ಮಧ್ಯಂತರ ಚುನಾವಣೆಯ ಕನವರಿಕೆಯಲ್ಲಿ...

7

ಮಧ್ಯಂತರ ಚುನಾವಣೆಯ ಕನವರಿಕೆಯಲ್ಲಿ...

Published:
Updated:

ಕರ್ನಾಟಕ ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿದೆಯೆ? ಮೇಲುನೋಟಕ್ಕೆ ಹಾಗೆ ಅನಿಸುತ್ತದೆ. ಇಲ್ಲವಾದರೆ ಸರ್ಕಾರ ಒಂದಾದ ಮೇಲೆ ಒಂದರಂತೆ ಜನಪ್ರಿಯ ಯೋಜನೆಗಳನ್ನು, ಪ್ರಯೋಜನಗಳನ್ನು ಪ್ರಕಟಿಸುವ ಅಗತ್ಯ ಈಗಂತೂ ಇರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರ ತನ್ನ ಪೂರ್ಣ ಅವಧಿಯನ್ನು ಖಂಡಿತ ಮುಗಿಸುತ್ತದೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹಿಂದೆಯೇ ಅವಸರ ಅವಸರವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ‘ತಾತ್ವಿಕ ನಿರ್ಧಾರ’ ತೆಗೆದುಕೊಳ್ಳುತ್ತಾರೆ. ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮ ಮಾಡಲು ಸಂಪುಟ ನಿರ್ಣಯಿಸುತ್ತದೆ. ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ನಂತರ ಮಂಡಿಸಬೇಕಾಗಿದ್ದ ರಾಜ್ಯ ಬಜೆಟ್ ಅನ್ನು ತರಾತುರಿಯಲ್ಲಿ ನಾಲ್ಕು ದಿನ ಮುಂಚೆಯೇ ಮಂಡಿಸಲು ನಿರ್ಧರಿಸಲಾಗಿದೆ. ಸಾಲದು ಎಂದು ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ. ಬಜೆಟ್ ಮಂಡಿಸಿದ ನಂತರ ಮಾರ್ಚ್ ತಿಂಗಳಲ್ಲಿ ಕಾಲೇಜುಗಳಿಗೆ ಹೋಗಿ ವಿರೋಧ ಪಕ್ಷಗಳ ಬಣ್ಣ ಬಯಲು ಮಾಡುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ. ಆಗ ಪರೀಕ್ಷೆಯ ಕಾಲ ಎಂಬುದು ಅವರಿಗೆ ಮರೆತು ಹೋಗಿರಬಹುದು!ಒಂದು ಸರ್ಕಾರ ಚುನಾವಣೆಗೆ ಹೋಗುವ ವರ್ಷದಲ್ಲಿ ಹೀಗೆ ‘ಜನಪರ’ ಅಥವಾ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದು ರೂಢಿ. ಮುಖ್ಯಮಂತ್ರಿಗಳು ಹೇಳುವ ಹಾಗೆ ಈ ಸರ್ಕಾರಕ್ಕೆ ಇನ್ನೂ ಎರಡು ವರ್ಷ ಅಧಿಕಾರದ ಅವಧಿಯಿದೆ. ಹಾಗಿದ್ದರೆ ಬೊಕ್ಕಸದ ಮೇಲೆ ಹೊರೆ ಆಗುವ ತೀರ್ಮಾನಗಳನ್ನು ಪ್ರಕಟಿಸಲು ಇಷ್ಟೊಂದು ತರಾತುರಿ ಏಕೆ? ‘ಮುಂದೆ ಸಂದರ್ಭ ಹೇಗೆ ಬರುತ್ತದೋ ಗೊತ್ತಿಲ್ಲ, ಯಾವುದಕ್ಕೂ ಸಿದ್ಧತೆ ಇರಲಿ’ ಎಂದು ಅವರು ಹೀಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ? ಅಥವಾ ವಿರೋಧ ಪಕ್ಷಗಳಿಗೆ ಗುಮ್ಮನ ಬೆದರಿಕೆ ಹಾಕುತ್ತಿದ್ದಾರೆಯೇ?ಯಡಿಯೂರಪ್ಪ ಅವರ ನೆತ್ತಿ ಮೇಲೆ ಈಗ ಕತ್ತಿ ತೂಗುತ್ತಿದೆ. ಇಬ್ಬರು ವಕೀಲರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಯ ವಿಚಾರಣೆ ನಡೆದು, ‘ಮುಖ್ಯಮಂತ್ರಿ ವಿರುದ್ಧದ ಆರೋಪಗಳು ಮೇಲು ನೋಟಕ್ಕೆ ನಿಜ; ಎಫ್‌ಐಆರ್ ದಾಖಲು ಮಾಡಬಹುದು’ ಎಂದು ನ್ಯಾಯಾಲಯ ನಿರ್ದೇಶನ ನೀಡಿದರೆ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ. ಅಂಥ ಸಂದರ್ಭದಲ್ಲಿ ಅವರಿಗೆ ಹೈಕಮಾಂಡ್‌ನ ಹುಲ್ಲು ಕಡ್ಡಿಯ ಆಸರೆಯೂ ಕತ್ತರಿಸಿ ಬೀಳುತ್ತದೆ. ಯಡಿಯೂರಪ್ಪ ಬದಲಿಗೆ ಇನ್ನೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಈಗ ಪಕ್ಷಕ್ಕೆ, ಸರ್ಕಾರಕ್ಕೆ ಅಂಟಿರುವ ಕಳಂಕವನ್ನು ನಿವಾರಿಸಿಕೊಂಡು ಉಳಿದ ಅವಧಿಯನ್ನು ಪೂರೈಸಿ ನಂತರ ಚುನಾವಣೆ ಎದುರಿಸಲು ಹೈಕಮಾಂಡ್ ನಿರ್ಧರಿಸುತ್ತದೆಯೇ? ಒಂದು ವೇಳೆ ಹೈಕಮಾಂಡ್ ಹಾಗೆ ನಿರ್ಧರಿಸಿದರೆ ಯಡಿಯೂರಪ್ಪ ಅದನ್ನು ಒಪ್ಪಿಕೊಂಡು ಅಧಿಕಾರ ತ್ಯಜಿಸುತ್ತಾರೆಯೇ? ಮುಖ್ಯಮಂತ್ರಿ ಈಗ ಹೊರಟಿರುವ ರೀತಿ ನೋಡಿದರೆ ಅವರು ಅದನ್ನು ಒಪ್ಪುವಂತೆ ಕಾಣುವುದಿಲ್ಲ. ಅವರು ತಮ್ಮ ಎದೆಗೆ ಬಹಳ ಹತ್ತಿರದಲ್ಲಿ ಕಾರ್ಡುಗಳನ್ನು ಹಿಡಿದುಕೊಂಡು ಆಡುತ್ತಿದ್ದಾರೆ ಎನಿಸಿದರೂ, ‘ನಾನು ಇಲ್ಲದಿದ್ದರೆ ಸರ್ಕಾರವೂ ಇಲ್ಲ. ಪಕ್ಷವೂ ಇಲ್ಲ. ನನ್ನ ಹಿಂದೆ ಪಕ್ಷ ನಿಲ್ಲಬೇಕು.ಚುನಾವಣೆಗೇ ಹೋಗೋಣ’ ಎನ್ನಬಹುದು. ತಾವು ಇಲ್ಲದೆ ಸರ್ಕಾರ ಸಮರ್ಪಕವಾಗಿ ನಡೆಯದು ಎಂಬುದನ್ನು ‘ತೋರಿಸಲೂ ಬಹುದು.’ ಬಹುಶಃ ಅದಕ್ಕೇ ಅವರು ಜನಪ್ರಿಯ ಯೋಜನೆಗಳ ಪ್ರಕಟಣೆ ಜತೆಗೆ ತಮಗೆ ಮಾಟ ಮಂತ್ರದ ಭಯವಿದೆ ಎಂದು ಸಹಾನುಭೂತಿ ಗಳಿಸಲೂ ಪ್ರಯತ್ನಿಸುತ್ತಿದ್ದಾರೆ.ಯಡಿಯೂರಪ್ಪ ಅವರು ಜನರಲ್ಲಿ ನಂಬಿಕೆ ಇಟ್ಟುಕೊಂಡಿರಬಹುದು. ಆದರೆ, ಹೈಕಮಾಂಡಿಗೆ ಅದೇ ನಂಬಿಕೆ ಇದ್ದಂತೆ ಕಾಣುವುದಿಲ್ಲ. ಸರ್ಕಾರದ ವರ್ಚಸ್ಸಿಗೆ ತಟ್ಟಿರುವ ತೀವ್ರ ಧಕ್ಕೆ ಅವರನ್ನು ಚಿಂತೆಗೀಡು ಮಾಡಿದೆ. ಅವರು ರಾಜಾ, ಥಾಮಸ್ ಎಂದೆಲ್ಲ ಎಷ್ಟೇ ವಿಷಯಾಂತರ ಮಾಡಿದರೂ ರಾಜ್ಯ ಸರ್ಕಾರಕ್ಕೆ ಅಂಟಿರುವ ಸ್ವಜನ ಪಕ್ಷಪಾತದ ಕಳಂಕವನ್ನು ಅಷ್ಟು ಸುಲಭವಾಗಿ ಮರೆಮಾಚುವುದು ಕಷ್ಟ ಎಂದು ಅವರಿಗೆ ತಿಳಿದಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸಿಕ್ಕ ಅರೆಮನಸ್ಸಿನ ಜನಾದೇಶವೂ ಗೊತ್ತಿದೆ. ಈಗ ಜನರು ಕೊಟ್ಟಿರುವ ಅಧಿಕಾರವನ್ನು ಇನ್ನೂ ಎರಡು ವರ್ಷ ನಿರ್ವಹಿಸಿ, ಹೊಸ ಮುಖಕ್ಕೆ ಅಧಿಕಾರ ಕೊಟ್ಟು ಈಗ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಜನರ ಮುಂದೆ ಹೋಗುವುದು ಸೂಕ್ತ ಎಂದೇ ಹೈಕಮಾಂಡಿನ ನಾಯಕರು ಭಾವಿಸುತ್ತಿರುವಂತಿದೆ. ಇಲ್ಲದಿದ್ದರೆ ನಕಾರಾತ್ಮಕ ಮತಗಳ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಡಬಹುದು ಎಂಬ ಭಯವೂ ಅವರನ್ನು ಕಾಡುತ್ತ ಇರಬಹುದು. ಕಾಂಗ್ರೆಸ್ ಕೂಡ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಗುಲಿದ ಅವಧಿಯಲ್ಲಿಯೇ ಜನರನ್ನು ಎದುರಿಸಿದರೆ ಅನುಕೂಲ ಎಂಬ ಲೆಕ್ಕದಲ್ಲಿ ಇದ್ದಂತೆ ಕಾಣುತ್ತದೆ. ಮುಖ್ಯಮಂತ್ರಿಗಳ ಸುತ್ತ ಹಬ್ಬಿರುವ ಹಗರಣದ ಹುತ್ತವನ್ನು ಹೊಡೆದಷ್ಟೂ ಲಾಭ ಎಂದು ಅದು ಕಂಡುಕೊಂಡಿದೆ. ಸಂಘಟನಾತ್ಮಕವಾಗಿ ನೋಡಿದರೆ ಆ ಪಕ್ಷ ದುರ್ಬಲವಾಗಿಯೇ ಕಾಣುತ್ತದೆ. ಪಕ್ಷದ ಅಧ್ಯಕ್ಷರಿಗೆ ಇನ್ನೂ ಪದಾಧಿಕಾರಿಗಳ ಬೆಂಬಲ ಸಿಕ್ಕಿಲ್ಲ. ಚುನಾವಣೆಗೆ ಹೋದರೆ ದೊಡ್ಡ ಸಮಾಜಗಳ ಬೆಂಬಲ ಸಿಗುವ ಖಾತರಿಯೂ ಇಲ್ಲ. ಆದರೂ ‘ನಾಡರಕ್ಷಣೆಗೆ ತಾನು ಸಿದ್ಧ’ ಎಂದು ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ಸು ಬಳ್ಳಾರಿಗೆ ಪಾದಯಾತ್ರೆ ಮಾಡಿದಂತೆಯೇ ಆಗಲೀ, ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಸಮಾವೇಶ ಸಂಘಟಿಸಿದಂತೆಯೇ ಆಗಲೀ ಮೈ ಕೈ ನೋಯಿಸಿಕೊಳ್ಳುವ ಕೆಲಸವನ್ನು ಜೆ.ಡಿ (ಎಸ್) ಮಾಡುತ್ತಿಲ್ಲ. ಆ ಪಕ್ಷದ ಮುಖಂಡರು ಮನೆಯಲ್ಲಿ  ಕುಳಿತುಕೊಂಡೇ ಸರ್ಕಾರದ ಕುತ್ತಿಗೆಗೆ ನೇಣು ಬಿಗಿಯುತ್ತಿದ್ದಾರೆ. ಈ ಮುಖಂಡರ ವಿರುದ್ಧ ಮೊಕದ್ದಮೆ ಹೂಡಲು ಕೆಲವರು ವಕೀಲರೂ ಹುಟ್ಟಿಕೊಂಡಿದ್ದಾರೆ. ಇದು ತಂತ್ರಕ್ಕೆ ಪ್ರತಿತಂತ್ರ. ಒಬ್ಬರು ಚಾಪೆ ಕೆಳಗೆ ನುಸುಳಿದರೆ ಇನ್ನೊಬ್ಬರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ!ಒಂದು ಕಡೆ ರಾಜ್ಯ ರಾಜಕೀಯ ಹೀಗೆ ಕ್ಷಿಪ್ರ ತಿರುವುಗಳನ್ನು ತೆಗೆದುಕೊಳ್ಳುತ್ತಿರುವಾಗಲೇ ಸಾರ್ವಜನಿಕರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್‌ನ ರ್ಯಾಲಿಯಲ್ಲಿ ಮುಖ್ಯಮಂತ್ರಿ ವಿರುದ್ಧ ಆಗಿರುವ ಪದಗಳ ಬಳಕೆ ಹಾಗೂ ರಾಜ್ಯಪಾಲರ ವಿರುದ್ಧ ಬಿಜೆಪಿಯವರು ಬಳಸಿರುವ ಪದಗಳ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ. ಕಾಂಗ್ರೆಸ್ ರ್ಯಾಲಿಯಲ್ಲಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಬಳಸಿರುವ ಪದಗಳ ಬಳಕೆಗೆ ಪ್ರತಿಯಾಗಿ ಮುಖ್ಯಮಂತ್ರಿಗಳು ಮಾಡಿರುವ ಮಾಟ ಮಂತ್ರದ ಆಪಾದನೆಯೂ ಅದೇ ಮಟ್ಟದಲ್ಲಿ ಇದೆ. ಅಂದರೆ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಂಥ ಸಂವಿಧಾನಬದ್ಧ ಹುದ್ದೆಗಳ ಗೌರವ ಮಣ್ಣು ಪಾಲಾಗಿದೆ. ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುತ್ತಿರುವ ಹತಾಶೆಯ ಪ್ರತೀಕ ಇದು.ಹೇಗಾದರೂ ಮಾಡಿ ಈ ಸರ್ಕಾರವನ್ನು ಉರುಳಿಸಬೇಕು ಎಂದು ಕಾಂಗ್ರೆಸ್ಸು ಮತ್ತು ಜೆ.ಡಿ (ಎಸ್) ಪಟ್ಟು ಹಿಡಿದಿದ್ದರೆ ಹೇಗಾದರೂ ಮಾಡಿ ಅಧಿಕಾರಕ್ಕೆ ಅಂಟಿಕೊಳ್ಳಬೇಕು ಎಂದು ಬಿಜೆಪಿ ಪ್ರತಿಪಟ್ಟು ಹಾಕುತ್ತಿದೆ. ಇದರ ಮಧ್ಯೆ ಸಾರ್ವಜನಿಕ ಜೀವನದಲ್ಲಿನ ಕನಿಷ್ಠ ಮರ್ಯಾದೆಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಸಾರ್ವಜನಿಕವಾಗಿ ರಾಜಕೀಯ ನಾಯಕರು ‘ಪ್ರಮಾಣ’ಗಳನ್ನು ನಿರ್ಮಿಸಬೇಕು. ತೀರಾ ಈಚಿನ ಇತಿಹಾಸ ಅಂದರೆ 2008ರ ಚುನಾವಣೆ ವೇಳೆಯಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡರ ವಿರುದ್ಧ ಹಗುರ ಮಾತು ಆಡಿದ ಎಸ್.ಎಂ.ಕೃಷ್ಣ ಅವರು ತಕ್ಷಣ ಗೌಡರಿಗೇ ಫೋನ್ ಮಾಡಿ ವಿಷಾದ ವ್ಯಕ್ತಪಡಿಸಿದ್ದರು; ಅದನ್ನು ಮಾಧ್ಯಮಗಳಿಗೂ ಅವರು ತಿಳಿಸಿದ್ದರು. ಸಿನಿಕತನ ಹೆಚ್ಚುತ್ತಿರುವ ಈಗಿನ ಕಾಲದಲ್ಲಿ ಇದೆಲ್ಲ ನಾಟಕೀಯ ಎಂದು ಕಾಣಬಹುದು. ಆದರೆ, ಸಾರ್ವಜನಿಕ ಜೀವನದಲ್ಲಿ ಮಾದರಿಗಳನ್ನು ಹೀಗೆ ಬುದ್ಧಿಪೂರ್ವಕವಾಗಿಯೇ ಸೃಷ್ಟಿಸಬೇಕಾಗುತ್ತದೆ. ಅದನ್ನು ಬಿಟ್ಟು ನಾಯಕರಾದವರು ಬೇಕಾಬಿಟ್ಟಿಯಾಗಿ ಮಾತನಾಡುತ್ತ ಇದ್ದರೆ ಕೆಳಹಂತದ ಜನಪ್ರತಿನಿಧಿಗಳು ಇನ್ನೂ ಕೆಟ್ಟ ಭಾಷೆ ಬಳಸುತ್ತಾರೆ. ದಿ.ಭೀಮಸೇನ ಜೋಶಿಯವರಂಥ ದೊಡ್ಡ ಗಾಯಕರ ಬಗೆಗೇ ಬೆಂಗಳೂರು ಮಹಾನಗರಪಾಲಿಕೆ ಸದಸ್ಯರೊಬ್ಬರು ಹಗುರ ಭಾಷೆ ಬಳಸಿದ್ದು ಇದಕ್ಕೆ ನಿದರ್ಶನ. ಪರಸ್ಪರರ ನಡುವೆ ಈ ಸದಸ್ಯರು ಇನ್ನು ಎಂಥ ಭಾಷೆಯಲ್ಲಿ ಬೈದಾಡುತ್ತಾರೆ ಎಂಬುದನ್ನು ಊಹಿಸುವುದೂ ಬೇಡ.ವಿರೋಧಿ ನಾಯಕರು ಮುಖ್ಯಮಂತ್ರಿಯನ್ನು ಎಷ್ಟು ಅವಾಚ್ಯವಾಗಿ ನಿಂದಿಸಬೇಕೋ ಅಷ್ಟು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತಾವು ಬಳಸುತ್ತಿರುವ ಯಾವ ಪದವೂ ಸಾಲದು ಎಂದು ಅವರಿಗೆ ಅನಿಸತೊಡಗಬಹುದು. ಹಾಗೆಂದು ಅವರು ಹೊಡೆದಾಟಕ್ಕೆ ಇಳಿಯುತ್ತಾರೆಯೇ? ಹೀಗೆ ಬೈದಾಡಿ, ಹೊಡೆದಾಡಿ ಜನರ ಮನಸ್ಸನ್ನು ಗೆಲ್ಲಬಹುದು ಎಂಬುದು ಎಷ್ಟು ಹಾಸ್ಯಾಸ್ಪದವೋ ವಿರೋಧ ಪಕ್ಷದ ನಾಯಕರ ವಿರುದ್ಧ ಮಾಟ ಮಂತ್ರದ ಆಪಾದನೆ ಮಾಡಿ ಜನರ ಸಹಾನುಭೂತಿ ಗಳಿಸಬಹುದು ಎಂಬುದೂ ಅಷ್ಟೇ ನಗೆಪಾಟಲು. ನಾಡಿನ ಮುಖ್ಯಮಂತ್ರಿಯೇ ತಾವು ಮನೆಯಿಂದ ವಿಧಾನಸೌಧವನ್ನು ಸುರಕ್ಷಿತವಾಗಿ ಮುಟ್ಟುವುದು ಅನುಮಾನ ಎಂದು ಶಂಕೆ ವ್ಯಕ್ತಪಡಿಸಿರುವುದು ಇನ್ನೂ ತಮಾಷೆಯಾಗಿದೆ. ಮುಖ್ಯಮಂತ್ರಿಗೇ ಜೀವಭಯ ಕಾಡತೊಡಗಿದರೆ ಸಾಮಾನ್ಯ ಜನರ ಪಾಡು ಏನು? ಈಗ ಸರ್ಕಾರ ಮತ್ತು ವಿರೋಧ ಪಕ್ಷಗಳು ಹೊರಟಿರುವ ರೀತಿ ನೋಡಿದರೆ ಇಬ್ಬರಿಗೂ ಸಾಮಾನ್ಯ ಜನರ ಪಾಡಿನ ಬಗ್ಗೆ ಚಿಂತೆ ಇದೆ ಎಂದು ಅನಿಸುವುದಿಲ್ಲ. ಇದಕ್ಕಿಂತ ದೊಡ್ಡ ದುರಂತ ಇನ್ನೊಂದು ಇರಲಾರದು.

            

           

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry