ಕೆಎಸ್‌ಆರ್‌ಟಿಸಿ ನೌಕರರ ಸಂಘಕ್ಕೆ ಲಾಭ

7

ಕೆಎಸ್‌ಆರ್‌ಟಿಸಿ ನೌಕರರ ಸಂಘಕ್ಕೆ ಲಾಭ

Published:
Updated:
ಕೋಲಾರದಲ್ಲಿ ಶನಿವಾರ ನಡೆದ ಕೆಎಸ್‌ಆರ್‌ಟಿಸಿ ನೌಕರರ ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ವಿ.ಮಂಜುನಾಥ್‌ ಮಾತನಾಡಿದರು.

ಕೋಲಾರ: ‘ಪಾರದರ್ಶಕ ಆಡಳಿತದಿಂದಾಗಿ ಸಂಘಕ್ಕೆ ₹ 2.90 ಲಕ್ಷ ಲಾಭ ಬಂದಿದೆ. ಸಹಕಾರ ಸಂಘವನ್ನು ಲಾಭದಾಯಕವಾಗಿ ಮುನ್ನೆಡಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ವಿ.ಮಂಜುನಾಥ್ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಕೆಎಸ್‌ಆರ್‌ಟಿಸಿ ನೌಕರರ ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ಸಂಘದ ಉತ್ತಮ ಕಾರ್ಯ ನಿರ್ವಹಣೆಗೆ ಪದಾಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಲಾಭ ನಷ್ಟದ ಲೆಕ್ಕ ಪಾರದರ್ಶಕವಾಗಿದ್ದರೆ ಸಮಸ್ಯೆ ಎದುರಾಗುವುದಿಲ್ಲ’ ಎಂದರು.

‘ಸಂಘದ ಪ್ರತಿ ಸದಸ್ಯರು ಸಂಘದ ಅಭಿವೃದ್ಧಿ ಬಗ್ಗೆ ಚಿಂತಿಸಿದರೆ ಸಂಘವು ಲಾಭ ಗಳಿಕೆಯ ಹಾದಿಯಲ್ಲಿ ಸಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ವ್ಯವಸ್ಥೆಗೆ ಭ್ರಷ್ಟತೆಯ ಕಳಂಕ ಅಂಟಿಕೊಳ್ಳುತ್ತಿದ್ದು, ಸಂಸ್ಥೆಯ ನೌಕರರ ಸಂಘ ಭ್ರಷ್ಟಾಚಾರದಿಂದ ದೂರವಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ವಹಿವಾಟು ಏರಿಕೆ: ‘ಸಂಘವು ಈ ಹಿಂದೆ ₹ 25 ಲಕ್ಷ ವಹಿವಾಟು ನಡೆಸುವ ಮೂಲಕ ಸುಮಾರು 27 ಪದಾರ್ಥಗಳನ್ನು ಮಾರಾಟ ಮಾಡುತ್ತಿತ್ತು. ನಾನು ಅಧಿಕಾರ ವಹಿಸಿಕೊಂಡ ನಂತರ 300 ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ವಹಿವಾಟು ಪ್ರಮಾಣ ₹ 45 ಲಕ್ಷಕ್ಕೆ ಏರಿದೆ’ ಎಂದು ಸಂಘದ ಅಧ್ಯಕ್ಷ ಗೋಪಾಲಗೌಡ ವಿವರಿಸಿದರು.

‘ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಗಣಕೀಕೃತ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವ್ಯವಹಾರದಲ್ಲಿ ಯಾವುದೇ ಅಕ್ರಮವಾಗದಂತೆ ಎಚ್ಚರ ವಹಿಸಿದ್ದು, ಸಂಘವನ್ನು ಆರ್ಥಿಕವಾಗಿ ಬಲಗೊಳಿಸಲು ಸದಸ್ಯರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ವರದಿಗೆ ಅನುಮೋದನೆ: ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಸದಸ್ಯರು ಅನುಮೋದಿಸಿದರು. 2013-14ನೇ ಸಾಲಿನಲ್ಲಿ ಸಂಘದ ₹ 85 ಸಾವಿರ ದುರುಪಯೋಗವಾಗಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದ್ದು, ಆ ಹಣವನ್ನು ಆಗ ಕಾರ್ಯದರ್ಶಿಯಾಗಿದ್ದವರಿಂದ ವಸೂಲಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೆಎಸ್‌ಆರ್‌ಟಿಸಿ ವಿಭಾಗೀಯ ಎಂಜಿನಿಯರ್ ನಾಗರಾಜ್, ಕಾರ್ಮಿಕ ಕಲ್ಯಾಣಾಧಿಕಾರಿ ನಾಗನಾಯಕ್, ಭದ್ರತಾ ವಿಭಾಗದ ಮುಖ್ಯಸ್ಥ ಅಜಿತ್, ಸಂಘದ ಕಾರ್ಯದರ್ಶಿ ಸೊಣ್ಣೇಗೌಡ, ನಿರ್ದೇಶಕರಾದ ಈಶ್ವರಪ್ಪ, ವಿಶ್ವನಾಥ್, ಶಂಕರ್, ನಾಗಮಣಿ, ಸುಗುಣಾ, ಗುರುರಾಜ್, ಟಿ.ಎಂ.ವೆಂಕಟೇಶ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !