ಪ್ರಣವ್ ಸಂದೇಶ: ಭಾಷಣವಲ್ಲ, ನಡವಳಿಕೆ

7

ಪ್ರಣವ್ ಸಂದೇಶ: ಭಾಷಣವಲ್ಲ, ನಡವಳಿಕೆ

ಸುಧೀಂದ್ರ ಬುಧ್ಯ
Published:
Updated:

ಪ್ರಣವ್ ಮುಖರ್ಜಿ ಆತ್ಮಕತೆಯ ಮೂರನೆಯ ಭಾಗ ‘The Coalition Years’ ಬಿಡುಗಡೆಯಾದಾಗ ರಾಜದೀಪ್‌ ಸರ್‌ದೇಸಾಯಿ, ‘ಯುಪಿಎ ಅವಧಿಯಲ್ಲಿ ನೀವು ಪ್ರಧಾನಿಯಾಗಬಹುದಿತ್ತು, ತಪ್ಪಿತು. ಹಿರಿಯ ಸಚಿವರಾಗಿದ್ದ ನಿಮಗೆ ಗೃಹ ಖಾತೆಯ ಬದಲು ರಕ್ಷಣಾ ಖಾತೆಯನ್ನು ನೀಡಲಾಯಿತು. ನಿಮ್ಮನ್ನು ಪಕ್ಷ ಉಪೇಕ್ಷಿಸಿತು ಎನಿಸಲಿಲ್ಲವೇ’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಆಗ ಮುಖರ್ಜಿ ‘ಖಾತೆ ಹಂಚುವ ನಿರ್ಧಾರ ಮತ್ತು ಜವಾಬ್ದಾರಿ ಪ್ರಧಾನಿಯದ್ದಾಗಿರುತ್ತದೆ. ಈ ಖಾತೆ ಬೇಕು, ಆ ಹುದ್ದೆ ಬೇಕು ಎಂದು ಕೇಳುವ ಜಾಯಮಾನ ನನ್ನದಲ್ಲ. ನಾನೊಬ್ಬ ಅನುಭವಿ, ಮಾಗಿದ ರಾಜಕಾರಣಿ’ ಎಂದಿದ್ದರು. ಕಳೆದ ವಾರ ನಾಗಪುರದಲ್ಲಿ ಮುಖರ್ಜಿ ತಮ್ಮ ಪ್ರಬುದ್ಧತೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಬೇಕಾದ ಪ್ರಸಂಗ ಎದುರಾಯಿತು.

ಬಹುಶಃ ಹಿಂದೆಂದೂ ಮಾಜಿ ರಾಷ್ಟ್ರಪತಿಯೊಬ್ಬರು ಭಾಗವಹಿಸಿದ್ದ ಕಾರ್ಯಕ್ರಮದ ಕುರಿತು ಈ ಬಗೆಯ ಚರ್ಚೆ ಆಗಿರಲಿಕ್ಕಿಲ್ಲ. ಡಾ. ರಾಜೇಂದ್ರ ಪ್ರಸಾದ್, ಡಾ. ಜಾಕೀರ್ ಹುಸೇನ್, ನೀಲಂ ಸಂಜೀವರೆಡ್ಡಿ, ಅಬ್ದುಲ್ ಕಲಾಂ ಹೀಗೆ ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಆರ್.ಎಸ್.ಎಸ್. ವೇದಿಕೆಯಲ್ಲಿ ಕಾಣಿಸಿಕೊಂಡವರೇ. ಆದರೆ ಈ ಬಾರಿ ಮುಖರ್ಜಿಯವರ ನಾಗಪುರ ಭೇಟಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಯಿತು.

ಮುಖ್ಯವಾಗಿ ಪ್ರಣವ್ ನಾಗಪುರ ಭೇಟಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಮುಂದೆ ತಂತು. ಹಾಗಾದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದಲ್ಲಿ ಸಂವಾದಕ್ಕೆ ಆಸ್ಪದವಿರಬಾರದೇ? ಒಪ್ಪಿತವಾಗದ ಸಿದ್ಧಾಂತ, ನಿಲುವುಗಳ ಕಾರಣಕ್ಕೆ, ವ್ಯಕ್ತಿ ಅಥವಾ ಸಂಘಟನೆಯನ್ನು ದೂರವೇ ಇಡುವುದು ಸೈದ್ಧಾಂತಿಕ ಅಥವಾ ರಾಜಕೀಯ ಅಸ್ಪೃಶ್ಯತೆ ಎನಿಸುವುದಿಲ್ಲವೇ? ಆ ನಡವಳಿಕೆಯನ್ನು ಪ್ರಜಾತಂತ್ರ ವ್ಯವಸ್ಥೆ ಅನುಮೋದಿಸುತ್ತದೆಯೇ? ಸೋಜಿಗವೆಂದರೆ, ಪ್ರಣವ್ ಆ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ವಾದಿಸಿದವರಲ್ಲಿ ಹಲವರು, ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುತ್ತಿದೆ ಎಂದು ವಾದಿಸಿದವರೇ ಆಗಿದ್ದರು. ಹಾಗಾಗಿ ಆ ಸಮಾರಂಭದ ಮಟ್ಟಿಗೆ ದಾಖಲಿಸಬಹುದಾದ ತಕರಾರು, ಆ ವಿರೋಧದ ಬಗ್ಗೆ ಮಾತ್ರ.

ಪ್ರಣವ್ ಭೇಟಿ ವಿರೋಧಿಸಿದವರು ಕೊಂಚ ಸಂಯಮದಿಂದ ಇತಿಹಾಸದ ಪುಟಗಳನ್ನು ಸರಿಸಿದ್ದರೂ ನಮ್ಮ ಹಿಂದಿನ ತಲೆಮಾರು ಹೇಗೆ ವಾಗ್ವಾದಗಳ ನಡುವೆ ಪ್ರಜಾಪ್ರಭುತ್ವದ ಆಶಯಗಳನ್ನು ಜತನ ಮಾಡಿತ್ತು ಎಂಬುದು ಕಾಣುತ್ತಿತ್ತು. 1934ರಲ್ಲಿ ವಾರ್ಧಾದಲ್ಲಿ ನಡೆದ RSS ಶಿಬಿರವನ್ನು ಸಂದರ್ಶಿಸಲು ತಾವು ಮಹದೇವ ದೇಸಾಯಿ ಮತ್ತು ಮೀರಾಬೆನ್ ಜೊತೆ ಹೋಗಿದ್ದರ ಬಗ್ಗೆ ಗಾಂಧೀಜಿ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದರು. ‘ಶಿಬಿರಾರ್ಥಿಗಳಲ್ಲಿ ಜಾತಿಯ ಸೋಂಕು ಕಾಣಿಸಲಿಲ್ಲ.

ನಿತ್ಯಜೀವನದ ಕೆಲಸಗಳು ಒಟ್ಟಾಗಿ ಸಾಗುತ್ತಿತ್ತು. ಮರುದಿನ ಸಂಘಟನೆಯ ಸ್ಥಾಪಕ ಡಾ. ಹೆಡಗೇವಾರರಲ್ಲಿ ಆ ಬಗ್ಗೆ ಪ್ರಶ್ನಿಸಿದಾಗ ಸಂಘದಲ್ಲಿ ನಾವು ಅಸ್ಪೃಶ್ಯತೆಯ ನಿವಾರಣಾ ಕಾರ್ಯಕ್ರಮವನ್ನೇನೂ ಮಾಡುವುದಿಲ್ಲ. ನಾವೆಲ್ಲರೂ ಹಿಂದೂಗಳೆಂಬ ಸಕಾರಾತ್ಮಕ ವಿಚಾರವಷ್ಟೇ ಇಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು’ ಎಂಬುದನ್ನು ಗಾಂಧಿ ಉಲ್ಲೇಖಿಸಿದ್ದರು. ಆ ನಂತರ ಗಾಂಧಿ, RSS ಪ್ರಚುರಪಡಿಸುತ್ತಿದ್ದ ಸಂಗತಿಗಳನ್ನು ಟೀಕಿಸಿ ಬರೆದಿದ್ದರು. ಪುನಃ 1947ರಲ್ಲಿ ದೆಹಲಿಯ ಭಂಗಿ ಕಾಲೊನಿಯಲ್ಲಿ ಸಂಘದ ಶಿಬಿರಕ್ಕೆ ಭೇಟಿಕೊಟ್ಟ ಮಹಾತ್ಮ, ‘ಸೇವೆ ಮತ್ತು ಸಮರ್ಪಣಾ ಭಾವವನ್ನು ಕೇಂದ್ರವಾಗಿಟ್ಟುಕೊಂಡ ಯಾವುದೇ ಸಂಘಟನೆ ಅಗಾಧವಾಗಿ ಬೆಳೆಯುತ್ತದೆ ಎಂಬುದು ಸತ್ಯ. ಸಮರ್ಪಣಾ ಭಾವದ ಜೊತೆ ಉದ್ದೇಶ ಶುದ್ಧಿ ಮತ್ತು ಅರಿವು ಮೇಳೈಸಿದರೆ ಸಮಾಜಕ್ಕೆ ಒಳಿತಾಗುತ್ತದೆ’ ಎಂಬ ಪಾಠ ಹೇಳಿದ್ದರು (ಮಹಾತ್ಮ; ಸಂಪುಟ 8; ಡಿ.ಜಿ. ತೆಂಡೂಲ್ಕರ್).

ಗಾಂಧೀಜಿಗೆ ಸಂಘದ ಕಾರ್ಯಚಟುವಟಿಕೆಯ ಬಗ್ಗೆ ಅನುಮಾನಗಳು ಇದ್ದವು. ಕೋಲ್ಕತ್ತ ಮತ್ತು ದೆಹಲಿಯಲ್ಲಿ ನಡೆಯುತ್ತಿದ್ದ ಕೋಮು ಗಲಭೆಯಲ್ಲಿ RSS ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂಬ ದೂರು ಗಾಂಧೀಜಿಗೆ ತಲುಪಿತ್ತು. ಆಗ ಗಾಂಧೀಜಿ ನೇರವಾಗಿ ಗೋಳ್ವಲ್ಕರ್ ಅವರಲ್ಲಿ ವಿಷಯ ಪ್ರಸ್ತಾಪಿಸಿದ್ದರು.

‘ಆಕ್ರಮಣ ನಡೆಸುವುದರಲ್ಲಿ ಸಂಘಕ್ಕೆ ನಂಬಿಕೆ ಇಲ್ಲ. ಹಿಂಸೆಯನ್ನು ಸಂಘ ಪ್ರತಿಪಾದಿಸುವುದಿಲ್ಲ’ ಎಂಬ ಭರವಸೆಯನ್ನು ಗೋಳ್ವಲ್ಕರ್ ನೀಡಿದ್ದರು. 1939ರಲ್ಲಿ ಅಂಬೇಡ್ಕರರನ್ನು ಆರ್.ಎಸ್.ಎಸ್. ತನ್ನ ಶಿಬಿರಕ್ಕೆ ಕರೆತರುವ ಪ್ರಯತ್ನ ಮಾಡಿತ್ತು. ಶಿಬಿರದಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ‘ಇಲ್ಲಿ ಸವರ್ಣೀಯ, ದಲಿತ ಎಂಬ ಭೇದವಿಲ್ಲದಿರುವುದನ್ನು ಕಂಡು ಸಂತಸವಾಗಿದೆ’ ಎಂಬ ಅಭಿಪ್ರಾಯಪಟ್ಟಿದ್ದರು (ಸಾಮಾಜಿಕ ಕ್ರಾಂತಿಸೂರ್ಯ; ಲೇ: ದತ್ತೋಪಂತ ಠೇಂಗಡಿ; ಅ: ಚಂದ್ರಶೇಖರ ಭಂಡಾರಿ). ಹಾಗಂತ RSS ಅನ್ನು ಅವರು ಪೂರ್ಣವಾಗಿ ಅನುಮೋದಿಸಿರಲಿಲ್ಲ.

1948ರಲ್ಲಿ ಗಾಂಧಿ ಹತ್ಯೆಯ ಬಳಿಕ, ಆ ಆರೋಪವನ್ನು RSS ಎದುರಿಸಿತು. ನಿಷೇಧಕ್ಕೆ ಒಳಪಟ್ಟಿತು. ಗೋಳ್ವಲ್ಕರ್ ಬಂಧನವಾಗಿ, ಆರು ತಿಂಗಳ ಬಳಿಕ ಬಿಡುಗಡೆಯಾಯಿತು. ಅಂದಿನ ಗೃಹಮಂತ್ರಿ ಪಟೇಲರು ಸಂಘವನ್ನು ಪೂರ್ತಿಯಾಗಿ ಒಪ್ಪಿಕೊಂಡವರಲ್ಲ, ಆದರೆ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಯತ್ನದಲ್ಲಿ ಗೋಳ್ವಲ್ಕರ್ ಶ್ರಮ ಹಾಕಿದ್ದರು ಎಂಬ ಕಾರಣದಿಂದ ಅವರ ಕುರಿತು ಸದ್ಭಾವನೆಯಿತ್ತು. ನಿಷೇಧ ಹಿಂತೆಗೆದುಕೊಳ್ಳುವ ವಿಷಯದಲ್ಲಿ ಪಟೇಲ್ ಮತ್ತು ಗೋಳ್ವಲ್ಕರ್ ನಡುವೆ ವಾಗ್ವಾದ ನಡೆಯಿತು. ಸಂಘಟನೆಗೆ ಒಂದು ಸಂವಿಧಾನ ಇರಬೇಕು.

ನಿರ್ವಹಣಾ ರೀತಿಯಲ್ಲಿ ಬದಲಾವಣೆಗಳು ಆಗಬೇಕು ಎಂಬುದನ್ನು ಪಟೇಲ್ ಸೂಚಿಸಿದ್ದರು. ಸಂಘವನ್ನು ಕಾಂಗ್ರೆಸ್ಸಿನಲ್ಲಿ ವಿಲೀನಗೊಳಿಸಬಾರದೇಕೆ? ಎಂಬಪ್ರಸ್ತಾಪವೂ ಬಂದಿತ್ತು. ಕೊನೆಗೆ ಮದ್ರಾಸಿನಲ್ಲಿ ಅಡ್ವೊಕೇಟ್ ಜನರಲ್ ಆಗಿದ್ದ ಟಿ.ಆರ್. ವೆಂಕಟರಾಮ ಶಾಸ್ತ್ರಿ ಮಧ್ಯಪ್ರವೇಶಿಸಿದರು. ಗಾಂಧಿ ಹತ್ಯೆಯಲ್ಲಿ ಸಂಘಟನೆಯ ಪಾತ್ರದ ಬಗ್ಗೆ ಸೂಕ್ತ ದಾಖಲೆಗಳಿಲ್ಲದೇ ಸಂಘಟನೆಯನ್ನು ನಿಷೇಧಿಸುವುದು ಅಸಾಂವಿಧಾನಿಕ ಎಂಬ ವಾದ ಎದುರಿಟ್ಟರು. ಅವರ ಮಹತ್ವದ ಲೇಖನ ‘ದಿ ಹಿಂದು’ ಪತ್ರಿಕೆಯಲ್ಲಿ 1948ರ ಜುಲೈ 14ರಂದು ಪ್ರಕಟಗೊಂಡಿತು.

