ಭಾನುವಾರ, ಮೇ 22, 2022
29 °C

ಸುವರ್ಣಭೂಮಿ ಯೋಜನೆ: ರೈತರಿಗೆ ಸಿಗದ ಸಹಾಯಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: `ಸುವರ್ಣಭೂಮಿ~ ಯೋಜನೆಯ 2011-12ನೇ ಸಾಲಿಗೆ ಆಯ್ಕೆಯಾದ ಫಲಾನುಭವಿ ರೈತರಿಗೆ ಸರ್ಕಾರ ಸಹಾಯಧನ ಬಿಡುಗಡೆ ಮಾಡಿದ್ದರೂ, ಅದು ಈವರೆಗೆ ತಮಗೆ ತಲುಪಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಗುಲ್ಬರ್ಗ ತಾಲ್ಲೂಕಿನ ಅವರಾದ (ಬಿ) ಹೋಬಳಿ ವ್ಯಾಪ್ತಿಯ 28 ಹಳ್ಳಿಗಳ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಗೆ ಆಯ್ಕೆಯಾಗಿದ್ದರು. ರೈತರಿಗೆ ಬಿತ್ತನೆಯ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ದು, ಸೂಪರ್ ಮಾರ್ಕೆಟ್‌ನ ಎಸ್.ಬಿ.ಎಚ್.  ಬ್ಯಾಂಕ್‌ನಲ್ಲಿ ಹಣವಿನ್ನೂ ಜಮಾ ಆಗಿಲ್ಲ ಎಂದು ಹೇಳುತ್ತಾರೆ.ಸರ್ಕಾರ ಕೊಟ್ಟರೂ ಬ್ಯಾಂಕಿನವರು ಮಾತ್ರ ತಮಗೆ ಹಣ ಪಾವತಿಸುತ್ತಿಲ್ಲ ಎಂಬುದು ರೈತರ ದೂರು.

ಸಹಾಯಧನದ ಮೊದಲ ಕಂತು ರೂ. 5,000 ಮುಂಗಾರು ಬಿತ್ತನೆ ಅವಧಿಯಲ್ಲಿ ಬೀಜ ಹಾಗೂ ಗೊಬ್ಬರ ಖರೀದಿಗೆಂದು ರೈತರಿಗೆ ಸರ್ಕಾರ ಕೊಡುವುದಾಗಿ ಭರವಸೆ ನೀಡಿತ್ತು.ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಹಣವನ್ನು ಹಲವು ಬ್ಯಾಂಕುಗಳ ಮೂಲಕ ರೈತರಿಗೆ ವಿತರಿಸಲಾಗಿದೆ. ಆದರೆ ಸೂಪರ್ ಮಾರ್ಕೆಟ್ ಎಸ್‌ಬಿಎಚ್ ಶಾಖೆಯಲ್ಲಿ ಖಾತೆ ಹೊಂದಿರುವ ರೈತರಿಗೆ ಮಾತ್ರ ಈ ಸಹಾಯಧನ ಪಡೆಯುವ `ಅದೃಷ್ಟ~ ಇನ್ನೂ ಒದಗಿಲ್ಲ.5,000 ರೂಪಾಯಿಗಾಗಿ ನಾಲ್ಕು ತಿಂಗಳಿಂದ ಪ್ರತಿದಿನ ಬ್ಯಾಂಕ್ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಲೆದು ಸಾಕಾಗಿದೆ. ಆದರೆ ಸಹಾಯಧನದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಬನ್ನೂರ ಗ್ರಾಮದ ರೈತ ಅಜೀಜ್ ಖಾನ್ ಮಾನಖಾರಿ `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.ಬ್ಯಾಂಕಿಗೆ ಪತ್ರ: ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಎಸ್‌ಬಿಎಚ್ ಶಾಖೆಗೆ ಕಳಿಸಲಾದ ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದ್ದು, ಅದರಲ್ಲಿ 38 ಫಲಾನುಭವಿಗಳಿಗೆ ಚೆಕ್ ಸಂಖ್ಯೆ: ಸಿಡಿ 144540 (ದಿ: 29.6.2011) ಮೂಲಕ 1,83,438 ರೂಪಾಯಿಗಳನ್ನು ಜಮಾ ಮಾಡಲಾದ ಬಗ್ಗೆ ಮಾಹಿತಿ ಇದೆ.ಇದಲ್ಲದೇ, ಫಲಾನುಭವಿಗಳ ಹೆಸರು, ಖಾತೆ ಸಂಖ್ಯೆ ಹಾಗೂ ಸಹಾಯಧನದ ಮೊತ್ತ ನಮೂದಿಸಲಾಗಿದೆ. ಸಂಬಂಧಿಸಿದ ಖಾತೆಗೆ ಸಹಾಯಧನ ಪಾವತಿಸುವಂತೆ ಕೋರಲಾಗಿದೆ. ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, `ನಿಮ್ಮ ಹಣ ಬ್ಯಾಂಕಿಗೆ ಜಮಾ ಆಗಿದೆ~ ಎಂದು ಹೇಳುತ್ತಿದ್ದಾರೆ. ಅತ್ತ ಬ್ಯಾಂಕ್‌ನಲ್ಲಿ ಅಧಿಕಾರಿಗಳನ್ನು ವಿಚಾರಿಸಿದಾಗ `ಹಣ ಇನ್ನೂ ನಮಗೆ ಬಂದಿಲ್ಲ. ಬಂದ ತಕ್ಷಣ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ~ ಎಂದು ಹೇಳುತ್ತಾರೆ.ಆಕ್ರೋಶ: ಸರ್ಕಾರ ಸಕಾಲಕ್ಕೆ ಸಹಾಯಧನ ಬಿಡುಗಡೆ ಮಾಡಿದರೂ ಈವರೆಗೆ ರೈತರ ಕೈಗೆ ಹಣ ಸಿಕ್ಕಿಲ್ಲ. ಇದರ ಹಿಂದಿರುವ ರಹಸ್ಯವಾದರೂ ಏನು? ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮುಖಂಡ ವಿರೂಪಾಕ್ಷಪ್ಪ ತಡಕಲ್ ಪ್ರಶ್ನಿಸಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡದೇ ಹೋದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.