ಕಡು ಬೇಸಿಗೆಯಲ್ಲೂ 49 ಕೆರೆಗಳ ಭರ್ತಿಗೆ ಸಿದ್ಧತೆ..!

ಸೋಮವಾರ, ಏಪ್ರಿಲ್ 22, 2019
31 °C
ಬಳೂತಿ ಜಾಕ್‌ವೆಲ್‌ ದುರಸ್ತಿ ಭಾಗಶಃ ಪೂರ್ಣ, ಆರಂಭಗೊಂಡ ನಾಲ್ಕು ಪಂಪ್‌ಸೆಟ್‌ಗಳು

ಕಡು ಬೇಸಿಗೆಯಲ್ಲೂ 49 ಕೆರೆಗಳ ಭರ್ತಿಗೆ ಸಿದ್ಧತೆ..!

Published:
Updated:
Prajavani

ಆಲಮಟ್ಟಿ: ಯುಕೆಪಿಯ ಮಹತ್ವದ ಮುಳವಾಡ ಏತ ನೀರಾವರಿ (ಎಂಎಲ್‌ಐ) ಯೋಜನೆಯ ಬಳೂತಿ ಮುಖ್ಯ ಸ್ಥಾವರದಲ್ಲಿ ಸಂಭವಿಸಿದ್ದ, ವಿದ್ಯುತ್ ಅವಘಡದಿಂದ ಸ್ಥಗಿತಗೊಂಡಿದ್ದ ಪಂಪ್‌ಸೆಟ್‌ಗಳ ದುರಸ್ತಿ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಬುಧವಾರ ನಾಲ್ಕು ಪಂಪ್‌ಸೆಟ್‌ಗಳು ಪರೀಕ್ಷಾರ್ಥವಾಗಿ ಆರಂಭಗೊಂಡಿವೆ.

ಎಂಎಲ್‌ಐ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಒಟ್ಟಾರೆ 49 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ನೀರು ಹರಿಸಲು ಕೆಬಿಜೆಎನ್‌ಎಲ್‌ ಇದೀಗ ಅಗತ್ಯ ಸಿದ್ಧತೆ ನಡೆಸಿದ್ದು, ಸಾಕಾರಕ್ಕಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅನುಮತಿಗೆ ಕಾದಿದೆ.

ಅನುಮತಿ ದೊರೆತ ತಕ್ಷಣವೇ ಎಂಎಲ್‌ಐ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಿ, ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್‌.ಪಿ.ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಡಗಿ ಬಳಿ ಎಂಎಲ್‌ಐನ ಬಿಜಾಪುರ ಮುಖ್ಯ ಕಾಲುವೆಯ ರೈಲ್ವೆ ಕ್ರಾಸಿಂಗ್‌ ಬಳಿ ತಾಂತ್ರಿಕ ಸಮಸ್ಯೆಯಿದ್ದು, ರೈಲ್ವೆ ಇಲಾಖೆ ತಾತ್ಕಾಲಿಕ ಅನುಮೋದನೆ ನೀಡಿದೆ. ಅಲ್ಲಿ ಪೈಪ್‌ಲೈನ್ ಅಳವಡಿಸಿ ನೀರು ಹರಿಸಲು ಗುರುವಾರದಿಂದ ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಕೂಡಗಿ ರೈಲ್ವೆ ಕ್ರಾಸಿಂಗ್ ನಂತರದ ಕೆರೆಗಳಿಗೆ ನೀರು ಹರಿಸಲು 10 ದಿನ ತಡವಾಗಲಿದೆ ಎಂದು ಮಾಹಿತಿ ನೀಡಿದರು.

ದುರಸ್ತಿ: 2018ರ ಡಿ.29ರಂದು ವಿದ್ಯುತ್ ಅವಘಡ ಸಂಭವಿಸಿ, 28 ಮೋಟರ್‌ಗಳ ಪೈಕಿ 21 ಮೋಟರ್‌ಗಳ ಸ್ಟಾರ್ಟರ್‌ಗಳು, ಇದಕ್ಕೆ ವಿದ್ಯುತ್ ಪೂರೈಸುವ ಇನಕಮರ್ ಬ್ರೇಕರ್‌ಗಳು, ಕೇಬಲ್‌ ವೈರಿಂಗ್‌, ಎಚ್‌ಟಿ ಪೆನೆಲ್‌ಗಳು ಸುಟ್ಟು, ಮೋಟರ್‌ಗಳಿಗೆ ಭಾಗಶಃ ಹಾನಿಯಾಗಿತ್ತು.

220 ಕೆ.ವಿ. ಸಾಮರ್ಥ್ಯದ ದೊಡ್ಡದಾದ ಒಂದು ಟ್ರಾನ್ಸ್‌ಫಾರ್ಮರ್‌ ಸಂಪೂರ್ಣ ಭಸ್ಮವಾಗಿತ್ತು. ಇನ್ನೊಂದು ಟಿಸಿಗೆ ಭಾಗಶಃ ಹಾನಿಯಾಗಿ, ಅಂದಾಜು ₹ 8 ಕೋಟಿ ಹಾನಿ ಸಂಭವಿಸಿತ್ತು. 28 ಮೋಟರ್‌ಗಳಲ್ಲಿ ಐದು ಮೋಟರ್‌ಗಳು ಹಳೆಯದಿದ್ದು, ಇನ್ನುಳಿದ 23 ಮೋಟರ್‌ಗಳ ಅಳವಡಿಕೆ ಕಾರ್ಯ ಮೆಗಾ ಕಂಪನಿಯಿಂದ ನಡೆದಿದ್ದು, ಅದು ಪರೀಕ್ಷಾರ್ಥ ಹಂತದಲ್ಲಿತ್ತು.

ಗೃಹ ಸಚಿವ ಎಂ.ಬಿ.ಪಾಟೀಲ ವಿಶೇಷ ಪ್ರಯತ್ನ, ಇದಕ್ಕೂ ಪೂರ್ವದಲ್ಲಿ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

ಸಚಿವ ಎಂ.ಬಿ.ಪಾಟೀಲ ಬಳೂತಿ ಜಾಕ್‌ವೆಲ್‌ಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ, ಮೆಘಾ ಕಂಪನಿ ವತಿಯಿಂದ ಕಾಮಗಾರಿ ಆರಂಭಿಸಲು ಸೂಚಿಸಿದ್ದರು. ಇದರ ಫಲವಾಗಿ, ಮೆಘಾ ಕಂಪನಿಯವರೇ ಕಾಮಗಾರಿ ನಿರ್ವಹಿಸಿ ಕೆಲಸ ಆರಂಭಿಸಿ ತಿಂಗಳಲ್ಲಿಯೇ ದುರಸ್ತಿ ಪೂರ್ಣಗೊಳಿಸಿದ್ದು ವಿಶೇಷ.

ಮೊದಲ ಹಂತದಲ್ಲಿ ಏಳು ಪಂಪ್‌ಸೆಟ್‌ ಆರಂಭ:
ಸದ್ಯ ನಾಲ್ಕು ಪಂಪ್‌ಸೆಟ್‌ಗಳು ಕಾರ್ಯಾರಂಭಗೊಂಡಿದ್ದು, ಒಂದೆರೆಡು ದಿನಗಳಲ್ಲಿ ಇನ್ನೂ ಮೂರು ಸೇರಿ ಒಟ್ಟು ಏಳು ವಿದ್ಯುತ್ ಮೋಟರ್‌ಗಳು ಕಾರ್ಯ ನಿರ್ವಹಿಸಲಿದ್ದು, ಎಂಎಲ್‌ಐ ವ್ಯಾಪ್ತಿಯ ಸದ್ಯದ ಕಾಲುವೆಗೆ ಸಾಕಾಗುತ್ತದೆ ಎಂದು ಎಂಎಲ್‌ಐ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಭರತ ಕಾಂಬಳೆ ತಿಳಿಸಿದರು.

ತಲಾ 5.76 ಕ್ಯುಮೆಕ್ಸ್‌ ನೀರೆತ್ತುವ ಸಾಮರ್ಥ್ಯದ, 2800 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್‌ಗಳು ಇವು. ಮೆಘಾ ಕಂಪನಿಯವರು ಭಾಗಶಃ ಸುಟ್ಟ ವಿವಿಧ ವಿದ್ಯುತ್‌ ಉಪರಕಣಗಳನ್ನು ಬದಲಾಯಿಸಿ ₹ 2.20 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಹೇಳಿದರು.

₹ 14 ಕೋಟಿ ಹೊಸ ಪ್ರಸ್ತಾವನೆ
ಮೊದಲ ಹಂತದ ಬಳೂತಿ ಜಾಕ್‌ವೆಲ್‌ನ ವಿದ್ಯುತ್ ಅವಘಡದ ಇನ್ನಿತರ ಕಾರ್ಯ, ಹೊಸ ಟಿಸಿ ಅಳವಡಿಕೆ, ಆಧುನೀಕರಣ ಹಾಗೂ ಎರಡನೇ ಹಂತದ ಹನುಮಾಪುರ ಜಾಕ್‌ವೆಲ್‌ನ ಆಧುನೀಕರಣಕ್ಕೆ ಅಂದಾಜು ₹ 14 ಕೋಟಿಯ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು, ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯ ಎಂಜಿನಿಯರ್‌ ಆರ್‌.ಪಿ.ಕುಲಕರ್ಣಿ ತಿಳಿಸಿದರು.

1.78 ಟಿಎಂಸಿ ಅಡಿ ನೀರು
‘ಆಲಮಟ್ಟಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯ ಕೆರೆ, ಕುಡಿಯುವ ನೀರು ಭರ್ತಿಗೆ 1.78 ಟಿಎಂಸಿ ಅಡಿ ನೀರು ಮೀಸಲಿರಿಸಲಾಗಿದೆ. ಸದ್ಯ ಎಂಎಲ್‌ಐ ವ್ಯಾಪ್ತಿಯ ಕೆರೆಗಳಿಗೆ ಸುಮಾರು 0.5 ಟಿಎಂಸಿ ಅಡಿಯಷ್ಟು ನೀರು ಅಗತ್ಯವಿದೆ’ ಎಂದು ಕುಲಕರ್ಣಿ ತಿಳಿಸಿದರು.

ರೈತರ ಸಾಕಷ್ಟು ವಿರೋಧದ ಮಧ್ಯೆಯೂ, ಈ ಬಾರಿ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದಾಗಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಕೊರತೆಯಿಲ್ಲ, ಬುಧವಾರ ಜಲಾಶಯದಲ್ಲಿ 36 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿತ್ತು.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !