ಕಾಮಿಡಿ ಕಿಲಾಡಿಗಳ ಭಾವಬುತ್ತಿ

7

ಕಾಮಿಡಿ ಕಿಲಾಡಿಗಳ ಭಾವಬುತ್ತಿ

Published:
Updated:
ಕಾಮಿಡಿ ಕಿಲಾಡಿಗಳು

ನಗುವುದೆಂದರೆ ಕಷ್ಟ, ನಗಿಸುವುದು ಇನ್ನೂ ಕಷ್ಟ. ದಿನಕ್ಕೆ ಸಾವಿರ ಜೋಕುಗಳು ಫೇಸ್ಬುಕ್‌–ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತವೆ. ಕೆಲವನ್ನಂತೂ ನಾವು ತೆರೆದು ನೋಡದೆಯೇ ಅದ್ಯಾವ ಜೋಕ್‌ ಎಂದು ಊಹಿಸಬಹುದು. ಇಂತಹ ಸಂದರ್ಭಗಳಲ್ಲಿ ಹೊಸ ರೀತಿಯಲ್ಲಿ, ಹೊಸ ಹೊಸ ಪರಿಕಲ್ಪನೆಗಳನ್ನು ಹೆಣೆದು ಜನರನ್ನು ನಗಿಸುವ ಕಾಯಕ ಸವಾಲಿನದೇ.

ಇಂಥ ಸವಾಲನ್ನೇ ಆಹ್ವಾನಿಸಿ, ನೂರಾರು ಜನರಲ್ಲಿ ಆಯ್ಕೆಯಾಗಿ, ವಾರವಾರವೂ ಹೊಸ ಹೊಸ ನಗುವನ್ನು ಹೊತ್ತು ತಂದು ಪರದೆಯ ಮೇಲೆ ಬಿತ್ತಿ, ತೀರ್ಪುದಾರರ ಮುಖವನ್ನೇ ಆಶಾಭಾವದಿಂದ ನೋಡುತ್ತ, ಅವರ ಕಣ್ಣಲ್ಲೇ ಊರ ಜನರ ಹಾರೈಕೆಯನ್ನು ಅರಸುತ್ತ ಪೂರ್ತಿ ಆರು ತಿಂಗಳು ಕಳೆದಿದ್ದಾರೆ ಕಾಮಿಡಿ ಕಿಲಾಡಿಗಳು. ಇದೀಗ ನೆನಪಿನ ಬುತ್ತಿ ಹೊತ್ತು ಮತ್ತೆ ಊರ ದಾರಿ ಹಿಡಿದಿದ್ದಾರೆ. ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಗೆಲುವು ಯಾರದೋ ಗೊತ್ತಿಲ್ಲ.

ಬೇರೆ ಬೇರೆ ಭಾಗಗಳಿಂದ ಬಂದ 15 ಕಲಾವಿದರು ತಮ್ಮದೇ ಭಾಷಾ ಸೊಗಡಿನಿಂದ ಹೊಸ ರೀತಿಯಲ್ಲಿ ಪ್ರೇಕ್ಷಕರನ್ನು ನಗಿಸಿದರು. ನಡು–ನಡುವೆ ಸವಕಲು ಜೋಕ್‌ಗಳಿದ್ದರೂ ಕಲಾವಿದರ ಆಂಗಿಕ ಅಭಿನಯದಿಂದ ಹೊಸದೆನಿಸಿತು. ಇಷ್ಟೂ ದಿನ ನಗಿಸುವುದರಲ್ಲೇ ಮೈಮರೆತ ಕಲಾವಿದರ ಮನದಲ್ಲೀಗ ಗೆಲುವಿನ ದೊಡ್ಡ ಬಯಕೆ ಗರಿಗೆದರಿದೆ.

ತೀರ್ಪುಗಾರರಾದ ನಟ ಜಗ್ಗೇಶ್‌, ನಟಿ ರಕ್ಷಿತಾ ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ ಅವರಿಗೂ ಇದು ಮರೆಯಲಾಗದ ಅನುಭವ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಮಾಸ್ಟರ್‌ ಆನಂದ್‌ ಇನ್ನೇನು ಗ್ರ್ಯಾಂಡ್‌ ಫಿನಾಲೆ ದಿನ ಕಣ್ಣೀರು ತಡೆದಿಟ್ಟುಕೊಳ್ಳುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಈ ಕಾರ್ಯಕ್ರಮದ ರೂವಾರಿ ರಾಘವೇಂದ್ರ ಹುಣಸೂರು ಫಿನಾಲೆಯ ರಸನಿಮಿಷಗಳನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದಾರೆ. ಇದಕ್ಕಾಗಿ ದುಡಿದ, ನಿರ್ದೇಶಕರು, ಸಹಾಯಕರು, ತಂತ್ರಜ್ಞರು, ಬರಹಗಾರರಿಗೂ ಇದು ಅವಿಸ್ಮರಣೀಯ ಅನುಭವವೇ.

ಇದೆಲ್ಲದರ ನಡುವೆ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ 'ಕಾಮಿಡಿ ಕಿಲಾಡಿಗಳು ಸೀಸನ್‌–2’ ನೋಡುತ್ತ, ಅದೇ ನಗುವನ್ನೇ ಮೆಲುಕು ಹಾಕುತ್ತ ಮಲಗೆದ್ದ ಕನ್ನಡದ ಜನರಿಗೊ ಈಗ ಏನೊ ಕಳೆದುಕೊಳ್ಳುತ್ತಿರುವ ಭಾವ.

**

ಒಂದು ಜೋಕಿಗೆ ಒಂದೇ ಸಲ ನಗು ಬರೋದು. ಹೀಗಾಗಿ ನಗಿಸೋಸು ಕಷ್ಟ. ಇಡೀ ಕರ್ನಾಟಕವನ್ನು ಟಿವಿ ಪರದೆ ಮೂಲಕ ನಗಿಸುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು.


–ವಾಣಿ, ಚನ್ನರಾಯಪಟ್ಟಣ

**

ಯಾರಿಗೂ ಅವಮಾನ ಮಾಡದೇ, ನೋವಾಗದಂತೆ, ‘ಸಿಂಗಲ್‌ ಮೀನಿಂಗ್‌’ನಲ್ಲಿ ನಗಿಸೋದನ್ನ ಕಲಿತೆವಲ್ಲ… ಇನ್ನು ಎಲ್ಲೇ ಹೋದರೂ ಗೆಲ್ಲುತ್ತೇವೆ ಬಿಡಿ.


–ಬರ್ಕತ್ ಅಲಿ, ಹಿರಿಯೂರು 

**

ಊರಲ್ಲಿ ನಗ್ತಾ ಕಾಲ ಕಳೀಬಹುದು, ಊರವರನ್ನ ನಗಿಸಬಬಹುದು, ಆದರೆ ಕ್ಯಾಮೆರಾ ಮುಂದೆ ನಿಂತು, ರಾಜ್ಯದ ಮೂಲೆ–ಮೂಲೆಯಲ್ಲಿರುವವರನ್ನು ನಗಿಸುವುದು ಹೇಗೆ? ಅದನ್ನಿಲ್ಲಿ ಕಲ್ತುಕೊಂಡ್ವಿ.


–ಮಡೆನೂರಮನು, ಹಾಸನ

**

ಹಾಸ್ಯ ನಮ್ಮ ವ್ಯಕ್ತಿತ್ವದಲ್ಲಿರುತ್ತದೆ, ಹಾವ–ಭಾವದಲ್ಲಿರುತ್ತದೆ. ಒಂದೇ ಜೋಕನ್ನು ಹತ್ತು ರೀತಿಯ ಮುಖಭಾವದಲ್ಲಿ ಹೇಳಿದಾಗ ಹತ್ತೂ ಬಾರಿ ಜನರನ್ನು ನಗಿಸಬಹುದು. ಅದನ್ನಿಲ್ಲಿಯೇ ಕಲಿತೆ, ಜೊತೆಗೆ ನನ್ನ ಕೆಲಸ ನಾನೇ ಮಾಡಿಕೊಳ್ಳೋದು ಕಲಿತೆ.


–ಸೂರಜ್‌, ಮಂಗಳೂರು

**

ನಾನು ಈಗಾಗಲೇ ಗೆದ್ದು ಬಿಟ್ಟಿದ್ದೀನಿ. ವೇದಿಕೆಯ ಗೆಲುವಿಗಿಂತ ಆಂತರಿಕ ಗೆಲುವು ಮುಖ್ಯ. ಈ ಆರು ತಿಂಗಳ ಅವಧಿಯಲ್ಲಿ ಜೀ ಕನ್ನಡ ವಾಹಿನಿಯ ಅಂಗಳದಲ್ಲಿ ಸಾಕಷ್ಟನ್ನು ಕಲಿತಿದ್ದೀನಿ. ಇದಕ್ಕಿಂತ ಹೆಚ್ಚಿನ ಗೆಲುವು ಏನಿಲ್ಲ.


–ಮಂಥನ, ಬೆಂಗಳೂರು

**

ನಗಿಸುವುದು ಗೊತ್ತಿದ್ದರೆ ಇಷ್ಟು ಬೇಗ ಜಪ್ರಿಯವಾಗಬಹುದು ಅಂತ ಅಂದುಕೊಂಡಿರಲಿಲ್ಲ. ಈ ಆರು ತಿಂಗಳ ಅವಧಿಯಲ್ಲಿ ನಾವೆಲ್ಲ ಸೆಲಿಬ್ರಿಟಿ ಆಗಿದ್ದೀವಿ.


–ಚಿದಂಬರ, ರಾಯಚೂರು

**

ನಾವು ಮೊದಲು ನಿಜವಾದ ಅರ್ಥದಲ್ಲಿ ಬದುಕೋದನ್ನ ಕಲಿಬೇಕು. ಆಗಲೇ ಒಳಗಿನಿಂದ ನಗು ಹುಟ್ಟೋದು. ಅಂದಾಗ ಮಾತ್ರ ನಾವು ಬೇರೆಯವರನ್ನೂ ನಗಿಸಲು ಸಾಧ್ಯ.


–ಅಪ್ಪಣ್ಣ ರಾಮದುರ್ಗ, ಬೆಳಗಾವಿ

**

ಇಲ್ಲಿರುವ ನಾವೆಲ್ಲಾ ನೊಂದು ಬಂದವರು, ಬಹುತೇಕ ಒಂದೇ ಹಿನ್ನೆಲೆಯುಳ್ಳವರು. ನಮ್ಮ ಕಲೆ, ಸಾಮರ್ಥ್ಯದ ಆಧಾರದ ಮೇಲೆ ನಮಗೆ ಅವಕಾಶ ಕೊಟ್ರು. ನಾವೇನು ಅಂತ ನಾವು ತೋರಿಸಿದೆವು. ಕಲೆಗೆ ಭಾಷೆ ಅಡ್ಡಿಯಲ್ಲ ಅಂತ ಸಾಬೀತುಮಾಡಲು ಇದೊಂದು ವೇದಿಕೆ ಸಿಕ್ಕಿತು.


–ಸದಾನಂದ, ಧಾರವಾಡ

**

ಈ ಅನುಭವ ಹೊಸ ಹುಮ್ಮಸ್ಸು ಕೊಟ್ಟಿದೆ. ಪ್ರತಿ ದಿನ ಕಣ್ಣು ಬಿಡುವಾಗ ಇಂದು ಏನು ಎನ್ನುವ ಥ್ರಿಲ್‌ ಇರುತ್ತಿತ್ತು. ಬದುಕು ಬದಲಾಗಿದೆ. ನಾಳೆಯ ಬಗ್ಗೆ ಭರವಸೆ ಮೂಡಿದೆ.


–ಸೂರ್ಯ, ಕುಂದಾಪುರ

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !