ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

7

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

Published:
Updated:

ಗುಲ್ಬರ್ಗ: ‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಮತ್ತು ಗುರುಕುಲ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಯುಕ್ತ ಆಶ್ರಯದಲ್ಲಿ ನಗರದ ವಿವಿಧ ಕಾಲೇಜುಗಳ ವಾಣಿಜ್ಯ ಪಿಯು ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಉದಯಶಂಕರ ಭಟ್, ‘ಪಿಯು ನಂತರ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಜಾಗತೀಕರಣದ ಬಳಿಕ ನಿರ್ವಹಣಾ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳು ಸೃಷ್ಟಿಯಾಗಿದ್ದು, ಉತ್ತಮ ಸಂವಹನ ಕೌಶಲ ಮತ್ತು ವೃತ್ತಿಪರತೆ ಬೆಳೆಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪತ್ರಿಕೆಗಳನ್ನು ನಿಯತವಾಗಿ ಓದುವ ಮೂಲಕ ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಆಗುವ ದೈನಂದಿನ ಬೆಳವಣಿಗೆಗಳ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.“ಒಂದು ವಾರದ ಈ ‘ತ್ವರಿತ ಮಾರ್ಗದರ್ಶನ’ ಶಿಬಿರದಲ್ಲಿ ಲೆಕ್ಕಶಾಸ್ತ್ರ ವಿಶೇಷ ತರಬೇತಿ ಜತೆಗೆ ಪರೀಕ್ಷೆ ಎದುರಿಸುವುದು, ಪರೀಕ್ಷಾ ಸಿದ್ಧತೆ, ವೃತ್ತಿಕೌಶಲ, ವ್ಯಕ್ತಿತ್ವ ವಿಕಸನ ಮತ್ತಿತರ ವಿಷಯಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಬೆಳೆಸಲು ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನಗರದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಮುಕ್ತವಾಗಿ ಪಾಲ್ಗೊಳ್ಳಬಹುದು” ಎಂದು ಪ್ರಾಚಾರ್ಯ ಸಂಜೀವ ಆರ್.ಪಾಟೀಲ ತಿಳಿಸಿದರು.ಈ ತಿಂಗಳ 5ರಿಂದ ಶಿಬಿರ ನಡೆಯುತ್ತಿದ್ದು, ಈ ತಿಂಗಳ 12ರಂದು ಮುಂಜಾನೆ ವ್ಯವಹಾರ ಅಧ್ಯಯನ ಹಾಗೂ ಮಧ್ಯಾಹ್ನ ಲೆಕ್ಕಶಾಸ್ತ್ರ ವಿಷಯದ ಸಿದ್ಧತಾ ಪರೀಕ್ಷೆಗಳನ್ನೂ ಅಯೋಜಿಸಲಾಗಿದೆ. ಈ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು 16ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು.ಗುರುಕುಲ ಪಿ.ಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಮುರಳಿ ಮಾತನಾಡಿ, “ವಿದ್ಯಾರ್ಥಿಗಳು ಪಿಯುಸಿ ಬಳಿಕ ತಮ್ಮ ಆಸಕ್ತಿಯ ಕ್ಷೇತ್ರ ಆಯ್ದುಕೊಂಡು, ಪರಿಶ್ರಮದಿಂದ ಅಧ್ಯಯನ ನಡೆಸಬೇಕು. ಪೈಪೋಟಿಯುತ ಜಗತ್ತಿನಲ್ಲಿ ವೃತ್ತಿಕೌಶಲ ಬೆಳೆಸಿಕೊಳ್ಳುವುದು ಅನಿವಾರ್ಯ” ಎಂದು ಹೇಳಿದರು.‘ಪ್ರಜಾವಾಣಿ’ ಪ್ರಸರಣ ವಿಭಾಗದ ಬಸವರಾಜ್, ರಾಧಾಕೃಷ್ಣ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ 120 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry