ಗುರುವಾರ , ಮೇ 19, 2022
20 °C

ಸಮೀಕ್ಷೆ ಬಳಿಕ ವಕ್ಫ್ ಮಂಡಳಿ ಅಭಿವೃದ್ಧಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದಲ್ಲಿ ಒಟ್ಟು 33,000 ವಕ್ಫ್ ಆಸ್ತಿಗಳಿದ್ದು, ಇದರಲ್ಲಿ ಅರ್ಧದಷ್ಟನ್ನು ಸಮೀಕ್ಷೆ ಮಾಡಲಾಗಿದ್ದು, ಇದು ಇನ್ನೂಮುಂದುವರಿದಿದೆ. ಸಮೀಕ್ಷೆ ಮುಗಿದ ಬಳಿಕ ಎಲ್ಲ ವಕ್ಫ್ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿಪಡಿಸ ಲಾಗುವುದು ಎಂದು ವಕ್ಫ್ ಸಚಿವ ಪ್ರೊ. ಮಮ್ತಾಜ್ ಅಲಿಖಾನ್ ತಿಳಿಸಿದರು.ನಗರದ ಖ್ವಾಜಾ ಬಂದಾನವಾಜ್ ವೈದ್ಯಕೀಯ ವಿಜ್ಞಾನಗಳ ಸಭಾಂಗಣದಲ್ಲಿ ಬುಧವಾರ ಆರಂಭವಾದ ಗುಲ್ಬರ್ಗ ವಿಭಾಗದ ವಕ್ಫ್ ಸಂಸ್ಥೆಗಳ ಮುತವಲ್ಲಿ ಅಧ್ಯಕ್ಷರು- ಕಾರ್ಯದರ್ಶಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. “ಸುಪ್ರೀಂಕೋರ್ಟಿನ 1993ರ ನಿರ್ದೇಶನದಂತೆ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಇಮಾಮ್ ಹಾಗೂ ಮೋಸನ್ ಇವರುಗಳಿಗೆ ಸಂಭಾವನೆ ನೀಡಲಾಗುತ್ತಿದೆ. ಇದೇ ರೀತಿ ರಾಜ್ಯದಲ್ಲೂ ಸಂಭಾವನೆ ಪಾವತಿಗಾಗಿ 5 ಕೋಟಿ ರೂಪಾಯಿಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದು ಮಂಜೂರಾಗುವ ಸಾಧ್ಯತೆಯಿದೆ” ಎಂದು ಸಚಿವರು ತಿಳಿಸಿದರು.ಮುತವಲ್ಲಿ ಪರಿಕಲ್ಪನೆ ಬದಲಾಗಿದೆ. ಮ್ಯಾನೇಜಿಂಗ್ ಕಮಿಟಿ ಪದ್ಧತಿ ಬಂದಿದೆ. ಬದಲಾದ ಪರಿಸ್ಥಿತಿಯಲ್ಲೂ ಇದರ ಪಾತ್ರ ಮಹತ್ವದ್ದಾಗಿದೆ ಎಂದ ಸಚಿವ ಅಲಿಖಾನ್, ವಕ್ಫ್ ಆಸ್ತಿಗಳು ಅಲ್ಲಾಹನ ಆಸ್ತಿಗಳಾಗಿದ್ದು, ಇದರ ರಕ್ಷಕರು ಮತ್ತು ಪಾಲಕರು ಸಾರ್ವಜನಿಕರೇ ಆಗಿರುತ್ತಾರೆ ಎಂದರು.“ವಕ್ಫ್ ಆಸ್ತಿಗಳನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕು. ಆದರೆ ಇತ್ತೀಚಿಗೆ ಅವ್ಯವಸ್ಥೆ ತಲೆದೋರುತ್ತಿದ್ದು, ಆಡಳಿತಾಧಿಕಾರಿ ನೇಮಿಸುವ ಪರಿಸ್ಥಿತಿ ಒದಗಿ ಬಂದಿದೆ. ರಾಜ್ಯ ವಕ್ಫ್ ಮಂಡಳಿಯು ಜಿಲ್ಲಾ ವಕ್ಫ್ ಸಲಹಾ ಸಮಿತಿಗಳೊಂದಿಗೆ ನಿರಂತರ ಸಂಪರ್ಕ ಬೆಳೆಸಿ ಉತ್ತಮ ಪ್ರಗತಿ ಸಾಧಿಸಬೇಕು” ಎಂದು ಅವರು ಸಲಹೆ ಮಾಡಿದರು.ವಕ್ಫ್ ಸಂಸ್ಥೆಗಳು ಸರ್ಕಾರದಿಂದ ಬರುವ ಅನುದಾನ ಮತ್ತು ಸಾಲ ಪಡೆದು ಶಕ್ತಶಾಲಿಗಳಾಗಿ ವಕ್ಫ್ ಆಸ್ತಿ ಅಭಿವೃದ್ಧಿಪಡಿಸುವುದರ ಜೊತೆಗೆ ಬಡಜನರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ದುಡಿಯಬಹುದು. ವಕ್ಫ್ ಕೌನ್ಸಿಲ್‌ನಿಂದ ಸಾಲ ಪಡೆದು ಸದೃಢವಾದ ನಂತರ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಉರ್ದು ಭಾಷೆಗೆ ಒತ್ತು ನೀಡಬೇಕು. ಉರ್ದು ಭವನ, ಉರ್ದು ಶಾಲೆಗಳಿಗೆ ಕಲಿಕಾ ಸಾಮಗ್ರಿ, ಮೂಲಸೌಕರ್ಯ, ಪೀಠೋಪಕರಣ ಮತ್ತು ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಸನಾವುಲ್ಲಾ, ಶಾಸಕ ಖಮರುಲ್ ಇಸ್ಲಾಂ, ಖ್ವಾಜಾ ಬಂದೇನವಾಜ್ ದರ್ಗಾದ ಸಜ್ಜಾದ್ ನೀಶೀನ್ ಡಾ. ಸೈಯ್ಯದ್ ಷಾ ಖುಸ್ರೋ ಹುಸೇನಿ, ಸಚಿವರ ಆಪ್ತ ಕಾರ್ಯದರ್ಶಿ ಅಕ್ರಮ ಪಾಷಾ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆಡಳಿತಾಧಿಕಾರಿ ಎಂ.ಎಫ್. ಪಾಷಾ ಸ್ವಾಗತಿಸಿದರು. ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿರ್ಜಾ ಅಕ್ಬರ್‌ವುಲ್ಲಾ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.