ಆಲಮಟ್ಟಿ ವಸಾಹತುವಿನಲ್ಲಿ ಅನಧಿಕೃತ ವಾಸ ತೆರವು: 42 ವಸತಿ ಗೃಹ ವಶಕ್ಕೆ

7

ಆಲಮಟ್ಟಿ ವಸಾಹತುವಿನಲ್ಲಿ ಅನಧಿಕೃತ ವಾಸ ತೆರವು: 42 ವಸತಿ ಗೃಹ ವಶಕ್ಕೆ

Published:
Updated:
Deccan Herald

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ನೌಕರರ ವಸಾಹತುವಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ 42 ಕುಟುಂಬಗಳನ್ನು ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಹೊರಗೆ ಕಳಿಸಿದರು.

ಆಲಮಟ್ಟಿಯಲ್ಲಿರುವ 400ಕ್ಕೂ ಹೆಚ್ಚು ಕೆಬಿಜೆಎನ್‌ಎಲ್‌ ನೌಕರರ ವಸಾಹತುಗಳಿವೆ. ನಿವೃತ್ತಿ ಬಳಿಕವೂ ಖಾಲಿಯಿರುವ ವಸಾಹತುಗಳಲ್ಲಿ ಅನಧಿಕೃತವಾಗಿ ಜನ ನೆಲೆಸಿದ್ದರು. ಅವರನ್ನು ಹೊರಗೆ ಕಳುಹಿಸಿ, ವಸಾಹುತಗಳನ್ನು ವಶಕ್ಕೆ ಪಡೆಯಲಾಯಿತು.

15 ದಿನಗಳಿಂದ ಅಧಿಕಾರಿಗಳು, ಅನಧಿಕೃತವಾಗಿ ವಾಸಿಸುತ್ತಿದ್ದ ಜನರಿಗೆ ಮನೆ ಖಾಲಿ ಮಾಡಲು ಸೂಚಿಸಿದ್ದರು. ಎರಡು ದಿನದಿಂದ ಆಟೊದಲ್ಲಿ ಬಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಮನೆ ಖಾಲಿ ಮಾಡಿರಲಿಲ್ಲ. ಹೀಗಾಗಿ ಮಂಗಳವಾರ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಮನೆಗಳನ್ನು ಖಾಲಿ ಮಾಡಿಸಿದರು.

ಹೊರಗೆ ಹೋಗಲು ನಿರಾಕರಿಸಿದವರ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ತಂದು, ಬಾಗಿಲಿಗೆ ಸೀಲ್ ಸಹಿತ ಬೀಗ ಹಾಕಿದರು. ಒಟ್ಟು 42 ಮನೆಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದರು.

‘ಅನಧಿಕೃತವಾಗಿ ವಾಸಿಸುತ್ತಿದ್ದವರ ಮನೆಗಳನ್ನು ಖಾಲಿ ಮಾಡಿಸಲಾಗಿದೆ. ಮುಂದಿನ ಹಂತದಲ್ಲಿ ಬಾಡಿಗೆ ಕಟ್ಟುವ ಕೆಬಿಜೆಎನ್ಎಲ್ ನಿವೃತ್ತ ನೌಕರರು, ಮೃತ ನೌಕರರ ಕುಟುಂಬದವರು ವಾಸಿಸುವ ವಸಾಹತುಗಳನ್ನು ತೆರವುಗೊಳಿಸಲಾಗುವುದು’ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎಸ್.ಬಿ.ಬಿಜಾಪುರ, ಶರಣಪ್ಪ ಚಲವಾದಿ ತಿಳಿಸಿದರು.

ಆಲಮಟ್ಟಿ ಪಿಎಸ್ಐ ಎಸ್.ವೈ.ನಾಯ್ಕೋಡಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !