ವಿಹಾರಧಾಮಕ್ಕೆ ಹೈಟೆಕ್‌ ಸ್ಪರ್ಶ

7
ನನಸಾಗಲಿದೆ ನಗರ ಜನರ ಬಹುದಿನಗಳ ಕನಸು

ವಿಹಾರಧಾಮಕ್ಕೆ ಹೈಟೆಕ್‌ ಸ್ಪರ್ಶ

Published:
Updated:
ಹಾಸನ ಹೊಸ ಬಸ್ ನಿಲ್ದಾಣ ಸಮೀಪ ನಿರ್ಮಾಣವಾಗುತ್ತಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನಾ ಕೇಂದ್ರ.

ಹಾಸನ: ನಗರದ ಜನರ ಬಹುದಿನಗಳ ಕನಸಾಗಿದ್ದ ಪ್ರವಾಸಿ ಹೋಟೆಲ್‌ ಮತ್ತು ಮನರಂಜನಾ ಕೇಂದ್ರ (ವಿಹಾರಧಾಮ) ಕ್ಕೆ ಹೈಟೆಕ್ ಸ್ಪರ್ಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ನಗರದ ಹೊಸ ಬಸ್ ನಿಲ್ದಾಣ ಸಮೀಪದ ಚನ್ನಪಟ್ಟಣ ಕೆರೆಯಲ್ಲಿ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದ್ದು, ಇದಕ್ಕಾಗಿ ನೀಲನಕ್ಷೆ ಸಿದ್ದಪಡಿಸಲಾಗಿದೆ. ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಈ ಕಾಮಗಾರಿ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.

ಪ್ರಸ್ತುತ ಪ್ರವಾಸಿ ಹೋಟೆಲ್ ಕಟ್ಟಡದ ಸುತ್ತ ಇರುವ ಕೆರೆಯನ್ನು ಅಭಿವೃದ್ಧಿಪಡಿಸಿ ದೋಣಿ ವಿಹಾರ, ಜಲ ಸಾಹಸ ಕ್ರೀಡೆಗೆ ಅಗತ್ಯವಾದ ಇತರೆ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಕಟ್ಟಡದ ಎರಡೂ ಬದಿಯಲ್ಲಿ ಅತ್ಯಾಧುನಿಕ ತೂಗು ಸೇತುವೆ ನಿರ್ಮಿಸುವುದು, ಕಟ್ಟಡದ ಸುತ್ತಲು 10 ಅಡಿಗಿಂತಲೂ ಕಡಿಮೆ ಎತ್ತರ ಬೆಳೆಯುವ ವರ್ಷಪೂರ್ತಿ ಹೂವು ಬಿಡುವ ಗಿಡಗಳನ್ನು ಬೆಳೆಸಿ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದರ ಜತೆಗೆ ಪುಷ್ಪೋದ್ಯಾನ ಮತ್ತು ಅರಣ್ಯೀಕರಣಕ್ಕೂ ಆದ್ಯತೆ ನೀಡಲಾಗುತ್ತದೆ.

ಪ್ರವಾಸಿ ಮಂದಿರದ ಸುತ್ತಲೂ ಅಂದಾಜು 5 ಕಿ.ಮೀ. ರಸ್ತೆ ಇದ್ದು, ಇಲ್ಲಿ ವಾಯು ವಿಹಾರ ಮಾಡುವವರಿಗೆ ಅನುಕೂಲವಾಗುವಂತೆ ವಾಕಿಂಗ್‌ ಪಾತ್ ನಿರ್ಮಾಣ, ವಿಶ್ರಾಂತಿಗೆ ಆಸನದ ವ್ಯವಸ್ಥೆ ಹಾಗೂ ಹೋಟೆಲ್‌ ಸುತ್ತ ಮಕ್ಕಳ ರೈಲು ಸಂಚಾರ ವ್ಯವಸ್ಥೆ ಜವಾಬ್ದಾರಿಯನ್ನು ‘ನಮ್ಮ ಮೆಟ್ರೋ’ ಸಂಸ್ಥೆಗೆ ವಹಿಸಲು ಚಿಂತಿಸಲಾಗಿದೆ.

ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡುವಾಗ ನೂರಾರು ಎಕರೆ ಇದ್ದ ಚನ್ನಪಟ್ಟಣ ಕೆರೆಯನ್ನು ಮುಚ್ಚಲಾಗಿತ್ತು. ಇದರಿಂದಾಗಿ ಚನ್ನಪಟ್ಟಣ ಬಡಾವಣೆಯ ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಈ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ನೀರಾವರಿ ಹೋರಾಟ ಸಮಿತಿ ಹಾಗೂ ಹಿರಿಯ ನಾಗರಿಕರು ಕೆರೆ ಅಂಗಳದಲ್ಲಿ ಅನೇಕ ಬಾರಿ ಹೋರಾಟ ನಡೆಸಿದ್ದರು.

ಎಚ್.ಡಿ. ರೇವಣ್ಣ ಅವರು ಲೋಕೋಪಯೋಗಿ ಸಚಿವರಾದ ನಂತರ ಸ್ಥಳಕ್ಕೆ ಭೇಟಿ ನೀಡಿ ನಿಗದಿತ ಅವಧಿಯಲ್ಲಿ ಯೋಜನೆ ರೂಪಿಸಿ. ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರವಾಸಿ ಹೋಟೆಲ್ ಎದುರು ಜಿಲ್ಲಾ ನ್ಯಾಯಾಲಯ ಕಟ್ಟಡ, ಪಕ್ಕದಲ್ಲಿ ಬಸ್ ನಿಲ್ದಾಣ ಇರುವುದರಿಂದ ಪ್ರವಾಸಿ ಹೋಟೆಲ್ ಕಾಮಗಾರಿ ಪೂರ್ಣಗೊಂಡರೆ ನಗರದ ಮೆರಗು ಮತ್ತಷ್ಟು ಹೆಚ್ಚಲಿದೆ.

ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಜನಾರ್ದನ್‌, ‘ಸಚಿವ ಎಚ್‌.ಡಿ.ರೇವಣ್ಣ ಅವರು ಸಭೆ ನಡೆಸಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ. ನೆಲ ಹಾಸು, ಹೋಟೆಲ್‌ಗೆ ಸಂಪರ್ಕ ರಸ್ತೆ ಅನ್ನು ₹ 1.25 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಲಿದೆ. ಕೆರೆಗೆ ನೀರು ತುಂಬಿಸುವುದು, ಜಲ ಸಾಹಸ ಕ್ರೀಡೆ, ಬೋಟಿಂಗ್‌, ದೀಪಾಲಂಕಾರ, ನಾಲ್ಕು ಕಡೆ ಪ್ರವೇಶ ದ್ವಾರ, ಮೇಲ್ಸೇತುವೆ ನಿರ್ಮಾಣಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !