ಶನಿವಾರ, ಮೇ 15, 2021
24 °C

ರಸ್ತೆ ನಿರ್ಮಾಣದ ರೂ. 7.55 ಲಕ್ಷ ಗುಳುಂ!

ನಾಗರಾಜ ರಾ. ಚಿನಗುಂಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ಅವ್ಯವಹಾರದ ಆರೋಪಗಳು ಗುಲ್ಬರ್ಗ ಜಿಲ್ಲೆ ಮಟ್ಟಿಗೆ ಹೊಸದಲ್ಲ. ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಗೆ ಬರುವ ಸೈಯದ್ ಚಿಂಚೋಳಿ ಗ್ರಾಮದ ದರ್ಗಾವೊಂದಕ್ಕೆ ಒಂದು ಕಿಲೋ ಮೀಟರ್ ರಸ್ತೆ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಿ, ನಂತರ ಕಾಮಗಾರಿ ಕೈಗೊಳ್ಳದೇ ಸಂಪೂರ್ಣ ಹಣ ಗುಳುಂ ಮಾಡಿರುವ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.ಸೈಯದ್ ಚಿಂಚೋಳಿಯಿಂದ ಸೈಯದ್ ಪೀರ್ ದರ್ಗಾವರೆಗೂ ಸಂಚರಿಸಲು ಸುಗಮ ರಸ್ತೆ ಇಲ್ಲದೆ ಭಕ್ತರು ಸಾಕಷ್ಟು ಕಷ್ಟಪಡುತ್ತಿದ್ದರು. ಬರೀ ಕಾಲುದಾರಿ ಇರುವುದರಿಂದ ಮಳೆಗಾಲದಲ್ಲಿ ಆ ಕಡೆ ಹೆಜ್ಜೆ ಹಾಕುವುದಕ್ಕೆ ಆಗುವುದಿಲ್ಲ. ಭಕ್ತರ ಕಷ್ಟಕ್ಕೆ ಸ್ಪಂದಿಸಿದ ತಾಜ ಸುಲ್ತಾನಪುರ ಗ್ರಾಮ ಪಂಚಾಯಿತಿಯು 2006-07ರಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಿಸಿಕೊಡುವ ನಿರ್ಣಯ ಕೈಗೊಂಡಿತ್ತು.ಬರೀ ಕಾಲುದಾರಿ ಇರುವುದನ್ನು ಮುರುಮ್ ರಸ್ತೆಯಾಗಿ ಮಾರ್ಪಡಿಸಲು ತಗುಲುವ ವೆಚ್ಚ ಇತ್ಯಾದಿ ಅಂದಾಜು ಪಟ್ಟಿ ತಯಾರಿಸಲು ಪಂಚಾಯತ್‌ರಾಜ್ ಇಲಾಖೆಯನ್ನು ಕೋರಲಾಗಿತ್ತು. ಗಿಡಗಂಟಿ ಸ್ವಚ್ಛಗೊಳಿಸುವುದು, ಬದಿಯಲ್ಲಿ ಕಿರುನಾಲೆಗಳ ನಿರ್ಮಾಣ, ಮುರುಮ್ ಹಾಕುವುದಕ್ಕೆ ಒಟ್ಟು ರೂ. 9.60 ಲಕ್ಷ ವೆಚ್ಚ ತಗಲುವ ಬಗ್ಗೆ ಪಂಚಾಯತ್‌ರಾಜ್ ಇಲಾಖೆ ಪ್ರಸ್ತಾವ ತಯಾರಿಸಿ ನೀಡಿತ್ತು. ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ ಅದಕ್ಕೆ ಸಹಿ ಮಾಡಿ ಒಪ್ಪಿಗೆ ಸೂಚಿಸಿದ್ದರು.ಸಂಬಂಧಿಸಿದ ಇಲಾಖೆಗಳಿಂದ ಅನುಮೋದನೆ ದೊರೆತ ನಂತರ 26 ಡಿಸೆಂಬರ್, 2006ರಂದು ಎಪಿಎಂಸಿ ಅಧ್ಯಕ್ಷರಾಗಿದ್ದ ನಾಗೀಂದ್ರಪ್ಪ ಪಾಟೀಲ ಅವರಿಂದ ಸೈಯದ್ ಪೀರ್ ದರ್ಗಾವರೆಗಿನ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಕಾರ್ಯ ನಡೆಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪರಮೇಶ್ವರ ಹೊಳಕುಂದಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಹಾಜರಿದ್ದರು.ಉದ್ಯೋಗ ಖಾತರಿ ಹಣ ಬಿಡುಗಡೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಖ್ಯ ಲೆಕ್ಕಾಧಿಕಾರಿ 6 ಮಾರ್ಚ್, 2007ರಂದು ಪಂಚಾಯತ್‌ರಾಜ್ ಇಲಾಖೆಯ ಅಂದಾಜು ವೆಚ್ಚದಲ್ಲಿ ಒಂದಿಷ್ಟು ಕಡಿಮೆಗೊಳಿಸಿ ರಸ್ತೆ ಕಾಮಗಾರಿಗೆ ಒಟ್ಟು ರೂ. 7.55 ಲಕ್ಷ ಹಣವನ್ನು ತಾಂತ್ರಿಕವಾಗಿ ಬಿಡುಗಡೆಗೊಳಿಸಿದ್ದರು.ಎಲ್ಲಿ ಹೋಯಿತು ರಸ್ತೆ: ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಐದು ವರ್ಷ ಮುಗಿಯುತ್ತಿದೆ. ದರ್ಗಾ ರಸ್ತೆಯನ್ನು `ಸ್ವಾಹ~ ಮಾಡಲಾಗಿದೆಯೇ ಎನ್ನುವ ಕುತೂಹಲದಿಂದ ಸೈಯದ್ ಚಿಂಚೋಳಿ ಗ್ರಾಮದ ಸೈಯದ್ ಜಾಫರ್ ರಸ್ತೆ ನಿರ್ಮಾಣ ಕಾರ್ಯದ ಮಾಹಿತಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ 10 ಫೆಬ್ರುವರಿ, 2011ರಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.ಮಾಹಿತಿ ಹಕ್ಕು ಕಾಯ್ದೆ ಪ್ರಕಾರ 45 ದಿನಗಳಲ್ಲಿ ಮಾಹಿತಿ ಒದಗಿಸಲು ಗ್ರಾಮ ಪಂಚಾಯಿತಿ ವಿಫಲವಾಗಿದೆ. ಅಲ್ಲದೆ, ಈ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿಲ್ಲ ಎಂದು ಜಾಫರ್ ಅವರಿಗೆ ಪತ್ರ ಬರೆದಿದೆ. ಈ ಬಗ್ಗೆ ಮಾಹಿತಿ ಆಯೋಗದಲ್ಲಿ ಜಾಫರ್ ದೂರು ದಾಖಲಿಸಿದ್ದಾರೆ. ಇದೇ 22ರಂದು ಮಾಹಿತಿ ಆಯೋಗವು ವಿಚಾರಣೆಗೆ ಹಾಜರಾಗುವಂತೆ ತಾಜ ಸುಲ್ತಾನಪುರ ಪಿಡಿಒ ಅವರಿಗೆ ಸೂಚನೆ ರವಾನಿಸಿದೆ.`ದರ್ಗಾಗೆ ಹೋಗಿ ಬರುವುದಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಕೊನೆಗೂ ಗ್ರಾಮ ಪಂಚಾಯಿತಿಯಿಂದಾದರೂ ರಸ್ತೆ ನಿರ್ಮಾಣವಾಗುತ್ತಿದೆ ಎಂದು ಭಕ್ತರೆಲ್ಲರೂ ಖುಷಿಯಾಗಿದ್ದರು. ಎಷ್ಟು ವರ್ಷ ಕಳೆದರೂ ರಸ್ತೆ ಆಗಿಲ್ಲ. ಆ ರಸ್ತೆ ಎಲ್ಲಿ ಹೋಯಿತು ಎಂಬುದೇ ಗೊತ್ತಾಗಿಲ್ಲ. ಈಗ ಊರಿನ ಜನರೆಲ್ಲ ಅದನ್ನು ಪ್ರಶ್ನಿಸುತ್ತಿದ್ದಾರೆ~ ಎಂದು ಎನ್ನುತ್ತಾರೆ ಮೊಹಮ್ಮದ್ ಜಾಫರ್.ಸೈಯದ್ ಚಿಂಚೋಳಿಯಿಂದ ದರ್ಗಾವರೆಗಿನ ರಸ್ತೆ ಕಾಮಗಾರಿ ಈಗಾಗಲೇ ಮುಗಿದು ಹೋಗಿದೆ ಎಂದು ಪಂಚಾಯತ್‌ರಾಜ್ ಇಲಾಖೆಯಲ್ಲಿನ ದಾಖಲೆಗಳು ಹೇಳುತ್ತಿವೆ. ಈ ಮಹತ್ವದ ದಾಖಲೆ `ಪ್ರಜಾವಾಣಿ~ಗೆ ಲಭಿಸಿದೆ. ಈ ಮಾಹಿತಿ ಒದಗಿಸಲು ಗ್ರಾಮ ಪಂಚಾಯಿತಿ ಮಾತ್ರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಸಾರ್ವಜನಿಕರದು.ಕಣ್ಣಿಗೆ ಮಣ್ಣೆರಚುವ ಕೆಲಸ: ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳು ಸರಿಯಿಲ್ಲ ಎನ್ನುವುದು ಸಾಮಾನ್ಯವಾಗಿ ಗ್ರಾಮಸ್ಥರಿಂದ ಕೇಳಿ ಬರುವ ದೂರು. ಆದರೆ, ಕಾಮಗಾರಿಗೆ ಬಿಡುಗಡೆಗೊಂಡಿದ್ದ ರೂ. 7.55 ಲಕ್ಷ ದೊಡ್ಡ ಮೊತ್ತವನ್ನು ಯಾವುದೇ ಕಾಮಗಾರಿ ಕೈಗೊಳ್ಳದೆ ಜನರ ಕಣ್ಣಿಗೆ ಮಣ್ಣೆರಚಿ ನುಂಗಿ ಹಾಕಿರುವುದು ಯಾವ ನ್ಯಾಯ ಎಂಬುದು ಸೈಯದ್ ಚಿಂಚೋಳಿ ಗ್ರಾಮಸ್ಥರ ಪ್ರಶ್ನೆ.ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಉಸ್ತುವಾರಿಯನ್ನು ಆಯಾ ಗ್ರಾಮ ಅಧ್ಯಕ್ಷ, ಸದಸ್ಯರು, ಕಾರ್ಯದರ್ಶಿ ನೋಡಿಕೊಳ್ಳುತ್ತಾರೆ. ಅಂದು ಸೈಯದ್ ಚಿಂಚೋಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆ ಮೇಲೆ ಕಾಮಗಾರಿ ಏಕೆ ನಡೆಯಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದು.ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಬೇಕು. ಕಾಮಗಾರಿಯ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕು ಎನ್ನುವುದು ಎಲ್ಲ ಗ್ರಾಮಸ್ಥರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.