ಶುಕ್ರವಾರ, ಮೇ 14, 2021
32 °C

ವಿದ್ಯಾ ದಾಸೋಹ ಶ್ರೇಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾ ದಾಸೋಹ ಶ್ರೇಷ್ಠ

ಗುಲ್ಬರ್ಗ:ಮನುಷ್ಯರಿಗೆ ಸಾವಿದೆ. ಆದರೆ ಪುಸ್ತಕಗಳಿಗೆ ಸಾವಿಲ್ಲ. ಶ್ರೇಷ್ಠ ಗ್ರಂಥಗಳು ಬದುಕಿನ ದಾರಿ ತೋರಿಸುತ್ತವೆ. ಎಲ್ಲರೂ ಪುಸ್ತಕ ಅಧ್ಯಯನ ಮಾಡಬೇಕು. ವಿದ್ಯಾ ದಾಸೋಹ ಅತ್ಯಂತ ಶ್ರೇಷ್ಠವಾಗಿದೆ ಎಂದು ರಾಜ್ಯ ಸಾರ್ವಜನಿಕ ಗ್ರಂಥಾಲಯ ಮತ್ತು ಪಶುಸಂಗೋಪನೆ ಸಚಿವ ರೇವುನಾಯಕ ಬೆಳಮಗಿ ಶುಕ್ರವಾರ ಇಲ್ಲಿ ಹೇಳಿದರು.ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗುಲ್ಬರ್ಗ ಘಟಕವು ಜಂಟಿಯಾಗಿ ಆಯೋಜಿಸಿದ್ದ `ಗ್ರಂಥಾಲಯಗಳ ಮೇಲೆ ವಿದ್ಯುನ್ಮಾನ ಮಾಧ್ಯಮ ಪ್ರಭಾವ~ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಆದರೆ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಗೊತ್ತಾಗಿದೆ. ಓದುವವರಿಲ್ಲದೆ ಗ್ರಂಥಾಲಯ ಸಿಬ್ಬಂದಿ ಬಾಗಿಲು ಹಾಕಿಕೊಂಡು ಹೋಗುತ್ತಾರೆ. ಇನ್ನು ಮುಂದೆ ಪ್ರತಿಯೊಂದು ಗ್ರಂಥಾಲಯವು ಹೊರಗೆ ವೇಳಾಪಟ್ಟಿಯನ್ನು ತೂಗು ಹಾಕಬೇಕು. ಆ ಪ್ರಕಾರ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಅಲ್ಲಿರಬೇಕು. ಇವರೆಲ್ಲರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಾಗಿದ್ದರಿಂದ ನಿಗದಿ ಪಡಿಸಿದ ವೇಳೆಯಲ್ಲಿ ಗೈರುಹಾಜರಾದರೆ ಕೆಲಸದಿಂದ ಕೈಬಿಟ್ಟು, ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಈಗಾಗಲೇ ಹೊಸದಾಗಿ ಆದೇಶ ನೀಡಲಾಗಿದೆ ಎಂದು ವಿವರಿಸಿದರು.ಗ್ರಾಮೀಣರು ಹೆಚ್ಚು ಓದುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಹೊಸಹೊಸ ವಿಷಯಗಳನ್ನು ತಿಳಿಯಬೇಕು. ರಾಜ್ಯದಲ್ಲಿ ಗ್ರಂಥಾಲಯಗಳು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸಲಾಗುತ್ತಿದೆ.ಕೋಲ್ಕತ್ತಾದಲ್ಲಿರುವ  ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯದ ಅಧ್ಯಯನಕ್ಕೆ ತಂಡವೊಂದನ್ನು ಕಳುಹಿಸಲಾಗುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡ ನಂತರ ರಾಜ್ಯದಲ್ಲಿ ಒಂದು ಮಾದರಿ ಗ್ರಂಥಾಲಯ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.ಎನ್.ವಿ. ಸೊಸೈಟಿಯ ಶೈಕ್ಷಣಿಕ ಮಂಡಳಿ ಅಧ್ಯಕ್ಷ ಆರ್.ಎನ್. ರಾವ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು. ಕಾಲೇಜಿನ ಗ್ರಂಥಪಾಲಕಿ ಅನಸೂಯಾ ಪಿ. ಶಿಂದೆ ಪ್ರಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿ, ಎನ್.ವಿ. ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸ್ವಾಮಿರಾವ ಕುಲಕರ್ಣಿ ಸ್ವಾಗತಿಸಿದರು. ಎನ್.ವಿ. ಸೊಸೈಟಿಯ ಕಾರ್ಯದರ್ಶಿ ಶಾಮರಾವ್ ಖಣಗೆ, ಗ್ರಂಥಾಲಯ ಮಾಹಿತಿ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಶಹಾ, ಕಾರ್ಯನಿರತ ಪ್ರಕರ್ತರ ಸಂಘ ಗುಲ್ಬರ್ಗ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.