ ಗಾಂಧೀಜಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಜಿಮ್, ಈಜುಗೋಳಕ್ಕೆ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಗಿರೀಶ ಪಾಟೀಲ್ ಅವರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ರೀಡಾಂಗಣ ಸ್ವಚ್ಛತೆ, ಅಭಿವೃದ್ಧಿ ಕಾರ್ಯಗಳ ಕುರಿತು ಜಿಲ್ಲಾ ಕ್ರೀಡಾ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಿಲ್ಲೆಯಲ್ಲಿರುವ ಕ್ರೀಡಾಂಗಣ, ಕ್ರೀಡಾ ಇಲಾಖೆ ಕಚೇರಿ, ಕ್ರೀಡಾ ಚಟುವಟಿಕೆ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ 7-8 ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು.ರಾಜ್ಯ ಸರ್ಕಾರವು ಪ್ರಾಧಿಕಾರಕ್ಕೆ 2010-11ನೇ ಸಾಲಿನಲ್ಲಿ  98 ಕೋಟಿ ರೂ ಅನುದಾನ ದೊರಕಿಸಿದೆ. ರಾಜ್ಯದ 176 ತಾಲ್ಲೂಕುಗಳಲ್ಲಿ  150 ತಾಲ್ಲೂಕುಗಳಲ್ಲಿ ಕ್ರೀಡಾಂಗಣ ಇವೆ. ಇನ್ನೂ 21 ತಾಲ್ಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ದೊರಕಿಸಲಾಗುವುದು ಎಂದರು.ರಾಯಚೂರು ನಗರಸಭೆಯು ಇಲ್ಲಿನ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿಯನ್ನು ಜಿಲ್ಲಾಡಳಿತಕ್ಕೆ ನೀಡಿದೆ. ದೇವದುರ್ಗ, ಮಾನ್ವಿ, ಸಿಂಧನೂರು, ಲಿಂಗಸುಗೂರು ತಾಲ್ಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕೆಲವು ಮುಕ್ತಾಯ ಹಂತದಲ್ಲಿವೆ ಎಂದು ವಿವರಿಸಿದರು.ಈಜುಗೋಳ ಗೋಡೆ ಎತ್ತರಿಸಲು ಸೂಚನೆ: ಈಜುಗೋಳದ ಸುತ್ತಲಿನ ಗೋಡೆ ಇನ್ನೂ ಸ್ವಲ್ಪ ಎತ್ತರಿಸಲು ಹಾಗೂ ಈಜುಗೋಳದ ಎದುರು ಉದ್ಯಾನವನ ನಿರ್ಮಾಣಕ್ಕೆ ಕ್ರೀಡಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಕ್ರೀಡಾಪಟುಗಳಿಗೆ ಕ್ರೀಡಾಸಕ್ತರಿಗೆ ತೊಂದರೆಯಾಗದ ರೀತಿ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ ಎಂದರು.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕೃಷ್ಣಶೆಟ್ಟಿ, ಬಿಜೆಪಿ ಪಕ್ಷದ ಬಂಡೇಶ ವಲ್ಕಂದಿನ್ನಿ, ಎಸ್ ನಾಗೇಶ್ವರರಾವ್, ರಮಾನಂದ ಯಾದವ್, ಶ್ರೀನಿವಾಸ ದೇಸಾಯಿ, ನೀಲಕಂಠ ಹಾಗೂ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.