ಶನಿವಾರ, ಮಾರ್ಚ್ 25, 2023
24 °C

ಭಯೋತ್ಪಾದನೆಗೆ ಧರ್ಮ ಇಲ್ಲ ಅಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲದೆ ಇರಬಹುದು, ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರಲ್ಲವೇ? ಎಂದು ಪ್ರಶ್ನಿಸುವ ಮೂಲಕವೇ ಜಾತ್ಯತೀತತೆಯ ಬಗ್ಗೆ ಮಾತನಾಡುವವರನ್ನೆಲ್ಲ ಸಂಘ ಪರಿವಾರದ ನಾಯಕರು ಬಾಯಿಮುಚ್ಚಿಸುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಸಾರಾಸಗಟಾಗಿ ಈ ಅಭಿಪ್ರಾಯವನ್ನು ನಿರಾಕರಿಸುವಂತೆಯೂ ಇರಲಿಲ್ಲ.ಯಾಕೆಂದರೆ ಇದಕ್ಕೆ ವಿರುದ್ದವಾದ ಅಭಿಪ್ರಾಯವನ್ನು ಬಿಂಬಿಸುವಂತಹ ಆರೋಪಗಳಿದ್ದರೂ ಆಧಾರಗಳಿರಲಿಲ್ಲ. (ನಾಥುರಾಮ್ ಗೋಡ್ಸೆಗಿಂತ ದೊಡ್ಡ ಭಯೋತ್ಪಾದಕ ಬೇರೆ ಯಾರು ಬೇಕು ಎಂದು ಕೇಳುವವರೂ ಇದ್ದಾರೆ ಎನ್ನುವುದು ಬೇರೆ ಮಾತು)  ಕೆಲವು ನಾಯಕರು ಇನ್ನಷ್ಟು ಮುಂದೆ ಹೋಗಿ ‘ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವೇ ಇಲ್ಲ’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದದ್ದೂ ಉಂಟು. ಆದರೆ ಕಳೆದೆರಡು ವರ್ಷಗಳಿಂದ ಭಯೋತ್ಪಾದನೆ ಬಗ್ಗೆ ಇವರೆಲ್ಲರ  ಹೇಳಿಕೆಗಳ ಧಾಟಿಯೂ ಬದಲಾಗಿದೆ.‘ಭಯೋತ್ಪಾದನೆಗೆ ಧರ್ಮ ಇಲ್ಲ’ ಎಂದು ಎರಡು ವರ್ಷಗಳ ಮೊದಲು ಗಟ್ಟಿದನಿಯಲ್ಲಿ ಹೇಳಿದವರು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ. ‘ಭಯೋತ್ಪಾದಕರೆಂದರೆ ಭಯೋತ್ಪಾದಕರು ಅಷ್ಟೇ, ಅವರು ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ’ ಎಂದು ಸಂಘ ಪರಿವಾರದ ನಾಯಕರೂ ಈಗ ಹೇಳುತ್ತಿದ್ದಾರೆ. ಈ ದಿಢೀರ್ ‘ಮನಪರಿವರ್ತನೆ’ಗೆ ಕಾರಣ ಏನು ಎಂಬುದು ಕುತೂಹಲಕಾರಿ.


 


2008ರ ಸೆಪ್ಟೆಂಬರ್ ಒಂಬತ್ತರಂದು ಮಾಲೆಗಾಂವ್‌ನಲ್ಲಿ ನಡೆದ ಮೋಟಾರ್‌ಬೈಕ್ ಬಾಂಬು ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಮಹಾರಾಷ್ಟ್ರದ ‘ಭಯೋತ್ಪಾದನೆ ನಿಗ್ರಹ ದಳ’ (ಎಟಿಎಸ್) ಬಂಧಿಸಿದ ನಂತರವೇ ಸಂಘ ಪರಿವಾರದ ನಾಯಕರ ‘ಮನಪರಿವರ್ತನೆ’ ಪ್ರಾರಂಭವಾಗಿದ್ದು.  ಹಿರಿಯ ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ನೇತೃತ್ವದ ಎಟಿಎಸ್ ಬಂಧಿಸಿದ ಹತ್ತು ಆರೋಪಿಗಳೂ ಹಿಂದೂಗಳಾಗಿದ್ದರು.ಬಂಧನಕ್ಕೆಡಾದವರಲ್ಲಿ ಬಿಜೆಪಿಯ ಮಹಿಳಾ ಘಟಕವಾದ ದುರ್ಗಾವಾಹಿನಿಯ ಮಾಜಿ ಸದಸ್ಯೆ ಪ್ರಾಗ್ಯಾ ಠಾಕೂರ್, ಸೇವೆಯಲ್ಲಿದ್ದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಸೇನಾಧಿಕಾರಿ ಮೇಜರ್  ರಮೇಶ್ ಉಪಾಧ್ಯಾಯ, ಸ್ವಯಂಘೋಷಿತ ಸ್ವಾಮಿ ದಯಾನಂದ ಪಾಂಡೆ ಮೊದಲಾದವರಿದ್ದರು. ಇವರೆಲ್ಲರೂ ಹಿಂದೂ ಮಹಾಸಭಾದ ಸ್ಥಾಪಕರಾದ ವೀರ್ ಸಾವರ್ಕರ್ ಅವರ ಸಿದ್ದಾಂತದ ಪ್ರೇರಣೆಯಿಂದ ಪುಣೆಯಲ್ಲಿ ಸ್ಥಾಪನೆಗೊಂಡ  ‘ಅಭಿನವ ಭಾರತ’ ಎಂಬ ಉಗ್ರಬಲಪಂಥೀಯ ಸಂಘಟನೆಯ ಜತೆ ಸಂಬಂಧ ಹೊಂದಿದ್ದವರು.ಆರು ಮಂದಿ ಸತ್ತು ನೂರಕ್ಕೂ ಹೆಚ್ಚು ಮಂದಿ ಗಾಯಹೊಂದಿದ್ದ ಮಾಲೆಗಾಂವ್ ಬಾಂಬು ಸ್ಫೋಟ ನಡೆದ ಮರುಗಳಿಗೆಯಲ್ಲಿಯೇ ಯಥಾಪ್ರಕಾರ ಪೊಲೀಸರ ಸಂಶಯದ ಕಣ್ಣು ಬಿದ್ದದ್ದು ಭಾರತೀಯ ಮುಜಾಹಿದ್ದೀನ್ ಸಂಘಟನೆಯ ಮೇಲೆ.ಆಗ ಒಂದಷ್ಟು ಮುಸ್ಲಿಮ್ ಯುವಕರನ್ನೂ ಪೊಲೀಸರು ಬಂಧಿಸಿದ್ದರು. ಆದರೆ ಎಟಿಎಸ್ ನೇತೃತ್ವ ವಹಿಸಿ ಹೇಮಂತ ಕರ್ಕರೆ ತನಿಖೆಗೆ ಹೊರಟಾಗ ಕಾಲಿಗೆ ತೊಡರಿಕೊಂಡ ಸತ್ಯಗಳೇ ಬೇರೆ. ಕೆಲವರಿಗೆ ಕಹಿ ಎನಿಸಿದ ಈ ಸತ್ಯಗಳು ಬಹಿರಂಗಗೊಂಡ ನಂತರ ಕರ್ಕರೆ ವಿರುದ್ಧ ಸಂಘ ಪರಿವಾರದ ನಾಯಕರು ವಾಗ್ದಾಳಿ ಪ್ರಾರಂಭಿಸಿದ್ದರು. ಇದರಿಂದ ಮಾನಸಿಕ ಕ್ಲೇಶಕ್ಕೆ ಒಳಗಾಗಿದ್ದ ಸ್ಥಿತಿಯಲ್ಲಿದ್ದ ಕರ್ಕರೆ  ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕರ ದಾಳಿಗೆ ಬಲಿಯಾದರು.ಆದರೆ ಸತ್ಯಕ್ಕೆ ಸಾವಿಲ್ಲ, ಕರ್ಕರೆ ಅಗೆದು ತೆಗೆದ ಸತ್ಯವನ್ನು ದೃಢೀಕರಿಸುವಂತಹ ಹಲವು ಬೆಳವಣಿಗೆಗಳು ಕಳೆದೆರಡು ವರ್ಷಗಳಲಿ ನಡೆದಿವೆ. ಮಾಲೆಗಾಂವ್ ಪ್ರಕರಣದ ಆರೋಪಿಗಳಾದ ‘ಅಭಿನವ ಭಾರತ’ ಸಂಘಟನೆಗೆ ಸೇರಿರುವ ಸುಧಾಕರ ದ್ವಿವೇದಿ ಮತ್ತು ದಯಾನಂದ ಪಾಂಡೆ ಬಾಂಬು ಸ್ಫೋಟ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಪೊಲೀಸರಿಗೆ ತಪ್ಪೊಪ್ಪಿಗೆ ನೀಡಿದ್ದರೂ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಅದು ಸ್ವೀಕಾರಾರ್ಹ ಅಲ್ಲದ ಕಾರಣ ಅದಕ್ಕೆ ಮಹತ್ವ ಸಿಕ್ಕಿರಲಿಲ್ಲ.ಆದರೆ ಇತ್ತೀಚೆಗೆ ಮೆಕ್ಕಾ ಮಸೀದಿ ಬಾಂಬು ಸ್ಫೋಟದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಹಿಂದೂ ಭಯೋತ್ಪಾದನೆಯ ಹಲವಾರು ಕರಾಳ ಮುಖಗಳನ್ನು ಅನಾವರಣಗೊಳಿಸಿದೆ. ಮ್ಯಾಜಿಸ್ಟ್ರೇಟ್ ಮುಂದೆ ಕಾನೂನುಬದ್ಧವಾಗಿ ನೀಡಿರುವ ಈ ಹೇಳಿಕೆಯನ್ನು ನ್ಯಾಯಾಲಯ ಕೂಡಾ ಒಪ್ಪಿಕೊಳ್ಳಬೇಕಾಗಿರುವುದರಿಂದಲೇ ಇದಕ್ಕೆ ಹೆಚ್ಚಿನ ಮಹತ್ವ ಇದೆ.ಸ್ವಾಮಿ ಅಸೀಮಾನಂದರ ಪ್ರಕಾರ 2006 ಮತ್ತು 2008ರಲ್ಲಿ ಮಾಲೇಗಾಂವ್, 2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್, ಜೈಪುರದ ಅಜ್ಮೀರ್ ಷರೀಫ್ ದರ್ಗಾ ಮತ್ತು ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಬಾಂಬುಸ್ಪೋಟ ನಡೆಸಿದ್ದು ಆರ್‌ಎಸ್‌ಎಸ್ ಜತೆ ಸಂಬಂಧ ಹೊಂದಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಹೊರತು ಮುಸ್ಲಿಮ್ ಭಯೋತ್ಪಾದಕರಲ್ಲ.ತನ್ನ ಮನಪರಿವರ್ತನೆಗೆ ಅಸೀಮಾನಂದ ನೀಡಿರುವ ಕಾರಣ ಕೂಡಾ ಕುತೂಹಲಕಾರಿಯಾಗಿದೆ. ‘ಹೈದರಾಬಾದ್‌ನ ಜೈಲಲ್ಲಿ ನನ್ನೊಡನೆ ಇದ್ದ ಮುಸ್ಲಿಮ್ ಬಾಲಕನೊಬ್ಬ ಮೆಕ್ಕಾ ಮಸೀದಿ ಬಾಂಬು ಸ್ಫೋಟದ ಆರೋಪಿ ಎಂದು ಗೊತ್ತಾಯಿತು. ತಾನು ಮಾಡದ ಅಪರಾಧಕ್ಕಾಗಿ ಆ ಬಾಲಕ ಒಂದುವರೆ ವರ್ಷದಿಂದ ಜೈಲಲ್ಲಿದ್ದ. ನಾನು ಜೈಲಲ್ಲಿದ್ದಷ್ಟು ದಿನ ನನ್ನನ್ನು ಪ್ರೀತಿಯಿಂದ ನೋಡಿಕೊಂಡ ಆತನನ್ನು ಕಂಡು ಪಶ್ಚಾತಾಪ ಪಟ್ಟು ತಪ್ಪೊಪ್ಪಿಕೊಳ್ಳಬೇಕು ಎಂದು ನಿರ್ಧರಿಸಿದೆ’ ಎಂದು ಸ್ವಾಮಿ ಅಸೀಮಾನಂದ ತನ್ನ 48 ಪುಟಗಳ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ.ಬಾಂಬುಸ್ಪೋಟ ನಡೆಸಬೇಕಾದ ಸ್ಥಳಗಳು ಮತ್ತು ಅದಕ್ಕಾಗಿ ನಿಯೋಜಿಸಬೇಕಾದ ವ್ಯಕ್ತಿಗಳ ಆಯ್ಕೆ ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲ ಮತ್ತು ಸ್ಫೋಟಕಗಳ ಸಂಗ್ರಹದ ಬಗ್ಗೆ ನಡೆದ ಸಮಾಲೋಚನಾ ಸಭೆಯ ವಿವರಗಳು ತಪ್ಪೊಪ್ಪಿಗೆಯಲ್ಲಿ ಇವೆ.ಅಸೀಮಾನಂದರ ತಪ್ಪೊಪ್ಪಿಗೆಯನ್ನು ಯಾವುದೋ ಆರೋಪಿಯ ಬಾಯಿಬಡುಕತನ ಎಂದು ತಳ್ಳಿಹಾಕುವಂತಿಲ್ಲ. ಅವರೊಬ್ಬ ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತ. ಬಾಲ್ಯದಿಂದಲೇ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದ ಅಸೀಮಾನಂದ ಮೂಲತಃ ಕೊಲ್ಕೊತ್ತಾದವರಾದರೂ ಇತ್ತೀಚಿನ ವರ್ಷಗಳಲ್ಲಿ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಗುಡ್ಡಗಾಡು ಜನಾಂಗದ ಕಲ್ಯಾಣಕ್ಕಾಗಿ ‘ಶಬರಿಧಾಮ’ ನಡೆಸುತ್ತಿದ್ದರು.ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಯವರಿಗೆ ಮಾತ್ರವಲ್ಲ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಆರ್‌ಎಸ್‌ಎಸ್‌ನ ಮಾಜಿ ಸರಸಂಘಚಾಲಕ ಕೆ.ಎಸ್.ಸುದರ್ಶನ್, ಈಗಿನ ಸರಸಂಘಚಾಲಕ ಮೋಹನ್ ಭಾಗ್ವತ್ ಅವರಿಗೂ ಆಪ್ತರಾಗಿದ್ದವರು. ಇವರೆಲ್ಲರ ಜತೆಯಲ್ಲಿ ಅಸೀಮಾನಂದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಈಗ ಆರ್‌ಎಸ್‌ಎಸ್ ವಕ್ತಾರರು ‘ಆರ್‌ಎಸ್‌ಎಸ್ ಜತೆ ಅಸೀಮಾನಂದ ಸಂಬಂಧ ಇಲ್ಲ’ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಕಳೆದ ಹತ್ತು ವರ್ಷಗಳಿಂದ ‘ಹಿಂದೂ ಭಯೋತ್ಪಾದನೆ’ಯ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಅದನ್ನು ಸಾಬೀತು ಪಡಿಸುವಂತಹ ಪುರಾವೆಗಳು ತನಿಖಾ ಸಂಸ್ಥೆಗಳ ಕೈ ಸೇರತೊಡಗಿದ್ದು ಕಳೆದ 4-5 ವರ್ಷಗಳಿಂದ. ಇನ್ನೂ ಕುತೂಹಲದ ಸಂಗತಿ ಎಂದರೆ ಈ ಪುರಾವೆಗಳನ್ನು ನಿರ್ಲಕ್ಷಿಸಿ ತನಿಖೆ ದಾರಿತಪ್ಪುವಂತೆ ಮಾಡುವ ಪ್ರಯತ್ನ ನಡೆದಿರುವುದು ಮತ್ತು ಈಗಲೂ ನಡೆಯುತ್ತಿರುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾಲದಲ್ಲಿಯೇ. 2006ರಲ್ಲಿ ಮಾಲೇಗಾಂವ್‌ನಲ್ಲಿ 31 ಮುಸ್ಲಿಮರನ್ನು ಬಲಿತೆಗೆದುಕೊಂಡ ಬಾಂಬುಸ್ಪೋಟ ನಡೆದಾಗಲೇ ತನಿಖಾಧಿಕಾರಿ ಗಳಿಗೆ ಹಿಂದೂ ಭಯೋತ್ಪಾದನೆಯ ವಾಸನೆ ಹತ್ತಿತ್ತು. ಆದರೆ ಆ ಪ್ರಕರಣವನ್ನು ನಿಷೇಧಿತ ‘ಸಿಮಿ’ತಲೆಗೆ ಕಟ್ಟಿದ ಪೊಲೀಸರು ಒಂಬತ್ತು ಮುಸ್ಲಿಮ್ ಯುವಕರನ್ನು ಬಂಧಿಸಿದ್ದರು.ಅವರೂ ಈಗಲೂ ಜೈಲಲ್ಲಿದ್ದಾರೆ. ಅದರ ನಂತರ ನಡೆದದ್ದು ಹರ್ಯಾಣದ ಪಾಣಿಪತ್‌ನಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಬಾಂಬುಸ್ಫೋಟ. 68 ಮಂದಿ ಸಾವಿಗೀಡಾದ ಆ ಸ್ಫೋಟದಲ್ಲಿ ಪೊಲೀಸರು ತಕ್ಷಣ ಸಂಶಯಪಟ್ಟದ್ದು ಲಷ್ಕರ್ ತೊಯ್ಬಾ ಮತ್ತು ಜೆಇಎಂ ಮೇಲೆ. ಆದರೆ ತನಿಖೆ ಮುಂದುವರಿಸಿದಾಗ ಅದು ಸಾಗಿದ್ದು ಇಂದೋರ್‌ನ ಹಿಂದೂ ಕಾರ್ಯಕರ್ತನೊಬ್ಬನ ಮನೆ ಬಾಗಿಲಿಗೆ.2006ರ ಮಾಲೇಗಾಂವ್ ಬಾಂಬುಸ್ಫೋಟದ ತನಿಖೆ ಕೂಡಾ ಅದೇ ಮನೆ ಬಾಗಿಲಿಗೆ ಬಂದು ನಿಂತಿತ್ತು. ಸಂಜೋತಾ ಎಕ್ಸ್‌ಪ್ರೆಸ್ ಮತ್ತು ಹೈದರಾಬಾದ್‌ನ ಮೆಕ್ಕಾಮಸೀದಿಗಳ ಬಾಂಬುಸ್ಪೋಟಕ್ಕೆ ಬಳಸಿದ್ದ ಸ್ಫೋಟಕಗಳು ಒಂದೇ ಮಾದರಿಯದ್ದಾಗಿತ್ತು. ಅಜ್ಮೀರ್ ಷರೀಫ್ ದರ್ಗಾ ಬಾಂಬುಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದು ಹಿಂದೂ ಸಂಘಟನೆಗಳ ನಾಯಕರನ್ನು. ಇವೆಲ್ಲವೂ ಹಿಂದೂ ಭಯೋತ್ಪಾದನೆಯ ವಿಶಾಲವಾದ ಚಿತ್ರವನ್ನು ಸ್ಪಷ್ಟವಾಗಿ ನೀಡಿದರೂ ಆ ದಿಕ್ಕಿನಲ್ಲಿ ತನಿಖೆ ಮುಂದುವರಿಯಲೇ ಇಲ್ಲ.ಸಂಜೋತಾ ಎಕ್ಸ್‌ಪ್ರೆಸ್ ಬಾಂಬುಸ್ಫೋಟದದಲ್ಲಿ ‘ಹಿಂದೂ ಮೂಲಭೂತವಾದಿಗಳ ಕೈವಾಡ’ದ ಪುರಾವೆಗಳನ್ನು ಸಂಗ್ರಹಿಸುತ್ತಾ ಆರೋಪಿಗಳ ಬಂಧನಕ್ಕೆ ಸಿದ್ದತೆ ನಡೆಸುತ್ತಿದ್ದ ಹರಿಯಾಣದ ವಿಶೇಷ ತನಿಖಾ ದಳ ಹಠಾತ್ತನೇ ತನಿಖೆಯನ್ನು ಸ್ಥಗಿತಗೊಳಿಸಿತ್ತು. ಆಗ ಪ್ರಧಾನಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣನ್ ಅವರ ಸೂಚನೆ ಇದಕ್ಕೆ ಕಾರಣ ಎಂಬ ಸುದ್ದಿ ಆ ದಿನಗಳಲ್ಲಿ ಪತ್ರಿಕೆಗಳಲ್ಲಿ ಚರ್ಚೆಯಾಗಿತ್ತು. ‘ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆದಾಗೆಲ್ಲ ಅದಕ್ಕೆ ಪಾಕಿಸ್ತಾನವನ್ನೇ ಸರ್ಕಾರ ಹೊಣೆಯನ್ನಾಗಿ ಮಾಡುತ್ತಿರುವುದರಿಂದ, ಆ ಅಭಿಪ್ರಾಯಕ್ಕೆ ವಿರುದ್ಧವಾಗಿ  ಹಿಂದೂ ಭಯೋತ್ಪಾದಕರ ಕೈವಾಡವೂ ಇದೆ ಎಂದು ಹೇಳುವುದು ಸರಿಯಲ್ಲ’ ಎನ್ನುವ ಕಾರಣಕ್ಕೆ ಹರಿಯಾಣ ಪೊಲೀಸರ ತನಿಖೆಯನ್ನು ಸ್ಥಗಿತಗೊಳಿಸಲಾಗಿತ್ತಂತೆ.ಸಂಜೋತಾ ಎಕ್ಸ್‌ಪ್ರೆಸ್ ಬಾಂಬುಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕೆಂದು ಹರಿಯಾಣ ಸರ್ಕಾರ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡದಿರುವುದಕ್ಕೂ ಇದೇ ಕಾರಣ ಇರಬಹುದು.

ಸತ್ಯವನ್ನು ಬಹಳ ದಿನ ಬಚ್ಚಿಡಲು ಆಗುವುದಿಲ್ಲ. ಈ ಪ್ರಕರಣ ಮತ್ತೆ ಸುದ್ದಿಯಾಗಿದ್ದು ಹೇಮಂತ ಕರ್ಕರೆ ಎಂಬ ಧೀರ, ನಿಷ್ಠಾವಂತ ಅಧಿಕಾರಿಯಿಂದಾಗಿ. 2008ರಲ್ಲಿ ಮಾಲೇಗಾಂವ್‌ನಲ್ಲಿ ಎರಡನೇ ಬಾರಿ ನಡೆದ ಬಾಂಬುಸ್ಫೋಟದ ತನಿಖೆಗೆ ರಚಿಸಲಾದ ಎಟಿಎಸ್‌ನ ಮುಖ್ಯಸ್ಥ ಕರ್ಕರೆ ಕೇವಲ ಎರಡೇ ತಿಂಗಳಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ ಸುಮಾರು 1400 ಪುಟಗಳ ದೀರ್ಘ ವರದಿ ಹಿಂದೂ ಭಯೋತ್ಪಾದನೆಯ ಎಲ್ಲ ಮುಖಗಳನ್ನು ವಿವರವಾಗಿ ತೆರೆದಿಟ್ಟಿದೆ. ಆದರೆ ಕರ್ಕರೆ ಅವರ ಅಕಾಲಿಕ ಸಾವಿನ ನಂತರ ತನಿಖೆಯ ಹಾದಿ ತಪ್ಪಿತು. ಕರ್ಕರೆ ತಮ್ಮ ತನಿಖಾವರದಿಯಲ್ಲಿ ಬಾಂಬು ಸ್ಫೋಟದ ರೂವಾರಿಗಳೆಂದು ಗುರುತಿಸಿದ್ದ ಆರ್‌ಎಸ್‌ಎಸ್ ಪ್ರಚಾರಕರಾದ ರಾಮಚಂದ್ರ ಕಲ್ಸಾಂಗ್ರ ಮತ್ತು ಸಂದೀಪ್ ಡಾಂಗೆ ಅವರನ್ನು ಮಹಾರಾಷ್ಟ್ರದ ಎಟಿಎಸ್‌ನ ನೂತನ ಮುಖ್ಯಸ್ಥ ಕೆ.ಪಿ.ರಘುವಂಶಿ ಬಂಧಿಸುವ ಪ್ರಯತ್ನವನ್ನೇ ಮಾಡಿಲ್ಲ. ಇದರ ಬದಲಿಗೆ ಇವರಿಬ್ಬರ ಪಾತ್ರ  ಎಂದು ಆರೋಪಪಟ್ಟಿಯಲ್ಲಿ ಅವರು ದಾಖಲಿಸಿ ಕೈತೊಳೆದುಕೊಂಡಿದ್ದಾರೆ.ಆದರೆ ಈಗ ತನಿಖೆ ಹಾದಿ ತಪ್ಪಿ ಎಲ್ಲೆಲ್ಲೋ ಸುತ್ತಿ ಮತ್ತೆ ಆರ್‌ಎಸ್‌ಎಸ್ ಕಚೇರಿ ಮುಂದೆಯೇ ಬಂದು ನಿಂತಿದೆ. ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಪೊಲೀಸರು ಇತ್ತೀಚೆಗೆ ದೇವೇಂದ್ರ ಗುಪ್ತಾ ಮತ್ತು ಲೋಕೇಶ್ ಶರ್ಮಾ ಎಂಬ ಇಬ್ಬರು ಆರ್‌ಎಸ್‌ಎಸ್ ಪ್ರಚಾರಕರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ಮತ್ತು ಮೆಕ್ಕಾ ಮಸೀದಿ ಬಾಂಬುಸ್ಫೋಟದ ರೂವಾರಿ ಆರ್‌ಎಸ್‌ಎಸ್‌ನ ಕೇಂದ್ರ ಸಮಿತಿ ಸದಸ್ಯರಾದ ಇಂದ್ರೇಶ್ ಕುಮಾರ್ ಎಂದು ಸಿಬಿಐಗೆ ತಿಳಿಸಿದ್ದಾರೆ.ಈಗ ಅಸೀಮಾನಂದ ಸ್ವಾಮಿ ಬಾಂಬು ಸ್ಫೋಟ ಪ್ರಕರಣಗಳಲ್ಲಿ ಇಂದ್ರೇಶ್ ಕುಮಾರ್ ಪಾತ್ರವನ್ನು ಬಿಡಿಸಿಬಿಡಿಸಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಆರ್‌ಎಸ್‌ಎಸ್ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಭಯೋತ್ಪಾದನೆಗೆ ಧರ್ಮ ಇಲ್ಲ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.