ಗಾಂಧಿ ಹತ್ಯೆಯ ವಿಚಾರಣೆ ನಡೆದು ಕಳಂಕದಿಂದ RSS ಮುಕ್ತವಾಗಿ, 18 ತಿಂಗಳ ಬಳಿಕ ನಿಷೇಧ ತೆರವಾದ ಮೇಲೂ ನೆಹರೂ ಮತ್ತು RSS ನಡುವೆ ವೈಮನಸ್ಯ ಮುರುಟಿರಲಿಲ್ಲ. ಆದರೆ 1962ರ ಚೀನಾ ಯುದ್ಧ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರು ಯೋಧರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ, ಸಂತ್ರಸ್ತರ ಕುಶಲ ನೋಡಿಕೊಳ್ಳುವ ಕೆಲಸದಲ್ಲಿ ಪಾಲ್ಗೊಂಡಿದ್ದನ್ನು ಗಮನಿಸಿದ್ದ ನೆಹರೂ, ರಾಷ್ಟ್ರದ ಏಕತೆ ಪ್ರದರ್ಶಿಸುವ ಆಶಯದಿಂದ ಮುಂದಿನ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದರು. ಆಗಲೂ ಸಾಕಷ್ಟು ವಿರೋಧ ಬಂದಿತ್ತು. ನೆಹರೂ ‘All patriotic citizens had been invited to join the parade’ ಎಂದು ಆಕ್ಷೇಪಗಳನ್ನು ಬದಿಗೆ ಸರಿಸಿದ್ದರು (ಚೈನಾಸ್ ಇಂಡಿಯಾ ವಾರ್ 1962; ಲೇ: ಕಮಾಂಡರ್ ಜಸ್ಜಿತ್ ಸಿಂಗ್).

ವಿಪರ್ಯಾಸವೆಂದರೆ, ಆ ಸಂದರ್ಭದಲ್ಲಿ ‘ದೇಶಕ್ಕಿಂತ ಸಿದ್ಧಾಂತವೇ ದೊಡ್ಡದು’ ಎಂಬಂತೆ ನಡೆದುಕೊಂಡ ಕಮ್ಯುನಿಸ್ಟ್‌ ಪಕ್ಷದ ನಾಯಕರು ಬಹಿರಂಗವಾಗಿ ಚೀನಾವನ್ನು ಬೆಂಬಲಿಸಿ ಬಂಧನಕ್ಕೆ ಒಳಗಾಗಿದ್ದರು. ಪಾಲಿಟ್ ಬ್ಯೂರೊ ಸದಸ್ಯರಾಗಿದ್ದ ವಿ.ಎಸ್. ಅಚ್ಯುತಾನಂದನ್ ಅವರು ಸಿಪಾಯಿಗಳಿಗೆ ರಕ್ತ ನೀಡಲು ಮುಂದಾದಾಗ, ಪಕ್ಷ ದ್ರೋಹದ ಚಟುವಟಿಕೆ ಎಂದು ಕರೆದು ಅವರಿಗೆ ಹಿಂಬಡ್ತಿ ನೀಡಲಾಗಿತ್ತು!

ತುರ್ತುಪರಿಸ್ಥಿತಿಯ ಬಳಿಕ RSS ಹೆಚ್ಚು ಜನರ ಗಮನ ಸೆಳೆಯಿತು. ಜಯಪ್ರಕಾಶ್ ನಾರಾಯಣ್ ಆ ಸಂಘಟನೆಯ ಕಡು ವಿರೋಧಿಯಾಗಿದ್ದರು. ಅದು 60ರ ದಶಕದ ಮಧ್ಯಭಾಗ, ಅನಾವೃಷ್ಟಿಯಿಂದಾಗಿ ಬಿಹಾರದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ವ್ಯಾಪಕ ಬರ ಆವರಿಸಿತ್ತು. ಪರಿಹಾರ ಕಾರ್ಯಕ್ಕೆ ಜಯಪ್ರಕಾಶರ ಸಮರ್ಥ ನಾಯಕತ್ವದಲ್ಲಿ ಸರ್ಕಾರೇತರ ಸಮಿತಿಯೊಂದು ರಚನೆಯಾಯಿತು. ಸಾರ್ವಜನಿಕರಿಂದಪರಿಹಾರ ರೂಪದಲ್ಲಿ ಬಂದ ದೇಣಿಗೆ ₹ 40 ಲಕ್ಷ, ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಕೊಡಲ್ಪಟ್ಟ ₹ 90 ಲಕ್ಷ ಹೀಗೆ ಸಮಿತಿ ಹಣ ಜೋಡಿಸಿಕೊಂಡು ಪರಿಹಾರ ಕಾರ್ಯದಲ್ಲಿ ತೊಡಗಿತು. ಕೊನೆಗೆ ಆದಾಯ ವೆಚ್ಚದ ಲೆಕ್ಕ ನೋಡುವಾಗ, ಜಯಪ್ರಕಾಶರಿಗೆ ಆಶ್ಚರ್ಯವಾಗಿದ್ದೆಂದರೆ, RSS ಕಾರ್ಯಕರ್ತರು ಊಟ ತಿಂಡಿಯ ಖರ್ಚನ್ನು ನಮೂದಿಸಿರಲಿಲ್ಲ.

ಆ ಬಗ್ಗೆ ಕೇಳಿದಾಗ ಸ್ವತಃ ತಮ್ಮ ಮನೆಗಳಿಂದ ಬುತ್ತಿ ತಂದು, ಸಹೃದಯರ ಸಂಪರ್ಕ ಬೆಳೆಸಿ ಆ ವ್ಯವಸ್ಥೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿತು. ಇದು, RSS ಕುರಿತಾದ ಜಯಪ್ರಕಾಶರ ನೋಟ ಬದಲಿಸಿತು.

ಇದಕ್ಕೆ ಸಂಬಂಧಿಸಿದಂತೆ ಎಲ್.ಕೆ. ಅಡ್ವಾಣಿ 2015ರ ಅಕ್ಟೋಬರ್ 11ರಂದು ದೆಹಲಿಯಲ್ಲಿ ನಡೆದ ಜಯಪ್ರಕಾಶರ 113ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ರಸಂಗವೊಂದನ್ನು ನೆನಪಿಸಿಕೊಂಡಿದ್ದರು. ‘ಜೆ.ಪಿ.ಮೊದಮೊದಲು ಮಾರ್ಕ್ಸ್‌ವಾದಿಯಾಗಿದ್ದರು. RSS ಕುರಿತುಅವರಲ್ಲಿ ಹಿತವಾದ ಭಾವನೆಗಳಿರಲಿಲ್ಲ. ಅದಕ್ಕೆ ಕಾರಣ ಗಾಂಧಿ ಹತ್ಯೆಯ ಆರೋಪ. ಆದರೆ 1973ರಲ್ಲಿ ನನ್ನನ್ನು ಕರೆಸಿಕೊಂಡಿದ್ದ ಜೆ.ಪಿ. ಆ ಬಗ್ಗೆ ಕೇಳಿದರು. ತನಿಖೆಯ ದಾಖಲೆಗಳ ಮೂಲಕ ಸಮಗ್ರವಾಗಿ ವಿವರಿಸಿದಾಗ ಅವರ ನಿಲುವು ಬದಲಾಗಿತ್ತು. 1974ರಲ್ಲಿ ಜನಸಂಘದ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು’ ಎಂಬುದನ್ನು ಅಡ್ವಾಣಿ ಮೆಲುಕು ಹಾಕಿದ್ದರು.

ಅಂಬೇಡ್ಕರ್ ಅವರಿಗೆ ಕೊನೆಯ ವರ್ಷಗಳಲ್ಲಿ ಆಪ್ತರಾಗಿದ್ದ ದತ್ತೋಪಂತ ಠೇಂಗಡಿ ತಮ್ಮ ಕೃತಿಯಲ್ಲಿ ಅಂತಹದೇ ಪ್ರಸಂಗ ವಿವರಿಸಿದ್ದಾರೆ. ಗೋಳ್ವಲ್ಕರ್ ಅವಧಿಯಲ್ಲಿ ಡಾ.ಅಂಬೇಡ್ಕರ್ ಅನುಯಾಯಿಗಳಲ್ಲಿ ಒಬ್ಬರನ್ನು ಶಿಬಿರದ ಮುಖ್ಯ ಅತಿಥಿಯಾಗಿ ಕರೆಯಬೇಕೆಂಬ ತೀರ್ಮಾನವಾಗಿತ್ತು. ಗೋಳ್ವಲ್ಕರ್ ಎರಡು ಹೆಸರನ್ನು ಸೂಚಿಸಿದ್ದರು. ಒಂದು, ವಾಮನರಾವ್ ಗೋಡಬೋಲೆ, ಎರಡು- ಪಂ.ರೇವಾರಾಮ ಕವಾಡೆ. ಕವಾಡೆ ಶಿಬಿರಕ್ಕೆ ಆಗಮಿಸಲು ಒಪ್ಪಿದಾಗ, ಅವರ ಒಡನಾಡಿಗಳಾಗಿದ್ದ ಹಲವರು ವಿರೋಧಿಸಿದ್ದರು. 

ಆದರೆ ಕವಾಡೆ, ವಿರೋಧವನ್ನು ಪಕ್ಕಕ್ಕಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮ್ಮ ಅನಿಸಿಕೆ, ಪ್ರಶಂಸೆ, ಭಿನ್ನಾಭಿಪ್ರಾಯವನ್ನು ಆ ಅಂಗಳದಲ್ಲೇ ಮಂಡಿಸಿದ್ದರು.

ಉಳಿದಂತೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾರ ಸರ್ವಾಧಿಕಾರಿ ಧೋರಣೆ ವಿರೋಧಿಸಿ RSS ಕೆಲಸ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಆದರೆ ಆ ಮುನಿಸನ್ನು ಇಂದಿರಾ ಬೆಳೆಯಗೊಡಲಿಲ್ಲ. RSS ಪ್ರಚಾರಕರಾಗಿದ್ದ ಏಕನಾಥ ರಾನಡೆ ಅವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ಯೋಜನೆಯನ್ನು ಯಶಸ್ವಿಗೊಳಿಸಿದಾಗ, ಉದ್ಘಾಟನಾ ಸಮಾರಂಭದಲ್ಲಿ ಇಂದಿರಾ ಭಾಗವಹಿಸಿದ್ದರು. ಜನರಲ್ ಕಾರ್ಯಪ್ಪ ಅವರು ಮಂಗಳೂರಿನ ಸಂಘದ ವಾರ್ಷಿಕ ಸಮಾವೇಶದಲ್ಲಿ ಕಾಣಿಸಿಕೊಂಡರು. ಅಬ್ದುಲ್ ಕಲಾಂ ಅವರು ಹೆಡಗೇವಾರ್ ಪ್ರತಿಮೆಗೆ ನಮಿಸಿ ಬಂದಾಗ ವಿವಾದ ಆಗಲಿಲ್ಲ. ಪಕ್ಷದ ಹೆಸರಿನಲ್ಲಿ ‘ಜಾತ್ಯತೀತ’ ಪದವನ್ನು ಜೋಡಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ಸಂಘದ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಮುಜುಗರಪಡಲಿಲ್ಲ.

ಹೀಗೆ ಮೇಲ್ಕಾಣಿಸಿದ ಎಲ್ಲರೂ ಸೈದ್ಧಾಂತಿಕ ಭಿನ್ನಾಭಿಪ್ರಾಯದಾಚೆ ಸಂವಾದಕ್ಕೆ, ಸಾಹಚರ್ಯಕ್ಕೆ ತೆರೆದುಕೊಂಡರು. ತಮ್ಮ ವ್ಯಕ್ತಿತ್ವದ ಎತ್ತರವನ್ನು ಪ್ರದರ್ಶಿಸಿದರು. ಮುಖರ್ಜಿ ಆ ಪಟ್ಟಿಗೆ ಹೊಸ ಸೇರ್ಪಡೆ ಅಷ್ಟೇ.

ಇನ್ನು ಪ್ರಣವ್ ಭಾಷಣ ನೋಡಿದರೆ, ಅವರು ಇತಿಹಾಸದಿಂದ ವರ್ತಮಾನದವರೆಗೆ ಭಾರತ ಅರಳಿದ್ದನ್ನು ವಿವರಿಸಿದರು, ಭಾರತೀಯರು ಉಳಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ಮಾತನಾಡಿದರು. ಮುಖರ್ಜಿ ಉಲ್ಲೇಖಿಸಿದ ಬಹುಪಾಲು ಸಂಗತಿಗಳನ್ನು ಅವರು ಈ ಹಿಂದೆ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಸಂದೇಶದಲ್ಲಿ, ರಾಷ್ಟ್ರಪತಿ ಹುದ್ದೆಗೆ ವಿದಾಯ ಹೇಳಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಹಾಗಾಗಿ ನಾಗಪುರದ ಭಾಷಣ ಅವರ ನಿಲುವಿನ ಪುನರುಕ್ತಿಯಷ್ಟೇ. ಇಡೀ ಪ್ರಕರಣದಲ್ಲಿ, ಮಹತ್ವದ್ದು ಎಂದು ಕಾಣುವುದು ಅವರ ಭಾಷಣವಲ್ಲ, ನಡವಳಿಕೆ.

ಒಂದು ದಿನ ಮುಂಚಿತವಾಗಿ ನಾಗಪುರಕ್ಕೆ ತೆರಳಿ, ಹೆಡಗೇವಾರ್ ಪುತ್ಥಳಿಗೆ, ಗೋಳ್ವಲ್ಕರ್ ಸಮಾಧಿಗೆ ನಮನ ಸಲ್ಲಿಸಿ ಭಾಷಣದಲ್ಲಿ ತಮ್ಮತನ ತೋರಿದ ಪ್ರಣವ್, ಸೈದ್ಧಾಂತಿಕ ಭಿನ್ನಾಭಿಪ್ರಾಯವಿರಲಿ, ವೈಯಕ್ತಿಕ ವಿರೋಧವೇ ಇರಲಿ, ಅದನ್ನು ಆ ಅಂಗಳದಲ್ಲೇ ಮಂಡಿಸಬೇಕು. ದೂರದಲ್ಲಿ ನಿಂತು ಸೋಟೆ ತಿರುಗಿಸಿ, ಮಾತಿನ ಕೂರಂಬು ತೂರುವುದರಲ್ಲಿ ಅರ್ಥವಿಲ್ಲ ಎಂಬುದನ್ನು ತೋರಿಸಿದ್ದಾರೆ. ಸಂವಾದ, ಚರ್ಚೆ, ವಾದ, ಪ್ರತಿವಾದ ಪರಿಪಕ್ವ ಪ್ರಜಾಪ್ರಭುತ್ವದ ಕುರುಹು ಎಂದು ನೆನಪಿಸಿದ್ದಾರೆ.

ತಂದೆಗೆ ನೇರವಾಗಿ ಹೇಳಬಹುದಾದ ಸಂಗತಿಯನ್ನು ಟ್ವೀಟ್ ಮೂಲಕ ಹೇಳಿದ್ದ ಶರ್ಮಿಷ್ಠಾ ಮುಖರ್ಜಿ, ‘ಭಾಷಣ ಹೆಚ್ಚು ಕಾಲ ನಿಲ್ಲುವುದಿಲ್ಲ ಆದರೆ ಚಿತ್ರ ಉಳಿಯುತ್ತದೆ’ ಎಂದಿದ್ದರು. ಒಂದು ಹೆಜ್ಜೆ ಮುಂದೆ ಹೋದ ಪ್ರಣವ್, ಡಾ.ಹೆಡಗೇವಾರ್ ಬಗ್ಗೆ ‘ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಅಳಿಸಲಾಗದ್ದನ್ನು ಸಂದರ್ಶಕರ ಪುಸ್ತಕದಲ್ಲಿ ಬರೆದು ಹೋಗಿದ್ದಾರೆ. ತಮ್ಮ ಪ್ರಾಸ್ತಾವಿಕ ಮಾತು ಮುಗಿಸುವ ಮುನ್ನ ಭಾಗವತ್, ‘ಇದೀಗ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಾತನಾಡಲಿದ್ದಾರೆ. ಕಿವಿಗಳನ್ನು ತೆರೆದುಕೊಂಡು, ಗಮನವಿಟ್ಟು ಕೇಳಿ’ ಎಂದಿದ್ದರು. ಆ ಮಾತು ಅಲ್ಲಿ ನೆರೆದಿದ್ದ 700 ಕಾರ್ಯಕರ್ತರಿಗಷ್ಟೇ ಹೇಳಿದ್ದಾಗಿರಲಿಕ್ಕಿಲ್ಲ.

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry