ಭ್ರಷ್ಟಾಚಾರ ಮುಕ್ತ ಗುಲ್ಬರ್ಗ ಅಭಿಯಾನ ಆರಂಭ

7

ಭ್ರಷ್ಟಾಚಾರ ಮುಕ್ತ ಗುಲ್ಬರ್ಗ ಅಭಿಯಾನ ಆರಂಭ

Published:
Updated:

ಗುಲ್ಬರ್ಗ: ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ನಡೆದ ಅವ್ಯವಹಾರಗಳನ್ನು ಬಯಲಿಗೆಳೆಯುವುದು ಹಾಗೂ ಅವ್ಯವಹಾರದ ಕುರಿತು ಲೋಕಾಯುಕ್ತರಿಗೆ ದೂರು ನೀಡುವ `ಭ್ರಷ್ಟಾಚಾರ ಮುಕ್ತ ಗುಲ್ಬರ್ಗ~ ಅಭಿಯಾನವನ್ನು ಹೈದರಾಬಾದ್ ಕರ್ನಾಟಕ ಹೋರಾಟ ಯುವ ಸಮಿತಿ ಕೈಗೆತ್ತಿಕೊಂಡಿದೆ.ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ವಿವಿಧ ಇಲಾಖೆಗಳಿಂದ ವಿವರ ಪಡೆದುಕೊಳ್ಳಲಾಗಿದ್ದು, ವಾಸ್ತವದ ಪರಿಸ್ಥಿತಿಗೂ ಹಾಗೂ ಇಲಾಖೆಗಳು ಒದಗಿಸಿರುವ ಮಾಹಿತಿಗೂ ಸಂಬಂಧವೇ ಇಲ್ಲ. ಹೀಗಾಗಿ ಜಿಲ್ಲಾ ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಮನೋಜ್ ಜೈನ್ ಹಾಗೂ ಜಿಲ್ಲಾ ಅಬಕಾರಿ ಇಲಾಖೆ ವಿರುದ್ಧ ಲೋಕಾಯುಕ್ತರಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಜು ಕುಳಗೇರಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಅರಣ್ಯ ಇಲಾಖೆ ಕಾಯ್ದೆ ಪ್ರಕಾರ ಜಿಲ್ಲೆಯಲ್ಲಿ ಶೇ. 33ರಷ್ಟು ಅರಣ್ಯ ಇರಬೇಕು. ಆದರೆ ಗುಲ್ಬರ್ಗ ಜಿಲ್ಲೆಯಲ್ಲಿ ಶೇ. 3.01ರಷ್ಟು ಮಾತ್ರ ಅರಣ್ಯ ಇರುವುದಾಗಿ ಇಲಾಖೆ ಮಾಹಿತಿ ನೀಡಿದೆ. ಇದೇವೇಳೆ, 2001ರಿಂದ 2011ರ ಅವಧಿಯಲ್ಲಿ ಒಟ್ಟು ರೂ. 38 ಕೋಟಿ ಹಣವನ್ನು ಅರಣ್ಯ ಅಭಿವೃದ್ಧಿಗಾಗಿ ಸರ್ಕಾರ ನೀಡಿದೆ. ಅರಣ್ಯ ಪ್ರಮಾಣದಲ್ಲಿ ಹೆಚ್ಚಳವಾಗದೆ ಸರ್ಕಾರ ಬಿಡುಗಡೆ ಮಾಡಿರುವ ಹಣ ಏನಾಯಿತು? ಎನ್ನುವ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಕೋರಲಾಗಿದೆ.ಪಾಲಿಕೆ ಆಯುಕ್ತರಾಗಿದ್ದ ಮನೋಜ್ ಜೈನ್, ಟೆಂಡರ್ ಪ್ರಕ್ರಿಯೆ ನಡೆಸುವಾಗ  ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಿದ್ದಾರೆ. ಒಟ್ಟು ರೂ. 1.6 ಕೋಟಿ ಹಣ ನೇರವಾಗಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಶೇ. 22.75ರ ಹಣದಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ.ಮಹಾನಗರ ಪಾಲಿಕೆಯಲ್ಲಿ ಶೇ. 22.75ರ ಹಣದಲ್ಲಿ ನಿರಂತರ ಅವ್ಯವಹಾರ ನಡೆದಿರುವ ಬಗ್ಗೆ ಆಯುಕ್ತರ ವಿರುದ್ಧ ಉಪ ಮೇಯರ್ ಬಾಬು ಸುಂಠಾಣ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು. ವಿಚಿತ್ರವೆಂದರೆ, ಈ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸ್ವತಃ ಮತ್ತೆ ಆರೋಪಿತ ಆಯುಕ್ತರಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಆರ್. ಮಹೇಶಕುಮಾರ್ ಪತ್ರ ಬರೆದಿದ್ದಾರೆ ಎಂದು ಕುಳಗೇರಿ ವಿವರಿಸಿದರು.ಜಿಲ್ಲಾ ಅಬಕಾರಿ ಇಲಾಖೆಯಲ್ಲೂ `ಗರಿಷ್ಠ ಚಿಲ್ಲರೆ ದರ~ (ಎಂಆರ್‌ಪಿ)ದಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಈಗಾಗಲೇ ದೂರು ನೀಡಲಾಗಿದೆ. ಯುವಜನ ಸೇವಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅವ್ಯವಹಾರ ನಡೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry