ಶುಕ್ರವಾರ, ಮೇ 14, 2021
27 °C

9ರಂದು ತಂತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದೇಶರಕ್ಷಣೆಗೆ ಸಂಬಂಧಿಸಿದ `ತಂತ್ರ~ ಸಾಫ್ಟ್‌ವೇರ್ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಖಳನಾಯಕ ಕುತಂತ್ರ ರೂಪಿಸುತ್ತಾನೆ. ಆದರೆ ಈ ದುಷ್ಕೃತ್ಯವನ್ನು ಪೊಲೀಸ್ ಅಧಿಕಾರಿ ಭೇದಿಸುತ್ತಾನೆ. ಈ ಕಥೆಯುಳ್ಳ ಸಸ್ಪೆನ್ಸ್ ಸಿನಿಮಾ `ತಂತ್ರ~ ಇದೇ 9ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.ಈ ಹಿಂದೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ಗಿರೀಶ ಮಟ್ಟೆಣ್ಣವರ್, ಚಿತ್ರದಲ್ಲಿ ನಾಯಕನ (ಪೊಲೀಸ್ ಅಧಿಕಾರಿ) ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಬಾಲಾಜಿ, ನಿರ್ಮಾಪಕ ಜಿ.ಆರ್.ಮೋಹನ್ ಜತೆ ಮಟ್ಟೆಣ್ಣವರ್ ಮಂಗಳವಾರ ಇಲ್ಲಿ ಪತ್ರಕರ್ತರ ಜತೆ ಸಿನಿಮಾದ ವಿವರಗಳನ್ನು ಹಂಚಿಕೊಂಡರು.ವಿಭಿನ್ನ ಕಥೆ: “ಹಿರಿಯ ನಿರ್ದೇಶಕರ ಜತೆ ಸುಮಾರು 35 ಸಿನಿಮಾಗಳಿಗೆ ಸಹ ನಿರ್ದೇಶನ ಮಾಡಿದ ಅನುಭವ ನನಗಿದೆ” ಎಂದು ಹೇಳಿದ ಬಾಲಾಜಿ, ಇದೊಂದು ವಿಭಿನ್ನ ಕಥೆಯ ಸಸ್ಪೆನ್ಸ್ ಸಿನಿಮಾ. ಸೆಂಟಿಮೆಂಟ್ ಇಲ್ಲ; ಕಾಮಿಡಿ ಟ್ರ್ಯಾಕ್ ಇಲ್ಲ; ಡ್ಯೂಯೆಟ್- ಹಾಡು ಇಲ್ಲ; ಕಮರ್ಶಿಯಲ್ ಫೈಟ್ಸ್ ಇಲ್ಲ. ಕೇವಲ ವಾಸ್ತವಾಂಶವನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದರು.ಮೊದಲ ಬಾರಿ ಹೀರೋ: ಸೈಬರ್ ಕ್ರೈಮ್‌ನ ಎಸಿಪಿ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಲಿದ್ದು, ಇದು ಈವರೆಗಿನ ಪಾತ್ರಗಳಿಗಿಂತ ವಿಭಿನ್ನವಾಗಿದೆ ಎಂದಿದ್ದು ಗಿರೀಶ ಮಟ್ಟೆಣ್ಣವರ್. ಯಕ್ಷ ಸಿನಿಮಾದಲ್ಲಿ ನಾನಾ ಪಾಟೇಕರ್ ಜತೆ, `ತಮಸ್ಸು~ವಿನಲ್ಲಿ ಶಿವರಾಜಕುಮಾರ್ ಹಾಗೂ `ಮಠ~ದಲ್ಲಿ ಜಗ್ಗೇಶ್ ಜತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತಾವು ಈಗ ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸಿದ ಸಿನಿಮಾ ತೆರೆ ಕಾಣುತ್ತಿರುವುದು ಖುಷಿ ತಂದಿದೆ ಎಂದು ಅವರು ಸಂತಸ ಹಂಚಿಕೊಂಡರು.ಹೊಸಬರಿಗೆ ಅವಕಾಶ: ಹೊಸಮುಖಗಳಿಗೆ ಅವಕಾಶ ನೀಡುವ ಜತೆಗೆ, ಹೊಸ ಕಥೆಯನ್ನು ಅಳವಡಿಸಿಕೊಂಡ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಮೋಹನಕೃಷ್ಣ ವ್ಯಕ್ತಪಡಿಸಿದರು. ರಷ್ಯಾದ ಕಲಾವಿದರು ಕೂಡ ಅಭಿನಯಿಸಿದ್ದು, ಉಳಿದಂತೆ ಹಾಸ್ಯನಟ ವೈಜನಾಥ ಬಿರಾದಾರ, ಪ್ರಮೋದ ಚಕ್ರವರ್ತಿ ತಾರಾಗಣದಲ್ಲಿ ಇದ್ದಾರೆ. ಸಿನಿಮಾ ರಂಗದ ಜನಪ್ರಿಯ ಸೂತ್ರಗಳನ್ನು ಮೀರಿ, ಈ ಸಿನಿಮಾ ತಯಾರಾಗಿದೆ ಎಂದು ಅವರು ಹೇಳಿದರು.ಬೆಂಗಳೂರಿನಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಸಿನಿಮಾ, `ದಿಶಾ ಕ್ರಿಯೇಶನ್ಸ್~ನ ಕೊಡುಗೆ. ಒಂದು ವರ್ಷದ ಹಿಂದೆಯೇ ನಿರ್ಮಾಣ ಪೂರ್ಣಗೊಂಡಿದ್ದರೂ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲು ಕಾಯ್ದಿದ್ದಾಗಿ ಚಿತ್ರತಂಡ ಸ್ಪಷ್ಟಪಡಿಸಿತು.ನಾಯಕಿಯಾಗಿ ನವ್ಯ ನಟಿಸಿದ್ದು, ಇವರು ಈ ಹಿಂದೆ ದರ್ಶನ್ ನಾಯಕನಾಗಿ ಅಭಿನಯಿಸಿದ `ನನ್ನ ಪ್ರೀತಿಯ ಹಾಡು~, `ಸಚ್ಚಿ~, `ಕಿಟ್ಟಿ~ ಇತರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜಂಬೆ ಅಶೋಕ್ ಸಂಗೀತ ಸಂಯೋಜನೆ ಮಾಡಿದ್ದು, ಶಂಕರ್ ಛಾಯಾಗ್ರಹಣ ಹಾಗೂ ಎಂ.ಎನ್.ಸ್ವಾಮಿ ಸಂಕಲನ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.