ಶುಕ್ರವಾರ, ಮೇ 27, 2022
23 °C

ಗುಲ್ಬರ್ಗ ವಿವಿ ಬಂದ್ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಮಹಿಳಾ ಅಧ್ಯಯನವನ್ನು ಸೇರಿಸುವಂತೆ ಆಗ್ರಹಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಬುಧವಾರ ಕರೆ ನೀಡಿದ್ದ ‘ಗುಲ್ಬರ್ಗ ವಿವಿ ಬಂದ್’ ಯಶಸ್ವಿಯಾಗಿದೆ.ರಾಜ್ಯದ ವಿವಿಧ ಇಲಾಖೆಗಳ ಉದ್ಯೋಗ ನೇಮಕಾತಿ ವೃಂದದ ಅಡಿಯಲ್ಲಿ ತಿದ್ದುಪಡಿಯ ಮೂಲಕ ಮಹಿಳಾ ಅಧ್ಯಯನ (ಎಂಡಬ್ಲ್ಯೂಎಸ್) ಹಾಗೂ ಮಹಿಳಾ ಅಧ್ಯಯನ ಪದವಿ ವಿಷಯ (ಬಿಡಬ್ಲ್ಯೂಎಸ್) ಸೇರಿಸಬೇಕು. ಇದನ್ನು ರಾಜ್ಯದ ವಿವಿಧ ಸರ್ಕಾರಿ ಹುದ್ದೆಗಳಿಗಾಗಿ ಪರಿಗಣಿಸಬೇಕು. ಎಲ್ಲ ವಿವಿಗಳಲ್ಲಿ ಮಹಿಳಾ ಅಧ್ಯಯನ ಪದವಿಯ ಐಚ್ಛಿಕ ವಿಷಯವಾಗಿ ಪ್ರಾರಂಭಿಸಲು ಮಾರ್ಗದರ್ಶನ ನೀಡುವುದು, ವಿವಿ ಮಟ್ಟದಲ್ಲಿ ಮಹಿಳಾ ಅಧ್ಯಯನ ಬೋಧಿಸಲು ಉಪನ್ಯಾಸಕರನ್ನಾಗಿ ಮಹಿಳಾ ಅಧ್ಯಯನದ ಅರ್ಹ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು.ಈಗಾಗಲೇ ಬೆಂಗಳೂರು ಮತ್ತು ವಿಜಾಪುರ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ನೇಮಕಗೊಂಡಿರುವ ಬೇರೆ ಬೇರೆ ಅಧ್ಯಯನ ವಿಭಾಗಗಳ ಉಪನ್ಯಾಸಕರನ್ನು ತೆಗೆದು, ಅವರ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಮಹಿಳಾ ಅಧ್ಯಯನದ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬೇಕು ಹಾಗೂ ಕೆಪಿಎಸ್‌ಸಿ ಹಾಗೂ ಕೆಎಎಸ್ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ ಮಹಿಳಾ ಅಧ್ಯಯನವನ್ನು ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಅರ್ಹತೆಯಿರುವ ಉಳಿದ ವಿವಿಧ ಇಲಾಖೆಗಳಲ್ಲಿ ಮಹಿಳಾ ಅಧ್ಯಯನದ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸರ್ಕಾರಿ ಹುದ್ದೆಗಳಿಗಾಗಿ ನೇಮಕಾತಿಗೆ ಪರಿಗಣಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.  ಈ ಹಿಂದೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಸರ್ಕಾರ ಈ ‘ಗುಲ್ಬರ್ಗ ವಿವಿ ಬಂದ್’ಗೆ ಎಚ್ಚೆತ್ತು ಕೂಡಲೇ ಬೇಡಿಕೆಗಳನ್ನು ಪರಿಹರಿಸಬೇಕು ಇಲ್ಲದಿದ್ದರೆ ಫೆ.17ರಂದು ನಡೆಯಲಿರುವ ಘಟಿಕೋತ್ಸವ ಸಂದರ್ಭದಲ್ಲಿ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಘೇರಾವ ಹಾಕಲಾಗುವುದು ಎಂದು ಎಚ್ಚರಿಸಿದರು.ನಂತರ ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಅಶೋಕ ಜಿ.ಬಬಲಾದ, ಬಸವರಾಜ ದೊಡಮನಿ, ಪ್ರಕಾಶ ಎಸ್.ವರ್ಮ, ಸಿದ್ಧಾರ್ಥ ಎಂ. ಹಾಗೂ ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.