ಕೈದಿಗಳ ಸಮಸ್ಯೆ ಬಗೆಹರಿಸಲು ಸಹಕಾರಿ

7
ಗಣಕೀಕೃತ ಕಾನೂನು ಸಹಾಯ ಕೇಂದ್ರ ಉದ್ಘಾಟನೆ: ನ್ಯಾ. ಬೈಲೂರು ಶಂಕರರಾಮ ಹೇಳಿಕೆ

ಕೈದಿಗಳ ಸಮಸ್ಯೆ ಬಗೆಹರಿಸಲು ಸಹಕಾರಿ

Published:
Updated:
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ಗಣಕೀಕೃತ ಕಾನೂನು ಸಹಾಯ ಕೇಂದ್ರ ಉದ್ಘಾಟನೆ ಮತ್ತು ಮಹಿಳಾ ಕೈದಿಗಳು ಹಾಗೂ ಅವರೊಂದಿಗಿರುವ ಮಕ್ಕಳಿಗೆ ಕಾನೂನು ಸೇವೆ ನೀಡುವ ಅಭಿಯಾನದ ಮುಕ್ತಾಯ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ ಮಾತನಾಡಿದರು

ರಾಯಚೂರು: ಗಣಕೀಕೃತ ಕಾನೂನು ಸಹಾಯ ಸೇವಾ ಕೇಂದ್ರದಿಂದ ಆರೋಪಿ ಹಾಗೂ ಅಪರಾಧಿಗಳ ಸಮಸ್ಯೆಗಳನ್ನು ಕ್ಷಿಪ್ರ ಗತಿಯಲ್ಲಿ ಬಗೆಹರಿಸಲು ತುಂಬ ಸಹಾಯವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ ಹೇಳಿದರು.

ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಇಲಾಖೆ ಹಾಗೂ ವಕೀಲರ ಸಂಘದಿಂದ ಶನಿವಾರ ಆಯೋಜಿಸಿದ್ದ ಗಣಕೀಕೃತ ಕಾನೂನು ಸಹಾಯ ಕೇಂದ್ರ ಉದ್ಘಾಟನೆ ಮತ್ತು ಮಹಿಳಾ ಕೈದಿಗಳು ಹಾಗೂ ಅವರೊಂದಿಗಿರುವ ಮಕ್ಕಳಿಗೆ ಕಾನೂನು ಸೇವೆ ನೀಡುವ ಅಭಿಯಾನದ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗಣಕೀಕೃತ ಕಾನೂನು ಸೇವಾ ಕೇಂದ್ರದ ಸಹಾಯದಿಂದ ಕೈದಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ನ್ಯಾಯಾಧೀಶರಿಗೆ ತಲುಪುವಂತೆ ಮಾಡಬಹುದಾಗಿದೆ ಎಂದರು. ಮಹಿಳಾ ಕೈದಿಗಳು ಹಾಗೂ ಅವರ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದ್ದು, ಆರೋಗ್ಯ ಸಮಸ್ಯೆಗಳಿದ್ದರೆ ನಿಂತ ಜಾಗದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಕೈದಿಗಳ ಮಕ್ಕಳಿಗೆ ಶಿಶು ವಿಹಾರಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕರ ಮೂಲಕ ಸಮಸ್ಯೆಗಳನ್ನು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ತಲುಪಿಸಿ ಕೂಡಲೇ ಪರಿಹಾರ ಪಡೆಯಬಹುದು. ಕಾನೂನು ಪ್ರಾಧಿಕಾರದಲ್ಲಿ ನುರಿತ ವಕೀಲರಿದ್ದು, ಕೈದಿಗಳು ಸಹಾಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳನ್ನು ಕೈದಿಗಳು ತಿಳಿದುಕೊಳ್ಳಬೇಕು. ಕಾನೂನಿನ ಸೌಲಭ್ಯಗಳನ್ನು ಅರಿತುಕೊಂಡು ಲೋಕ ಅದಾಲತ್‌ನ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಗಣಕೀಕೃತ ಸೇವಾ ಕೇಂದ್ರದಿಂದ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಷ್ಟ್ರೀಯ ಕಾನೂನು ಪ್ರಾಧಿಕಾರಕ್ಕೆ ನೇರ ಸಂಪರ್ಕ ಸಾಧಿಸಬಹುದು. ಅಗತ್ಯಬಿದ್ದರೆ ಕಾರಾಗೃಹದಲ್ಲಿ ಲೋಕ ಅದಾಲತ್ ಆಯೋಜಿಸಲಾಗುತ್ತದೆ ಎಂದರು.

ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮಾತನಾಡಿ, ಕಾರಾಗೃಹದಲ್ಲಿ ಇರುವವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿಲ್ಲ. ಆದರೆ, ಜೈಲಿನಿಂದ ಹೊರಹೋದ ನಂತರ ಸಮಾಜಕ್ಕೆ ಮಾದರಿಯಾಗಿ ಜೀವಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಂ.ಶಹಾಬುದ್ದೀನ್ ಮಾತನಾಡಿ, ಗಣಕೀಕೃತ ಕಾನೂನು ಸಹಾಯ ಸೇವಾ ಕೇಂದ್ರದ ಸಹಾಯದಿಂದ ಪ್ರಕರಣದ ಕುರಿತು ಹಾಗೂ ಅದರ ಸ್ಥಿತಿಯನ್ನು ಇಲ್ಲಿಂದಲೇ ಕೈದಿಗಳು ತಿಳಿದುಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ, ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರ ಯಲಿ ಇದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !