ಗುರುವಾರ , ಮೇ 19, 2022
20 °C

ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸಿದ ಸಭಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜೀವನದ ಮೌಲ್ಯಗಳ ವಿವರಣೆ... ಜತೆಗೊಂದಿಷ್ಟು ಭಕ್ತಿ ಸಂಗೀತ. ಮಾನವನ ಬದುಕಿನ ಉದ್ದೇಶವಾದರೂ ಏನು? ಎಂಬ ಚಿಂತನೆ ಸರಳ ಮಾತುಗಳಲ್ಲಿ...ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಭಾರತೀಯ ಸಂಸ್ಕೃತಿ ಮತ್ತು ಸ್ವಾಮಿ ವಿವೇಕಾನಂದರ ಬೋಧನೆ ಕುರಿತು ಸೋಮವಾರ ಸಂಜೆ ಇಲ್ಲಿ ಉಪನ್ಯಾಸ ನೀಡಿದ ಇಬ್ಬರು ಸ್ವಾಮೀಜಿಗಳು ಸಭಿಕರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದರು.ಸುಮಧುರ ಗಾಯನದೊಂದಿಗೆ ಉಪನ್ಯಾಸ ಆರಂಭಿಸಿದ ಧರ್ಮವೃತಾನಂದ ಸ್ವಾಮೀಜಿ, ಹಾಡಿನ ಮೂಲಕವೇ ಜೀವನದ ಉದಾತ್ತ ಗುರಿಗಳನ್ನು ಪ್ರಸ್ತುತಪಡಿಸಿದರು. ಒಂದೊಂದು ಪಲ್ಲವಿ ಹಾಡಿನ ಜತೆಗೊಂದಿಷ್ಟು ಚಿಂತನ-ಮಂಥನ ನಡೆಯಿತು. ಗಾದೆ, ಕಥೆಗಳು ಅವರ ಮಾತಿಗೆ ಜೀವಂತಿಕೆ ತಂದವು. ಅವರ ಉಪನ್ಯಾಸದ ಸಾರ ಇಲ್ಲಿದೆ:ಕಂಬಳಿಯಲ್ಲ: ನದಿಯ ದಡದಲ್ಲಿ ಹೊರಟಿದ್ದ ಇಬ್ಬರು ಗೆಳೆಯರಿಗೆ ನೀರಿನಲ್ಲಿ `ಕಂಬಳಿ~ ತೇಲುತ್ತಿರುವುದು ಕಾಣಿಸಿತು. ಸ್ನೇಹಿತನಿಗೆ ಈಜಿಕೊಂಡು ಹೋಗಿ ಅದನ್ನು ತರುವಂತೆ ಆತ ಹೇಳಿದ. ಸ್ನೇಹಿತ ನದಿಯಲ್ಲಿ ಧುಮಿಕಿ, ಕಂಬಳಿ ಹಿಡಿದುಕೊಂಡ. ಎಷ್ಟು ಹೊತ್ತಾದರೂ ದಂಡೆಗೆ ಬಾರದೇ ಹೋದಾಗ, ಈತ ಕೂಗಿದ. ಅದಕ್ಕೆ ಆತ `ನಾನು ಬಿಡಬೇಕೆಂದರೂ ಅದು ಬಿಡ್ತಿಲ್ಲ. ಏಕೆಂದರೆ ಅದು ಕಂಬಳಿಯಲ್ಲ. ಕರಡಿ..!~ಪ್ರಪಂಚವನ್ನು ಕಂಬಳಿ ಎಂದು ಭಾವಿಸಿದ್ದೇವೆ. ಆದರೆ ಸಂಸಾರ ಸಾಗರಕ್ಕೆ ಧುಮಿಕಿದ ಮೇಲೆ ಅದು ನಮ್ಮನ್ನು ಹಿಡಿದುಕೊಂಡ ಮೇಲೆ ಗೊತ್ತಾಗಿದ್ದು ಕಂಬಳಿಯಲ್ಲ, ಕರಡಿ ಎಂದು.ಮಿತಿ ಇರಲಿ: ಎಲ್ಲಕ್ಕೂ ಮಿತಿ ಇದೆ. ಅದನ್ನು ಮಾನವ ಅರಿಯಬೇಕು. ಗಳಿಸಿ ಗಳಿಸಿ ಸ್ವಿಸ್ ಬ್ಯಾಂಕಿನಲ್ಲಿ ಇಡುವ ದುಡ್ಡನ್ನು ತಾವೂ ಅನುಭವಿಸುವುದಿಲ್ಲ; ಮಕ್ಕಳಿಗೂ ಉಪಯೋಗವಿಲ್ಲ. ಬಳಕೆಯಾಗುವುದು ಬ್ಯಾಂಕಿಗೆ ಮಾತ್ರ. ಕೋಟಿ ದುಡ್ಡಿದ್ದರೂ ತಿನ್ನುವುದು ಹಿಡಿ ಅನ್ನ ಎಂಬುದನ್ನು ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ನೆಮ್ಮದಿ ನೆಲೆಸುತ್ತದೆ.ಅಚ್ಚರಿ: ಮಹಾಭಾರತದ ಅರಣ್ಯ ಪರ್ವದಲ್ಲಿ ನಾಲ್ವರು ಪಾಂಡವರು ಯಕ್ಷನ ಪ್ರಶ್ನೆ ಧಿಕ್ಕರಿಸಿ ನೀರು ಕುಡಿದು ಮೂರ್ಛೆ ಹೋಗುತ್ತಾರೆ. ಆಗ ಬರುವ ಧರ್ಮರಾಯ, ಯಕ್ಷನ ಎಲ್ಲ ಪ್ರಶ್ನೆಗೆ ಉತ್ತರಿಸುತ್ತಾರೆ. ಅದರ ಪೈಕಿ `ಅಚ್ಚರಿ ಎಂದರೆ ಯಾವುದು?~ ಎಂದು ಕೇಳಿದಾಗ, `ಸಾಯುವವರನ್ನು ದಿನ ನೋಡುತ್ತಿದ್ದರೂ ತಾನು ಮಾತ್ರ ಚಿರಂಜೀವಿ ಎಂದು ಮನುಷ್ಯ ಭಾವಿಸಿರುವುದೇ ದೊಡ್ಡ ಅಚ್ಚರಿ~ ಎಂದು ಧರ್ಮ ಹೇಳುತ್ತಾನೆ. ಇದನ್ನು ತಿಳಿದುಕೊಂಡರೆ ಜೀವನ ಸದಾ ಆನಂದ...ಆತ್ಮೀಯ: `ಹಿತ~ ಕೊಡುವವನು ಸ್ನೇಹಿತ; ಆತ್ಮದ ಜತೆ ಕೊನೆವರೆಗೆ ಇರುವನು ಆತ್ಮೀಯ. ಕೇವಲ ಭಗವಂತ ಆತ್ಮೀಯನಾಗಬಲ್ಲನೇ ಹೊರತೂ ಇನ್ನಾರೂ ಅಲ್ಲ. ತಾಯಿ ಮಡಿಲಲ್ಲಿನ ಮಗುವಿನ ಹಾಗೆ ಭಗವಂತನ ಸಾನಿಧ್ಯದಲ್ಲಿ ಇರುವ ಸಂತರು ಶಾಂತಿ- ನೆಮ್ಮದಿಯ ಸೂತ್ರ ಕಂಡುಕೊಂಡವರು.ನಂತರ ಉಪನ್ಯಾಸ ನೀಡಿದ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಪರಮಸುಖಾನಂದ ಸ್ವಾಮೀಜಿ, ಹಲವು ವರ್ಷಗಳು ಕಳೆದರೂ ವಿವೇಕಾನಂದರ ಸಂದೇಶ ಇಂದಿಗೂ ಪ್ರಸ್ತುತವಾಗಿವೆ ಎಂದು ಬಣ್ಣಿಸಿದರು.ಗುಲ್ಬರ್ಗ ರಾಮಕೃಷ್ಣ ಮಠದ ಮಹೇಶ್ವರಾನಂದ ಸ್ವಾಮೀಜಿ, ಅರವಿಂದೋ ಸೊಟೈಟಿ ಅಧ್ಯಕ್ಷ ಶ್ರೀಪಾದರಾವ ಘಂಟೋಜಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವರಾಜ ಪಾಟೀಲ, ವಿನಾಯಕ ಮುಕ್ಕಾ, ಭರತರಾಜ್ ಇದ್ದರು. ಸುಧೀಂದ್ರ ದೇಶಪಾಂಡೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.