ಶನಿವಾರ, ಸೆಪ್ಟೆಂಬರ್ 21, 2019
21 °C

ಸಾಲಬಾಧೆ: ದೇಗಲಮಡಿ ರೈತನ ಆತ್ಮಹತ್ಯೆ

Published:
Updated:

ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ವರದಿಯಾಗಿದೆ.ಮೃತನನ್ನು ಶಂಕ್ರಪ್ಪ ಹಸನಪ್ಪ ಯನಕೆಪಳ್ಳಿ (65) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಸಾವನ್ನಪ್ಪಿದ್ದು, ಇವರು ಕಳೆದ ಮೂರು ವರ್ಷಗಳ ಹಿಂದೆ ಸ್ಥಳೀಯ ಐಎನ್‌ಜಿ ವೈಶ್ಯ ಬ್ಯಾಂಕಿನಲ್ಲಿ 30 ಸಾವಿರ ರೂಪಾಯಿಗಳ ಬೆಳೆ ಸಾಲ ಪಡೆದಿದ್ದಾರೆ ಎನ್ನಲಾಗಿದ್ದು, ಇಲ್ಲಿಯ ವರೆಗೆ ಸಾಲ ಮರುಪಾವತಿಸಿಲ್ಲ. ಇದರ ಜತೆಗೆ ಖಾಸಗಿ ಸಾಲವೂ 40ರಿಂದ 50 ಸಾವಿರ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಐದು ಎಕರೆ ಜಮೀನು ಹೊಂದಿರುವ ಶಂಕ್ರಪ್ಪನಿಗೆ ಮೂರು ಗಂಡು ಹಾಗೂ ಐದು ಮಂದಿ ಹೆಣ್ಣು ಮಕ್ಕಳಿದ್ದಾರೆ. ಮೃತನ ಪತ್ನಿ ರಂಗಮ್ಮ ನೀಡಿದ ದೂರಿನ ಅನ್ವಯ ಚಿಂಚೋಳಿ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುಭಾಶ್ಚಂದ್ರ ಬಿರಾದಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.ತಹಸೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ ತಹಸೀಲ್ದಾರ್ ಬಿ.ಕೃಷ್ಣಪ್ಪ ಹಾಗೂ ಕಂದಾಯ ನಿರೀಕ್ಷಕ ಮನೋಹರ ತಾದಲಾಪುರ ಅವರು ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.ಪರಿಹಾರಕ್ಕೆ ಆಗ್ರಹ: ತಮ್ಮ ಬೆಂಬಲಿಗರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೃತ ರೈತನಿಗೆ ಅಂತಿಮ ನಮನ ಸಲ್ಲಿಸಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ತಾಲ್ಲೂಕು ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಪ್ರದೀಪ ತಿರ್ಲಾಪುರ ಮುಂತಾದವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.ತಾಲ್ಲೂಕಿನಲ್ಲಿ ಕೆಲ ದಿನಗಳ ಅನಾವೃಷ್ಟಿ, ನಂತರ ಅತಿವೃಷ್ಟಿ ಹೀಗೆ ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿ ನಲುಗಿ ಹೋಗುತ್ತಿರುವ ಅನ್ನದಾತನ ನೆರವಿಗೆ ಸರ್ಕಾರ ಧಾವಿಸಬೇಕು ಹಾಗೂ ಕೇರಳ ಮಾದರಿಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಸಾಲಬಾಧೆಯಿಂದ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

Post Comments (+)