ಶುಕ್ರವಾರ, ಮೇ 27, 2022
28 °C

ಜಾತಿಯ ಪ್ರತಿನಿಧಿಗಳಲ್ಲ, ಬಂಧುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪಂಚಾಯಿತಿ ಸದಸ್ಯರು ಯಾವುದೇ ಧರ್ಮ ಅಥವಾ ಜಾತಿಯ ಪ್ರತಿನಿಧಿಗಳಲ್ಲ. ಅವರು ಆಯಾ ಸಮಾಜದ ಬಂಧುಗಳು ಮಾತ್ರ. ಈ ಚಿಂತನೆ ಇಟ್ಟುಕೊಂಡು ಜಾತ್ಯತೀತವಾಗಿ ಜನರ ಕೆಲಸಗಳನ್ನು ಮಾಡಬೇಕು ಎಂದು ಕುರುಬ ಸಮಾಜದ ಮುಖಂಡ ಚಂದ್ರಕಾಂತ ಖಂಡೋಜಿ ಹಿತವಚನ ಹೇಳಿದರು.ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಜಿಲ್ಲಾಗೊಂಡ, ಕಾಡುಕುರುಬ ಸಂಘವು ಗುಲ್ಬರ್ಗದ ಗುಡ್‌ಲಕ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಎಲ್ಲ ಸಮಾಜದ ಪ್ರತಿನಿಧಿಗಳು. ಯಾವುದೇ ವರ್ಗಕ್ಕೆ ಸೀಮಿತವಲ್ಲ ಎಂದರು.ಕಂಬಳಿಯನ್ನು ಕಳೆದುಕೊಂಡರೆ ಅಸ್ತಿತ್ವಕ್ಕೆ ತೊಂದರೆ ಎಂದ ಅವರು, ಕಂಬಳಿಯನ್ನು ಕಸಿದುಕೊಳ್ಳುವವರು ಇದ್ದಾರೆ. ಜೋಕೆ ಮಾಡಿಕೊಳ್ಳಿ. ಅದು ಅಸ್ತಿತ್ವದ ಪ್ರಶ್ನೆ. ನಾವು ಬಂದ ಮೂಲದ ಅರಿವಿಟ್ಟುಕೊಂಡು ಜಾತ್ಯತೀತವಾಗಿ ಕೆಲಸ ಮಾಡಬೇಕು ಎಂದರು.ಸಂಘದ ಜಿಲ್ಲಾ ಉಪಾಧ್ಯಕ್ಷ ವಸಂತ ಬನ್ನೂರಕರ್ ಮಾತನಾಡಿ, ಪಡೆಯುವ ಖುಷಿ ನೀಡುವುದರಲ್ಲಿ ಇರುವುದಿಲ್ಲ. ಹೀಗಾಗಿ ಮನುಷ್ಯ ನಶಿಸಿ ಹೋಗುತ್ತಾನೆ. ಜನರಿಂದ ಪಡೆದ ಈ ಗೆಲುವಿನ ಖುಷಿಯನ್ನು ಸ್ವಾರ್ಥಕ್ಕೆ ಬಳಸದೇ ಕೆಲಸಗಳ ಮೂಲಕ ಕೊಡುವುದರಲ್ಲಿ ಕಂಡುಕೊಂಡರೆ ಮೇಲೇರಲು ಸಾಧ್ಯ ಎಂದರು.ಸನ್ಮಾನ ಸ್ವೀಕರಿಸಿದ ಪಂಚಾಯಿತಿ ಸದಸ್ಯರು ಮಾತನಾಡಿ, ತಮ್ಮ ಗೆಲುವಿನಲ್ಲಿ ಸಮಾಜದ ಪಾತ್ರ ಹಾಗೂ ಶ್ರಮವನ್ನು ನೆನಪಿಸಿಕೊಂಡರು. ಮಹಿಳೆಯರು ಆಯ್ಕೆಯಾದರೂ ಅವರನ್ನು ಮನೆಗೆ ಸೀಮಿತಗೊಳಿಸಿ ಪುರುಷರೇ ಪ್ರತಿನಿಧಿಗಳಂತೆ ಪಾಲ್ಗೊಳ್ಳುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಸಂಘಗಳಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕು. ಆಗ ಸಮಾಜ ಸದೃಢಗೊಳ್ಳಲು ಸಾಧ್ಯ ಎಂಬಿತ್ಯಾದಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸಂಘದ ಜಿಲ್ಲಾ ಅಧ್ಯಕ್ಷ ರೇವಣಸಿದ್ದಪ್ಪ ಸಾತನೂರು ಅಧ್ಯಕ್ಷತೆ ವಹಿಸಿದ್ದರು. ಇಎಸ್‌ಐಸಿ ನಿರ್ದೇಶಕ ದೇವೀಂದ್ರಪ್ಪ ಮರತೂರ, ಮರಿಗೌಡ ಹುಲ್ಕಲ್, ಜಿಪಂ ಸದಸ್ಯೆ ಹೇಮಾ ಲಿಂಗಣ್ಣ ಪೂಜಾರಿ, ತಾಪಂ ಸದಸ್ಯರಾದ ಸಾ.ಶಿ.ಬೆನಕನಳ್ಳಿ, ಭಗವಂತರಾಯ ಅಂಕಲಗಿ, ಸರೋಜಮ್ಮ ನಾಗೇಂದ್ರಪ್ಪ, ಲಲಿತಾ ನಿಂಗಣ್ಣ ಭಂಡಾರಿ, ಶಿವಪುತ್ರ ಕಡಗಂಚಿ, ಸಮಾಜ ಮುಖಂಡರಾದ ದಿಲೀಪ ಪಾಟೀಲ, ತಿಪ್ಪಣ್ಣ ಪೂಜಾರಿ ಮತ್ತಿತರರು ಇದ್ದರು. ಮಹಾಂತೇಶ ಎಸ್.ಕೌಲಗಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.