ಸಿರಿಧಾನ್ಯ ಸ್ವಾದದ ‘ಗ್ರಾಮ ಭೋಜನಂ’

7

ಸಿರಿಧಾನ್ಯ ಸ್ವಾದದ ‘ಗ್ರಾಮ ಭೋಜನಂ’

Published:
Updated:
‘ಗ್ರಾಮ ಭೋಜನಂ’ ಹೋಟೆಲ್‌ನ ಹೊರ ನೋಟ

ಆ ಹೋಟೆಲ್ ಒಳಗೆ ಕಾಲಿಡುತ್ತಿದ್ದಂತೆಯೇ ಸ್ವಾಗತಿಸಿದ್ದು ಸುಂದರ ಹಸೆ ಚಿತ್ತಾರಗಳು. ಗೋಡೆಗಳ ಮೇಲೆ ಅಲ್ಲಲ್ಲಿ ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಮೂಡಿದ್ದ ಹೂಬಳ್ಳಿಗಳು ಥಟ್ಟನೆ ಮನಸೆಳೆದವು. ಹಳ್ಳಿಯ ಸೊಗಡನ್ನು ನೆನಪಿಸುವ ಅಕ್ಕಿ ಕೇರುವ ಮೊರಗಳನ್ನು ಗೋಡೆಗೆ ಆಕರ್ಷಕವಾಗಿ ಅಂಟಿಸಲಾಗಿತ್ತು. ಒಳಗಡೆ ಸಾಗಿ ಊಟದ ಟೇಬಲ್‌ ಆರಿಸಿಕೊಂಡಾಗ ಟೇಬಲ್ ಮೇಲೂ ಚಿತ್ತಾರದ ರಂಗೋಲಿ! ಓರಣವಾಗಿ ಜೋಡಿಸಿಟ್ಟಿದ್ದ ಚೊಂಬು ಮತ್ತು ಲೋಟಗಳು.

–ಇದು ಜಯನಗರ 7ನೇ ಬ್ಲಾಕ್‌ನಲ್ಲಿರುವ ‘ಪ್ರೇಮ್ಸ್ ಗ್ರಾಮ ಭೋಜನಂ’ ಹೋಟೆಲ್‌ನ ಝಲಕ್. ಬಾಯಾರಿಕೆ ತಣಿಸಿಕೊಳ್ಳಲು ನೀರು ಕುಡಿದಾಗ ಅದು ಮಾಮೂಲಿ ನೀರಿನಂತಿರಲಿಲ್ಲ. ಸುವಾಸನೆಯುಕ್ತ ರುಚಿಕರವಾದ ನೀರಿನ ರಹಸ್ಯವಿದ್ದದ್ದು ಲವಂಗ, ಏಲಕ್ಕಿ, ತುಳಸಿ ಎಲೆ ಮತ್ತು ಕರ್ಪೂರದ ಮಿಶ್ರಣದಲ್ಲಿ.

ಸಿರಿಧಾನ್ಯದ ಆಹಾರವನ್ನು ಎಲ್ಲಿಂದ ಆರಂಭಿಸಬೇಕು ಎನ್ನುವ ಗೊಂದಲದಲ್ಲಿರುವಾಗ ಅಲ್ಲಿನ ವೇಟರ್ ಹಾರಕದ ತಟ್ಟೆ ಇಡ್ಲಿ ತಂದಿಟ್ಟರು. ಸ್ಟೀಲ್ ತಟ್ಟೆಯೊಳಗೆ ಅಗಲವಾಗಿ ಹರಡಿಕೊಂಡಿದ್ದ ಹಸಿರು ಬಾಳೆಎಲೆಯೊಳಗೆ ಹಾರಕದ ತಟ್ಟೆ ಇಡ್ಲಿ ಶೇಂಗಾ ಚಟ್ನಿ, ಗುರ‍್ರೆಳ್ಳು ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಆಕರ್ಷಕವಾಗಿತ್ತು. ಮಲ್ಲಿಗೆ ಹೂವಿನಷ್ಟು ಮೃದುವಾದ ಇಡ್ಲಿಯನ್ನು ಶೇಂಗಾ ಚಟ್ನಿಯೊಳಗೆ ಅದ್ದಿ ಬಾಯಲ್ಲಿಟ್ಟಾಗ ಅದರ ಸವಿ ವಿಶಿಷ್ಟ ಅನುಭೂತಿ ನೀಡಿತು. ಇಡ್ಲಿ ಅಂದಾಗ ತುಸುವಾದರೂ ಹುಳಿ ಇರಬೇಕಲ್ಲ ಅಂದುಕೊಂಡಿದ್ದ ನನಗೆ ಹಾರಕದ ಇಡ್ಲಿ ನನ್ನ ಊಹೆಯನ್ನು ಅಡಿಮೇಲು ಮಾಡಿತ್ತು.

ನಂತರ ಬಿಸಿಬಿಸಿ ಸಾಮೆಯ ಪಡ್ಡನ್ನು ಬಾಯಲ್ಲಿಟ್ಟಾಗ ಮತ್ತೆ ಮತ್ತೆ ಅದನ್ನೇ ತಿನ್ನಬೇಕೆನ್ನುವ ಆಸೆಯಾಗುತ್ತಿತ್ತು. ಅದು ಮುಗಿದ ಮೇಲೆ ಸಿರಿಧಾನ್ಯಗಳ ಗರಿಗರಿ ದೋಸೆಯ ರುಚಿ ಸವಿಯಲು ಸಜ್ಜಾದೆ. ಅದು ಮುಗಿಯುತ್ತಿದ್ದಂತೆ ಹಾರಕದ ಕಾರ ಪೊಂಗಲ್ ಬಾಯಲಿಟ್ಟಾಗ ಕರಗುವಂತಿತ್ತು. ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ ತಾಳಿಪಟ್ಟು ಮಾದರಿಯ ಸಜ್ಜೆ ರೊಟ್ಟಿ, ರಾಗಿರೊಟ್ಟಿಯ ರುಚಿ ದೀರ್ಘಕಾಲ ನೆನಪಿಡುವಂಥದ್ದು. ನವಣೆ ಮತ್ತು ಸಾಮೆ ಅಕ್ಕಿಯ ಅನ್ನದ ಜತೆಗೆ ನುಗ್ಗೆಕಾಯಿಯ ಗಟ್ಟಿ ಸಾಂಬಾರು ಮತ್ತು ವೀಳ್ಯೆದೆಲೆ–ಕಾಳುಮೆಣಸಿನ ರಸಂ ಸ್ವಾದ ನಾಲಗೆಯ ರುಚಿಮೊಗ್ಗುಗಳನ್ನು ಅರಳಿಸುವುದರ ಜತೆಗೆ ಮನತಣಿಸಿತು.

ಆರಂಭವಾಗಿ ಒಂದು ವರ್ಷದಲ್ಲೇ ‘ಗ್ರಾಮಭೋಜನಂ’ ಜಯನಗರವನ್ನೂ ಮೀರಿ ತನ್ನ ಖ್ಯಾತಿ ಗಳಿಸಿಕೊಂಡಿದೆ. ಯುವಜಿತ್ ವೆಂಕಟ ನಾರಾಯಣ್, ಸ್ಮಿತಾ ಯುವಜಿತ್, ಕೆ.ಸಿ. ಅವಿನಾಶ್, ಟೀನಾ ಅವಿನಾಶ್ ಮತ್ತು ತರುಣ್ ರೆಡ್ಡಿ ಹೀಗೆ ಐವರು ಜತೆಗೂಡಿ ಆರಂಭಿಸಿರುವ ಈ ಹೋಟೆಲ್‌ನಲ್ಲಿ ಸಂಪೂರ್ಣ ಸಿರಿಧಾನ್ಯಗಳ ಆಹಾರದ ಪಾರುಪತ್ಯ. ಬಿಳಿ ಅಕ್ಕಿ, ವನಸ್ಪತಿ, ಸಕ್ಕರೆ, ಕೃತಕ ಬಣ್ಣ ಮುಕ್ತ ಶೇಕಡ ನೂರರಷ್ಟು ಸಾವಯವ ಆಹಾರವನ್ನು ಗ್ರಾಹಕರಿಗೆ ನೀಡುವುದು ಈ ‘ಗ್ರಾಮಭೋಜನಂ’ನ ಉದ್ದೇಶ.

(ಕೆ.ಸಿ. ಅವಿನಾಶ್, ಟೀನಾ ಅವಿನಾಶ್, ಸ್ಮಿತಾ ಯುವಜಿತ್, ಯುವಜಿತ್ ವೆಂಕಟನಾರಾಯಣ)

ಚೆನ್ನೈನಲ್ಲಿ ಕೃಷ್ಣಮೂರ್ತಿ ಎನ್ನುವವರು ಆರಂಭಿಸಿದ ಸಿರಿಧಾನ್ಯಗಳ ಹೋಟೆಲ್‌ನಿಂದ ಪ್ರೇರಿತಗೊಂಡು ಯುವಜಿತ್ ಮತ್ತು ಸ್ನೇಹಿತರು ಜಯನಗರದಲ್ಲಿ ‘ಗ್ರಾಮಭೋಜನಂ’ ಆರಂಭಿಸಿದರು.

‘ಕೃಷ್ಣಮೂರ್ತಿ ಅವರ ಮಾರ್ಗದರ್ಶನ ನಮ್ಮ ಉತ್ಸಾಹ ಇಮ್ಮಡಿಗೊಳಿಸಿತು. ಮಯ್ಯಾಸ್‌, ರಜತಾದ್ರಿಯಂಥ ಹೋಟೆಲ್‌ಗಳ ನಡುವೆ ಸ್ಪರ್ಧೆ ಒಡ್ಡಬೇಕಾದರೆ ನಮ್ಮದೂ ಏನಾದರೂ ವಿಶೇಷವಿರಬೇಕು ಅನಿಸಿತು. ಅದಕ್ಕಾಗಿಯೇ ಸಿರಿಧಾನ್ಯಗಳ ಆಹಾರ ಪ್ರಯೋಗಿಸಿದೆವು. ಅದೇ ಸಮಯಕ್ಕೆ ರಾಜ್ಯ ಸರ್ಕಾರವೂ ಸಿರಿಧಾನ್ಯಗಳ ಮೇಳ ಮಾಡಿ ಜನಜಾಗೃತಿ ಮೂಡಿಸಿತು. ಇದು ನಮ್ಮ ಹೋಟೆಲ್‌ ಕಡೆಗೆ ಗ್ರಾಹಕರನ್ನು ಸೆಳೆಯಿತು’ ಎನ್ನುತ್ತಾರೆ ಹೋಟೆಲ್ ಮಾಲೀಕರಲ್ಲೊಬ್ಬರಾದ ಯುವಜಿತ್.

ಸಹಜ ಅರ್ಗಾನಿಕ್ಸ್ ಮೂಲಕ ಸ್ಥಳೀಯ ರೈತರು ಬೆಳೆದ ಸಿರಿಧಾನ್ಯ ಗಳನ್ನು ಬಳಸುತ್ತೇವೆ. ಕಪ್ಪಕ್ಕಿ, ಬಿದಿರಕ್ಕಿಯನ್ನು ಮಾತ್ರ ಹೊರಗಿನಿಂದ ತರಿಸುತ್ತೇವೆ. ನಮ್ಮಲ್ಲಿ ಅಂಗಡಿ ತುಪ್ಪಕ್ಕಿಂತ ಮನೆಯಲ್ಲೇ ತಯಾರಿಸಿದ ತುಪ್ಪವನ್ನು ಅಡುಗೆಗೆ ಬಳಸುತ್ತೇವೆ. ಸ್ವಿಗ್ಗಿ ಮತ್ತು ಜೊಮ್ಯಾಟೊ ಮೂಲಕವೂ ನಮ್ಮ ಹೋಟೆಲ್‌ನ ಖಾದ್ಯಗಳಿಗೆ ಬೇಡಿಕೆ ಇದೆ ಎಂದು ‘ಗ್ರಾಮಭೋಜನಂ’ ಯಶಸ್ಸಿನ ಕಥೆ ಬಿಚ್ಚಿಡುತ್ತಾರೆ ಯುವಜಿತ್.

ಪೈನಾಪಲ್, ಸಿರಿಧಾನ್ಯದ ರವೆ, ಕೆಂಪಕ್ಕಿ, ಕಪ್ಪಕ್ಕಿ, ಸಾವಯವ ಬೆಲ್ಲ ಬಳಸಿ ಹಲ್ವಾ ಮತ್ತಿತರ ಸಿಹಿತಿನಿಸುಗಳನ್ನು ತಯಾರಿಸುತ್ತೇವೆ. ಹಾರಕ ಇಡ್ಲಿ, ಸಾಮೆ ಪಡ್ಡು, ಹಾರಕ ಪೊಂಗಲ್, ನವಣೆ ಅನ್ನ ಸಾರು, ಊದಲು ಅನ್ನ ಸಾರ, ರಾಗಿರೊಟ್ಟಿ, ಸಜ್ಜೆ ರೊಟ್ಟಿ, ಸಾಮೆ ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ನವಣೆ ಅಕ್ಕಿಯ ವೆಜ್ ಬಿರಿಯಾನಿ ಸೇರಿದಂತೆ ಇನ್ನಿತರ ಸಿರಿಧಾನ್ಯಗಳ ಆಹಾರ ಪಟ್ಟಿಯೇ ಇಲ್ಲಿದೆ. ಅಶೋಕ ಹಲ್ವಾ, ಸಾಮೆ ಅಕ್ಕಿ ಪೊಂಗಲ್, ಕಪ್ಪಕ್ಕಿ ಹಲ್ವಾ ಇಲ್ಲಿಯ ಸಿಗ್ನೇಚರ್ ಡಿಷ್‌ಗಳು.

**

‘ಗ್ರಾಮಭೋಜನಂ’ಗೆ ನಿಯಮಿತವಾಗಿ ಬರ್ತೀನಿ. ಇಲ್ಲಿನ ಸಿರಿಧಾನ್ಯಗಳ ತಿಂಡಿ–ಊಟ ನನಗಿಷ್ಟ. ಅದರಲ್ಲೂ ಇಲ್ಲಿಗೆ ಬಂದಾಗ ತಪ್ಪದೇ ಇಡ್ಲಿ ತಿನ್ತೀನಿ. ತುಂಬಾ ಚೆನ್ನಾಗಿರುತ್ತೆ.

–ಕಾತ್ಯಾಯಿನಿ ಗೋಪಾಲಕೃಷ್ಣ, ಸಾಮಾಜಿಕ ಕಾರ್ಯಕರ್ತೆ

ಬರಹ ಇಷ್ಟವಾಯಿತೆ?

 • 15

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !