ಶಿರಾಡಿ: ಕಾಂಕ್ರೀಟೀಕರಣ ಕಾಮಗಾರಿ ಅಂತ್ಯ

7
ಜುಲೈ 15ರ ಬಳಿಕ ವಾಹನ ಸಂಚಾರ ಆರಂಭ ಸಾಧ್ಯತೆ

ಶಿರಾಡಿ: ಕಾಂಕ್ರೀಟೀಕರಣ ಕಾಮಗಾರಿ ಅಂತ್ಯ

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಶಿರಾಡಿ ಘಾಟಿ ಮಾರ್ಗದಲ್ಲಿ 12.38 ಕಿಲೋಮೀಟರ್‌ ಉದ್ದದ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 15 ದಿನಗಳ ಕ್ಯೂರಿಂಗ್‌ ಬಳಿಕ ಈ ಮಾರ್ಗವು ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಮಣ್ಣು ಕುಸಿತ ಸಂಭವಿಸಿ ತೊಂದರೆ ಆಗಿರುವ ಕಾರಣದಿಂದ ಶಿರಾಡಿ ಮಾರ್ಗದಲ್ಲಿ ಜುಲೈ 5ರಿಂದಲೇ ವಾಹನ ಸಂಚಾರಕ್ಕೆ ಅವಕಾಶ ನೀಡಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಆದರೆ, ಕಾಂಕ್ರೀಟೀಕರಣ ಯಂತ್ರದಲ್ಲಿನ ತಾಂತ್ರಿಕ ದೋಷ ಮತ್ತು ಮಳೆಯ ಕಾರಣದಿಂದ ಕಾಮಗಾರಿ ತುಸು ವಿಳಂಬವಾಗಿತ್ತು. 420 ಮೀಟರ್ ಉದ್ದದ ಎರಡು ಸೇತುವೆಗಳ ಕೆಲಸ ಬಾಕಿ ಉಳಿದಿತ್ತು.

ಕಾಮಗಾರಿ ಅಂತಿಮ ಹಂತಕ್ಕೆ ಬಂದಿರುವುದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮಂಗಳೂರು ವೃತ್ತದ ಕಾರ್ಯನಿರ್ವಾಹಕ ಎಂಜಿಯರ್‌ ಸುಬ್ಬರಾಮ ಹೊಳ್ಳ, ‘ಕಾಂಕ್ರೀಟ್‌ ರಸ್ತೆ ನಿರ್ಮಾಣ ಗುರುವಾರ ರಾತ್ರಿ ಸಂಪೂರ್ಣಗೊಂಡಿದೆ. ಕಾಂಕ್ರೀಟ್‌ ರಸ್ತೆ ಅಂತ್ಯಗೊಳ್ಳುವ ಸ್ಥಳದಲ್ಲಿ ಸಣ್ಣ ಕೆಲಸ ಬಾಕಿ ಉಳಿದಿದೆ. ಕ್ಯೂರಿಂಗ್‌ಗೆ 15 ದಿನಗಳು ಬೇಕಿದೆ. ಆ ನಂತರ ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತ ತೀರ್ಮಾನಕ್ಕೆ ಬರಲಿವೆ’ ಎಂದರು.

ತಡೆಗೋಡೆ ಕಾಮಗಾರಿ ಬಾಕಿ:

ಈಗ ಶಿರಾಡಿ ಮಾರ್ಗದಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಮಾತ್ರ ಮುಗಿದಿದೆ. ಆದರೆ, ಈ ಮಾರ್ಗದಲ್ಲಿ ತಡೆಗೋಡೆ ಮತ್ತು ರಸ್ತೆಯ ಬದಿಯನ್ನು ಸರಿಪಡಿಸುವ ಕೆಲಸ ಇನ್ನೂ ಬಾಕಿ ಇದೆ. ಹಲವು ತಿರುವುಗಳು ಮತ್ತು ಕಡಿದಾದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿಗೆ ಒಂದು ತಿಂಗಳು ಬೇಕಾಗಬಹುದು ಎಂದು ಅವರು ತಿಳಿಸಿದರು.

ಸದ್ಯ ಕ್ಯೂರಿಂಗ್‌ ಮುಗಿದರೆ ವಾಹನ ಸಂಚಾರಕ್ಕೆ ಅವಕಾಶ ನೀಡಲು ಯಾವುದೇ ತೊಂದರೆ ಇರುವುದಿಲ್ಲ. ತಡೆಗೋಡೆ ಮತ್ತು ರಸ್ತೆ ಬದಿಯನ್ನು ಸರಿಪಡಿಸುವ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ ಎಂದರು.

ಎರಡು ಹಂತದ ಕಾಮಗಾರಿ:

ಈ ಮಾರ್ಗದಲ್ಲಿ ಪದೇ ಪದೇ ಮಳೆಗಾಲದಲ್ಲಿ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದು, ವಾಹನ ಸಂಚಾರ ದುಸ್ತರವಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 26 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ಮತ್ತು 21 ಕಿ.ಮೀ. ಉದ್ದದ ಡಾಂಬರು ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2013ರಲ್ಲಿ ಒಪ್ಪಿಗೆ ನೀಡಿತ್ತು.

ಮೊದಲ ಹಂತದಲ್ಲಿ 13.62 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿತ್ತು. ಎರಡನೇ ಹಂತದಲ್ಲಿ 12.38 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ಮತ್ತು 21 ಕಿ.ಮೀ. ಡಾಂಬರು ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಚೆನ್ನೈನ ಜಿವಿಆರ್‌ ಇನ್‌ಫ್ರಾ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಸಕಾಲಕ್ಕೆ ಕಾಮಗಾರಿ ಆರಂಭಿಸಿರಲಿಲ್ಲ. 2017ರ ಜನವರಿಯಲ್ಲಿ ಈ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು.

ಮೊದಲ ಹಂತದಲ್ಲಿ ರಸ್ತೆ ನಿರ್ಮಿಸಿದ್ದ ಮಂಗಳೂರಿನ ಓಷನ್‌ ಇಂಡಿಯಾ ಕನ್‌ಸ್ಟ್ರಕ್ಷನ್‌ ಪ್ರೈವೇಟ್ ಲಿಮಿಟೆಡ್‌ಗೆ ಎರಡನೇ ಹಂತದ ಕಾಮಗಾರಿಯ ಗುತ್ತಿಗೆಯನ್ನೂ ನೀಡಲಾಗಿತ್ತು. 2018ರ ಜನವರಿ ಅಂತ್ಯದಲ್ಲಿ ಕಾಮಗಾರಿ ಕಾರಣದಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ದಾಖಲೆಯ ಐದು ತಿಂಗಳ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !