ರೈತರ ಹೋರಾಟ ತೀವ್ರ- ವಿಷ ಸೇವಿಸಿದ ನಾಲ್ವರು ಗಂಭೀರ

7

ರೈತರ ಹೋರಾಟ ತೀವ್ರ- ವಿಷ ಸೇವಿಸಿದ ನಾಲ್ವರು ಗಂಭೀರ

Published:
Updated:

ಗುಲ್ಬರ್ಗ: ಬೆಂಬಲಬೆಲೆಯಲ್ಲಿ ತೊಗರಿ ಖರೀದಿಸುವ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದಿದ್ದು, ಶನಿವಾರ (ಫೆ. 5) ಜೇವರ್ಗಿ ಬಂದ್ ಕರೆ ನೀಡಲಾಗಿದೆ.ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರ ಸಮ್ಮುಖದಲ್ಲೇ ರೈತರು ಸಾಮೂಹಿಕ ವಿಷ ಸೇವಿಸಿದರೂ ತಡೆಯುವ ಪ್ರಯತ್ನ ಮಾಡದ ಅಧಿಕಾರಿಗಳ ವಿರುದ್ಧ ರೈತಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರೈತ ಹೋರಾಟ ಸಮಿತಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅವರ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ.

ವಿಷ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿರುವ ರೈತರಾದ ರುದ್ರಯ್ಯ ಪುರಾಣಿಕ, ಪರಮಾನಂದ ಶರ್ಮ, ಗುರುಪಾದ ಬಳ್ಳುಂಡಗಿ, ಶರಣಪ್ಪ ಹಡಪದ ಅವರ ಸ್ಥಿತಿ ಗಂಭೀರವಾಗಿದ್ದು, ನಾಲ್ಕು ಮಂದಿಯನ್ನು ಗುಲ್ಬರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಾಹೇಬಗೌಡ ನೇಗಲಗಿ, ಗೌಸ್‌ಮುದ್ದೀನ್ ಖಾದ್ರಿ ಗವ್ಹಾಂರ, ಗುರುಪಾದಪ್ಪ ಬಳ್ಳುಂಡಗಿ, ಬಸವರಾಜ ಕುಮ್ಮಣ್ಣಿ ಕೋಲಕೂರ, ಈರಣ್ಣ ಶಾಂತಪ್ಪ ಕುರನಹಳ್ಳಿ, ಬಸವರಾಜ ದೊಡ್ಡಮನಿ ಕೋಲಕೂರ, ಸೋಮಯ್ಯ ಮುರುಘಾನೂರ, ಮುತ್ತಣ್ಣ ಮಂದೇವಾಲ, ಭೀಮರಾಯ ಯಲಗೋಡ ಅವರಿಗೆ ಜೇವರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತೊಗರಿ ಖರೀದಿ ಕೇಂದ್ರ ಆರಂಭಿಸುವ ಸಂಬಂಧ ಸರ್ಕಾರಿ ಆದೇಶ ಪ್ರಕಟಿಸಲು ಮಧ್ಯಾಹ್ನ 3 ಗಂಟೆವರೆಗೆ ಗಡುವು ನೀಡಲಾಗಿತ್ತು. ಗುರುವಾರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಶಾಸಕರೂ ಶುಕ್ರವಾರ ಮಧ್ಯಾಹ್ನದೊಳಗೆ ಸಮಸ್ಯೆ ಬಗೆಹರಿಸುವ ಭವರಸೆ ನೀಡಿದ್ದರು. ತಕ್ಷಣ ಬೆಂಗಳೂರಿಗೆ ತೆರಳಿ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಆದೇಶ ಹೊರಡಿಸುವುದಾಗಿ ಹೇಳಿದ್ದರು.ಸಂಜೆ 5ರ ಸುಮಾರಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪ್ರತಿಭಟನಾ ರ್ಯಾಲಿಯಲ್ಲಿ ಆಗಮಿಸಿದ ರೈತರ ಪೈಕಿ ಹನ್ನೆರಡು ಮಂದಿ ಸಾಮೂಹಿಕ ವಿಷ ಸೇವಿಸುವ ನಿರ್ಧಾರ ಕೈಗೊಂಡರು. ಪ್ರತಿಭಟನಾಕಾರರ ಗುಂಪೊಂದು ತಹಸೀಲ್ದಾರ ಕಚೇರಿಗೆ ತೆರಳಿ ಕುರ್ಚಿ, ಮೇಜುಗಳನ್ನು ಎಳೆದಾಡಿ ದಾಂದಲೆ ನಡೆಸಿತು.ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲು ಮುಂದಾಗಿರುವ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಕಿವುಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತಮುಖಂಡರು, “ರೈತರು ವಿಷಸೇವಿಸಿ ಆತ್ಮಹತ್ಯೆಗೆ ಮುಂದಾದರೂ ಸರ್ಕಾರ ಸಮಸ್ಯೆ ಬಗೆಹರಿಸದಿರುವುದು ಖಂಡನೀಯ. ಇಂಥ ರೈತವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಾನಂದ ದ್ಯಾಮಗೊಂಡ, ಎಸ್.ಎಸ್.ಸಲಗರ, ಶಂಕರ ಕಟ್ಟಿಸಂಗಾವಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry