ಬಸವಕಲ್ಯಾಣದಲ್ಲಿ ಮಠಾಧೀಶರು ಶಾಖೆ ಸ್ಥಾಪಿಸಲಿ

7

ಬಸವಕಲ್ಯಾಣದಲ್ಲಿ ಮಠಾಧೀಶರು ಶಾಖೆ ಸ್ಥಾಪಿಸಲಿ

Published:
Updated:

ಬಸವಕಲ್ಯಾಣ: ಸಮಾಜದಲ್ಲಿ ಪರಿವರ್ತನೆ ತರಲು ಕ್ರಾಂತಿ ಮಾಡಿದ ಶರಣರ ನಾಡು ಬಸವಕಲ್ಯಾಣದಲ್ಲಿ ನಾಡಿನ ಎಲ್ಲ ಮಠಾಧೀಶರು ತಮ್ಮ ಶಾಖಾ ಮಠಗಳನ್ನು ಸ್ಥಾಪಿಸಬೇಕು. ಮುಸ್ಲಿಮರ ಮೆಕ್ಕಾದಂತೆ ಇದು ಲಿಂಗಾಯತರ ಧರ್ಮಕೇಂದ್ರ ಆಗಲು ಸರ್ವರೂ ಸಹಕರಿಸಬೇಕು ಎಂದು ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ವಿನಂತಿಸಿದ್ದಾರೆ.ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಭಾನುವಾರ ಅಪಾರ ಭಕ್ತರ ಮಧ್ಯೆ ಆರಂಭವಾದ ಮೂರು ದಿನ ನಡೆಯುವ 10 ನೇ ಕಲ್ಯಾಣಪರ್ವದ ಉದ್ಘಾಟನಾ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.ಬಸವಣ್ಣನವರ ಕಾಲದಲ್ಲಿ ಗಣಪರ್ವಗಳು ನಡೆಯುತ್ತಿದ್ದವು. ಅದರಂತೆಯೇ ಇಂದು ಕಲ್ಯಾಣಪರ್ವ ನಡೆಸುತ್ತಿದ್ದೇವೆ. ಬಸವಧರ್ಮ ಪೀಠದಿಂದ ಮೊದಲು ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿನ ದೇವಸ್ಥಾನ ಮತ್ತು ಐಕ್ಯಸ್ಥಳವನ್ನು ಉಳಿಸಲು ಪ್ರಯತ್ನಿಸಿ ಅಲ್ಲಿ ವಿವಿಧ ಸ್ಮಾರಕಗಳನ್ನು ಕಟ್ಟಲಾಗಿದೆ. ನಂತರ ಬಸವಕಲ್ಯಾಣದಲ್ಲಿ ಜಾಗ ಖರೀದಿಸಿ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಇದಲ್ಲದೆ ಒಂದೆಡೆ ಶರಣಮೇಳ ಮತ್ತೊಂದೆಡೆ ಕಲ್ಯಾಣಪರ್ವ ಹಮ್ಮಿಕೊಂಡು ಈ ಎರಡೂ ಸ್ಥಳಗಳ ಮಹತ್ವ ಎಲ್ಲೆಡೆ ಹರಡಲು ಯತ್ನಿಸಲಾಗುತ್ತಿದೆ ಎಂದರು.12 ನೇ ಶತಮಾನದಲ್ಲಿ ಸಂಪ್ರದಾಯವಾದಿಗಳು ಬಸವಣ್ಣನವರ ಕೆಲಸಕ್ಕೆ ವಿರೋಧಿಸುತ್ತಿದ್ದರು. ಆದರೆ ಇಂದು ಬಸವಣ್ಣನ ಹೆಸರು ಹೇಳುವವರೇ ಶರಣರ ಕೆಲಸಕ್ಕೆ ವಿರೋಧಿಸಿ ಕೊಂಡಿ ಮಂಚಣ್ಣನವರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಬಸವಣ್ಣನವರ 108 ಅಡಿ ಪುತ್ಥಳಿಯ ಕೆಲಸ ಒಂದು ವರ್ಷದೊಳಗಾಗಿ ಪೂರ್ಣಗೊಳ್ಳಲಿದೆ. ರಾಷ್ಟ್ರಪತಿಯವರಿಂದ ಅದರ ಅನಾವರಣ ನಡೆಯಲಿದೆ. ಮೂರ್ತಿ ಸಿದ್ಧಪಡಿಸುವುದಕ್ಕೆ ಅಪಾರ ಹಣ ಖರ್ಚಾಗುತ್ತಿದ್ದು ದೇಣಿಗೆ ಇಲ್ಲವೆ ಸಾಲದ ರೂಪದಲ್ಲಾದರೂ ಹಣಕೊಟ್ಟು ಸಹಾಯ ಮಾಡಬೇಕು ಎಂದೂ ಮಾತಾಜಿ ಕೇಳಿಕೊಂಡರು.ಧಾರವಾಡದ ಮಾತೆ ಗಂಗಾದೇವಿ ಧ್ವಜಾರೋಹಣ ನೆರವೆರಿಸಿದರು. ಸಂಸದ ಎನ್.ಧರ್ಮಸಿಂಗ್, ಜಗದ್ಗುರು ಚೆನ್ನಬಸವಾನಂದ ಸ್ವಾಮೀಜಿ, ಶಾಸಕ ರಹೀಮಖಾನ್ ಮಾತನಾಡಿದರು. ಪ್ರಮುಖರಾದ ಸಿ.ಎಸ್.ಮಾಲಿಪಾಟೀಲ, ಬೈಲಪ್ಪ ಕೊಟಗಿ, ಬಿ.ನಾರಾಯಣರಾವ, ಶ್ರೀಕಾಂತ ಸ್ವಾಮಿ, ಜಗದೀಶ ಬಿರಾದಾರ ಇದ್ದರು. ಗಂಗಶೆಟ್ಟಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಪಾಟೀಲ ಅತಿವಾಳ ಸ್ವಾಗತಿಸಿದರು.ಆರ್.ಜಿ.ಶೆಟಗಾರ ನಿರೂಪಿಸಿದರು. ವಿಜಯಲಕ್ಷ್ಮಿ ಈಶ್ವರ ವಚನ ಗಾಯನ ಮಾಡಿದರು, ಸ್ವಾತಿ ಮತ್ತು ಶೃತಿ ನೃತ್ಯ ಮಾಡಿದರು. ಈ ಸಂದರ್ಭದಲ್ಲಿ ಲಾದಾ ಗ್ರಾಮದ ಭಕ್ತರು ಲದ್ದೆ ಸೋಮಣ್ಣನ ಜ್ಯೋತಿ ಮತ್ತು ಹಂದ್ರಾಳ ಗ್ರಾಮಸ್ಥರು ಪಾದಯಾತ್ರೆ ಮೂಲಕ ಶರಣ ಘಟ್ಟಿವಾಳಯ್ಯನ ಜ್ಯೋತಿ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry