ಸೋಮವಾರ, ಮೇ 17, 2021
21 °C

ಸಂಕಷ್ಟದ ಸುಳಿಯಲ್ಲಿ ವಾರ್ತಾ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಸರ್ಕಾರದ ಮುಖವಾಣಿಯಂದೇ ಹೇಳಲಾಗುವ ವಾರ್ತಾ ಇಲಾಖೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ವಾರ್ತಾ ಇಲಾಖೆ ಸಮರ್ಪಕವಾಗಿ ಮತ್ತು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಇಲಾಖೆಯ ಸಮಗ್ರ ಬಲವರ್ಧನೆ ಮಾಡುವುದು ಅಗತ್ಯವಾಗಿದೆ.ವಾರ್ತಾ ಇಲಾಖೆಯ ಖಾತೆಯನ್ನು ಮುಖ್ಯಮಂತ್ರಿಗಳೇ ಹೊಂದಿರುವುದರಿಂದ ಮುಖ್ಯಮಂತ್ರಿಗಳು ಇದರತ್ತ ತೀವ್ರ ಗಮನ ಹರಿಸಿ ಸಮಸ್ಯೆಗಳಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಬೇಕಿದೆ.7 ವರ್ಷದಿಂದ ಉಪನಿರ್ದೇಶಕರ ಹುದ್ದೆ ಖಾಲಿ: ಗುಲ್ಬರ್ಗ ವಾರ್ತಾ ಇಲಾಖೆಯ ಉಪನಿರ್ದೇಶಕರ ಹುದ್ದೆ 7ವರ್ಷಗಳಿಂದ ಖಾಲಿಯಿದೆ. ಕೇವಲ ಪ್ರಭಾರಿ ಉಪನಿರ್ದೇಶಕರುಗಳ ಮೇಲೆ ಈ ಕಚೇರಿಯು ಕಾರ್ಯ ನಿರ್ವಹಿಸುತ್ತಿದೆ.ಈ ಕಚೇರಿಗೆ ಉಪನಿರ್ದೇಶಕರಾಗಿ ನೇಮಕಗೊಂಡ ಡಿ. ರಾಮಾನಾಯಕ್, ಎಚ್.ಬಿ.ದಿನೇಶ, ಪುಟ್ಟರಾಜು ಇಲ್ಲಿ ಕಾರ್ಯ ನಿರ್ವಹಿಸದೇ ರಜೆ ಹಾಕಿ ಬೆಂಗಳೂರಿಗೆ ವರ್ಗವಾಗಿ ಹೋಗಿರುತ್ತಾರೆ.ಕೆಲವು ವರ್ಷ ಬೆಳಗಾವಿಯ ಉಪನಿರ್ದೇಶಕ ಬಸವರಾಜ ಕಂಬಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ಈಗ ಹಾಲಿ ಬೆಂಗಳೂರು ಕೇಂದ್ರ ಕಚೇರಿಯ ಪತ್ರಿಕಾ ಮತ್ತು ಸುದ್ದಿ ವಿಭಾಗದ ಉಪನಿರ್ದೇಶಕರಾದ ಆರ್.ಸರಸ್ವತಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಚೇರಿಯ ಪ್ರತಿಯೊಂದು ಕೆಲಸಕ್ಕಾಗಿ ಬೆಂಗಳೂರಿಗೆ ಓಡಾಡುವ ಪರಿಸ್ಥಿತಿ ಇರುತ್ತದೆ. ಸದರಿ ಹುದ್ದೆಯನ್ನು ಆದ್ಯತೆಯ ಮೇಲೆ ಭರ್ತಿ ಮಾಡಬೇಕಾಗಿದೆ.ವಾರ್ತಾ ಸಹಾಯಕ, ಪ್ರಥಮದರ್ಜೆ ಹುದ್ದೆಯೂ ಖಾಲಿ:  ವಾರ್ತಾ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳೂ ಸಹ ಖಾಲಿಯಿದ್ದು, ಇಲಾಖೆಯು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವಾಗುವಂತೆ ಈ ಎಲ್ಲ ಹುದ್ದೆಗಳನ್ನೂ ಸಹ ಪ್ರಥಮಾದ್ಯತೆಯ ಮೇಲೆ ಭರ್ತಿ ಮಾಡಬೇಕಿದೆ.ಭಿನ್ನತೆ ನಿವಾರಿಸಿ: ರಾಜ್ಯದ 30 ಜಿಲ್ಲೆಗಳಲ್ಲಿರುವ ಜಿಲ್ಲಾ ವಾರ್ತಾ ಕಚೇರಿಗಳ ಹುದ್ದೆಗಳನ್ನು ಉಪನಿರ್ದೇಶಕರ ಹುದ್ದೆಗಳಾಗಿ ಮೇಲ್ದರ್ಜೆಗೇರಿಸಿ ಎಲ್ಲ ಜಿಲ್ಲೆಗಳ ವಾರ್ತಾ ಇಲಾಖೆಯ ಅಧಿಕಾರಿಗಳ ಹುದ್ದೆಗಳಲ್ಲಿರುವ ಭಿನ್ನತೆಯನ್ನು ನಿವಾರಿಸಿ ಈ ಹುದ್ದೆಗಳಲ್ಲಿ ಏಕರೂಪತೆಯನ್ನು ತುರ್ತಾಗಿ ತರಬೇಕು. ಇತರ ಹಲವಾರು ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಹುದ್ದೆಗಳು ಸಹ ಗ್ರೂಪ್ `ಎ~ ದರ್ಜೆಯದ್ದಾಗಿದ್ದರೂ, ವಾರ್ತಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಹುದ್ದೆಗಳು ಗ್ರೂಪ್ `ಬಿ~ ದರ್ಜೆಯದ್ದಾಗಿವೆ. ಸಿಎಂ ಆದ ನಂತರ ಜಿಲ್ಲೆಗೆ ಮೊದಲ ಭೇಟಿ ನೀಡುತ್ತಿರುವ ಡಿ.ವಿ.ಸದಾನಂದಗೌಡ ಈ ಕಡೆ ಗಮನಹರಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.