ಬುಧವಾರ, ಮೇ 18, 2022
23 °C

ನಾಟಕದಲ್ಲಿ ಅಂಗಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಂಗ ಪ್ರದರ್ಶನದ ನೃತ್ಯವನ್ನೇ ಬಂಡವಾಳ ಮಾಡಿಕೊಂಡ ನಾಟಕಗಳಿಂದ ಮಹಿಳಾ ಸಮುದಾಯ ತಲೆ ತಗ್ಗಿಸುವಂತಾಗಿದೆ ಎಂದು ಹಿರಿಯ ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.“ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕಾದ ನಾಟಕಗಳು, ನೃತ್ಯಗಾರ್ತಿಯರ ಅಂಗಪ್ರದರ್ಶನವನ್ನೇ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿವೆ. ಇದರಿಂದ ಸಮಾಜದ ದಿಕ್ಕು ತಪ್ಪುವಂತಾಗಿದೆ” ಎಂದು ಅವರು ಕಿಡಿ ಕಾರಿದರು.ದಿ. ಮೋಹನಚಂದ ಕಿರಣಗಿ ಸ್ಮರಣಾರ್ಥ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಅಕಾಡೆಮಿಯು ಸೋಮವಾರದಿಂದ ಏರ್ಪಡಿಸಿರುವ ಜಿಲ್ಲಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬಹುತೇಕ ನಾಟಕಗಳಲ್ಲಿ ಅಂಗ ಪ್ರದರ್ಶನದ ನೃತ್ಯ ಇರುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಹವ್ಯಾಸಿ ಕಲಾವಿದರು ಅರೆಬೆತ್ತಲೆ ಪ್ರದರ್ಶನವಿಲ್ಲದೇ ನಾಟಕ ಇಲ್ಲ ಎಂಬ ಸ್ಥಿತಿ ತಲುಪಿದ್ದಾರೆ. ಇದು ದುರಂತ. ಇಂಥ ನೃತ್ಯ ಪ್ರದರ್ಶನ ಮಾಡುತ್ತ ಹೋದರೆ ನಾಟಕಕಾರನ ಗತಿ ಏನು? ಪ್ರೇಕ್ಷಕರ ಗತಿ ಏನು? ಸಮಾಜಕ್ಕೆ ಏನು ಸಂದೇಶ ಸಿಕ್ಕೀತು?” ಎಂದು ಪ್ರಶ್ನೆಗಳ ಸುರಿಮಳೆಗೈದ ಆಲ್ದಾಳ, ಯುವಪೀಳಿಗೆ ದಿಕ್ಕುತಪ್ಪಿಸುವ ಇಂಥ ನಾಟಕಗಳಿಂದ ಸಮಾಜ ಕೆಡುವುದು ಖಂಡಿತ ಎಂದು ನುಡಿದರು.‘ಪರ್ಮಿಶನ್ ಬೇಡ’..: ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುವಾಗ ‘ಅಂಗ ಪ್ರದರ್ಶನವಿದ್ದರೆ ಅನುಮತಿ ರದ್ದು’ ಎಂಬ ಷರತ್ತನ್ನು ಜಿಲ್ಲಾಧಿಕಾರಿಗಳು ವಿಧಿಸಬೇಕು ಎಂದು ಸಲಹೆ ಮಾಡಿದ ಆಲ್ದಾಳ, ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿಗಳು ಇಂಥ ನಿಯಮ ವಿಧಿಸಿದ ಮೇಲೆ ಕುಟುಂಬಸಮೇತರಾಗಿ ಜನರು ನಾಟಕ ನೋಡಲು ಬರುತ್ತಿದ್ದಾರೆ ಎಂದು ಹೇಳಿದರು. “ಕೇವಲ ಮನೋರಂಜನೆ ಮಾತ್ರವಲ್ಲ; ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಪ್ರಯತ್ನವನ್ನೂ ನಾಟಕಗಳು ಮಾಡುತ್ತವೆ” ಎಂದು ಅವರು ನುಡಿದರು.ದುಬಾರಿ ಶುಲ್ಕಕ್ಕೆ ಆಕ್ಷೇಪ: ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ರಾಜಾರಾಂ, ರಂಗಮಂದಿರದ ಶುಲ್ಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. “ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡೂವರೆ ಸಾವಿರ ರೂಪಾಯಿ ಶುಲ್ಕ ಇದ್ದರೆ ಇಲ್ಲಿ ವಿಧಿಸುವ ರೂ 15,000 ಶುಲ್ಕ ಹೊರೆ ಎನ್ನಬಹುದು. ರಂಗತಂಡಗಳಿಗೆ ಅನುಕೂಲವಾಗುವಂತೆ ಈ ಶುಲ್ಕ ಕಡಿಮೆ ಮಾಡಬೇಕು” ಎಂದು ಸಲಹೆ ಮಾಡಿದರು. ಗುಲ್ಬರ್ಗ ವಿವಿ ಕುಲಪತಿ ಡಾ. ಈ.ಟಿ.ಪುಟ್ಟಯ್ಯ ಮುಖ್ಯ ಅತಿಥಿಯಾಗಿದ್ದರು.ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ. ಸುಜಾತಾ ಜಂಗಮಶೆಟ್ಟಿ, ಟಿ.ವಿ. ಮಾಧ್ಯಮದಿಂದ ರಂಗ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಭಾಗದಲ್ಲಿ ರಂಗಚಟುವಟಿಕೆ ಉತ್ತೇಜಿಸಲು ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಡಾ. ಎಸ್.ಎಂ.ಹಿರೇಮಠ, ಬಸವಲಿಂಗಪ್ಪ ವಿಭೂತಿ ನಾಗಣಸೂರ, ಗಿರಿಜಾ ಪೂಜಾರ್ ಅವರನ್ನು ಸನ್ಮಾನಿಸಲಾಯಿತು. ಸಂದೀಪ ರಂಗಗೀತೆ ಹಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಪ್ರಸನ್ನಕುಮಾರ ವಂದಿಸಿದರು. ಮಂಡಲಗಿರಿ ಪ್ರಸನ್ನ ನಿರೂಪಿಸಿದರು.ನಾಟಕ ಪ್ರದರ್ಶನ: ಹಾನಗಲ್‌ನ ಶ್ರೀಗುರು ಕುಮಾರೇಶ್ವರ ನಾಟ್ಯಸಂಘದ ಕಲಾವಿದರು ದಿ.ಕೆ.ಎಸ್. ಮಹದೇವಯ್ಯ ರಚಿಸಿದ ‘ನಾಯಿಗಳಿವೆ ಎಚ್ಚರಿಕೆ’ ನಾಟಕವನ್ನು ಶ್ರೀಧರ ಹೆಗಡೆ ನಿರ್ದೇಶನದಲ್ಲಿ ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.