ಗುರುವಾರ , ಜೂನ್ 4, 2020
27 °C

ಮಂದಿರ, ಮಸೀದಿ, ಚರ್ಚ್‌ಗಳಿಲ್ಲದ ಕಾಲೋನಿ

ಪ್ರಜಾವಾಣಿ ವಾರ್ತೆ ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಮಂದಿರ, ಮಸೀದಿ, ಚರ್ಚ್‌ಗಳಿಲ್ಲದ ಕಾಲೋನಿ

ಗುಲ್ಬರ್ಗ: ಕನ್ನಡದ ಮೊದಲ ಉಪಲಬ್ದ ಕೃತಿ `ಕವಿರಾಜ ಮಾರ್ಗ~ದ ಕರ್ತೃ ಶ್ರೀ ವಿಜಯನಿಗೆ ಆಶ್ರಯ ನೀಡಿದ ಅರಸ ನೃಪತುಂಗ. ನೃಪತುಂಗನ ನಾಡಿನವರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ಅವರ ಹೆಸರಿನಲ್ಲಿ ಯಾವುದೇ ಸ್ಮಾರಕಗಳನ್ನು ನಿರ್ಮಿಸುವುದು ಒತ್ತಟ್ಟಿಗಿರಲಿ ಕೊನೆಪಕ್ಷ ಒಂದು ವೃತ್ತಕ್ಕಾದರೂ ಅವರ ಹೆಸರಿಟ್ಟಿಲ್ಲ.ಆದರೆ ನಗರದ ಹೊರ ವಲಯ (ಶಹಾಬಾದ್ ರಸ್ತೆ)ದಲ್ಲಿ ಹಾದು ಹೋಗುತ್ತಿದ್ದರೆ ದಟ್ಟ ಹಸಿರಿನಿಂದ ಕೂಡಿರುವ ಸುಂದರ ಮತ್ತು ಶಾಂತ ಪರಿಸರವೊಂದು ಕಣ್ಣಿಗೆ ಬೀಳುತ್ತದೆ. ಆ ಕಡೆ ಸ್ವಲ್ಪ ಕಣ್ಣು ಹಾಯಿಸಿದರೆ ಸಾಕು, ನೃಪತುಂಗ ಹೆಸರಿನ ಬಡಾವಣೆಯೊಂದು ಕಾಣುತ್ತದೆ.ಹಿನ್ನೆಲೆ: ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ ಈ ಹಿಂದೆ ಶಹಾಬಾದ್‌ನ ಎಬಿಎಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅಲ್ಲಿನ ಕಾರ್ಮಿಕರಿಗಾಗಿ 1988ರಲ್ಲಿ ಈ ಬಡಾವಣೆಯನ್ನು ನಿರ್ಮಿಸಿದರು. ಅವರ ಶ್ರಮದ ಫಲವಾಗಿಯೇ ಎನ್ನುವಂತೆ ಅಲ್ಲೊಂದು ಸುಂದರ ವಾತಾವರಣ ನಿರ್ಮಾಣಗೊಂಡಿದೆ.ಬಡಾವಣೆ ಪ್ರವೇಶಿಸುತ್ತಿದ್ದಂತೆಯೇ ಉತ್ತಮ ಗುಣಮಟ್ಟದಿಂದ ಕೂಡಿದ ರಸ್ತೆಗಳು, ಅಪಾರ ಸಸ್ಯ ಕಾಶಿಯ ಉದ್ಯಾನ ಕಣ್ಣಿಗೆ ಮುದ ನೀಡುತ್ತವೆ. ಸುಸಜ್ಜಿತ ಕಾಂಪೌಂಡ್ ಹೊಂದಿರುವ 100 ಮನೆಗಳಿವೆ. ಸುಮಾರು ಸಾವಿರ ಜನ ಇಲ್ಲಿ ವಾಸವಾಗಿದ್ದಾರೆ. ಇದರಲ್ಲಿ 450 ಜನ ಮತದಾರರಿದ್ದಾರೆ.ನೃಪತುಂಗ ಸಹಕಾರಿ ಸಂಘ: ಬಡವಾಣೆಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಇಲ್ಲಿನ 11 ಜನ ಯುವಕರು ಸೇರಿ `ನೃಪತುಂಗ ಸಹಕಾರಿ ಸಂಘ~ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳಿಂದ ಪ್ರತಿ ತಿಂಗಳು ತಲಾ 100 ರೂಪಾಯಿ ತೆಗೆದುಕೊಳ್ಳುತ್ತಾರೆ. ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೆ ಸಂಗ್ರಹವಾಗಿರುವ ಹಣವನ್ನೇ ಖರ್ಚು ಮಾಡಿ ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ.ಮಂದಿರ, ಮಸೀದಿ, ಚರ್ಚ್‌ಗಳಿಲ್ಲ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮದವರು ವಾಸಿಸುವ ಈ ಬಡಾವಣೆಯಲ್ಲಿ ಯಾವುದೇ ಮಂದಿರ, ಮಸೀದಿ, ಚರ್ಚ್‌ಗಳಿಲ್ಲ. ಆಯಾ ಧರ್ಮದ ವ್ರತ, ಸಂಪ್ರದಾಯ, ಆಚರಣೆಗಳನ್ನು ಕೇವಲ ತಮ್ಮ ಮನೆಗೆ ಸೀಮಿತ ಮಾಡಿಕೊಂಡಿದ್ದಾರೆ. ಆದರೂ ಎಲ್ಲ ಧರ್ಮೀಯರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬಾಳುತ್ತಿದ್ದಾರೆ.ಸಿಟಿ ಬಸ್ ಸೌಲಭ್ಯ ಅಗತ್ಯ: ನಗರದಿಂದ ಕೇವಲ ಐದಾರು ಕಿ.ಮೀ. ದೂರದಲ್ಲಿರುವ ಈ ಬಡಾವಣೆಗೆ ಸಿಟಿ ಬಸ್ ಇಲ್ಲದಿರುವುದು ಮಾತ್ರ ಆಶ್ಚರ್ಯದ ಸಂಗತಿ. ಸಿಟಿ ಬಸ್ ವ್ಯವಸ್ಥೆ ಇಲ್ಲದ್ದರಿಂದ ಇಲ್ಲಿನ ನಿವಾಸಿಗಳು ಇನ್ನೂ ದ್ವೀಪವಾಸಿಗಳಂತಿದ್ದಾರೆ.ಒಂದುವೇಳೆ ಇಲ್ಲಿಗೆ ಸಿಟಿ ಬಸ್ ಸೌಲಭ್ಯ ಕಲ್ಪಿಸಿದರೆ ಶಕ್ತಿ ನಗರ, ಇಟ್ಟಂಗಿ ಭಟ್ಟಿ, ಬಂಜಾರಾ ನಗರ, ರಾಜಾಪುರ ನಿವಾಸಿಗಳಿಗೂ ಅನುಕೂಲವಾಗಲಿದೆ. ಈಚೆಗೆ ಇದೇ ರಸ್ತೆಯಲ್ಲಿ ಆರಂಭವಾಗಿರುವ ಶೆಟ್ಟಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕೆನ್‌ಬ್ರಿಡ್ಜ್ ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

 

ಬಡಾವಣೆ ವಾಯ್ಸ...

ಕುಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಮ್ಮ ಬಡಾವಣೆಯಿಂದಲೇ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾಗುತ್ತಿದ್ದರಿಂದ ಯಾವುದೇ ಗಂಭೀರ ಸಮಸ್ಯೆಗಳು ತಲೆದೋರಿರಲಿಲ್ಲ. ಆದರೆ ಈಗ ಈ ಬಡಾವಣೆ ಇದೀಗ ವಾರ್ಡ್ ಸಂಖ್ಯೆ ಒಂದು ಮತ್ತು ವಾರ್ಡ್ ಎರಡರಲ್ಲಿ ಹಂಚಿ ಹೋಗಿದ್ದರಿಂದ ಸಂಬಂಧಿಸಿದ ಗ್ರಾಮ ಪಂಚಾಯಿತಿ ಸದಸ್ಯರ‌್ಯಾರೂ ಈ ಕಡೆ ಗಮನ ಹರಿಸುತ್ತಿಲ್ಲ.ಹೀಗಾಗಿ ಡ್ರೈನೇಜ್, ಸಿಟಿ ಬಸ್, ಬೀದಿದೀಪ ಮುಂತಾದವುಗಳ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಸಂಬಂಧಿಸಿದವರು ಈ ಕಡೆ ಗಮನಹರಿಸಬೇಕಾಗಿದೆ ಎಂದು ಸೂರ್ಯಕಾಂತ ನಾಶಿ, ಶಂಕರ  ಕಟ್ಟಿಮನಿ,  ಭೀಮರಾವ ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.