ರಶೀದ್ ಮಲಬಾರಿ ಬಂಧನ ವದಂತಿ

7

ರಶೀದ್ ಮಲಬಾರಿ ಬಂಧನ ವದಂತಿ

Published:
Updated:

ಮಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ತಲೆಮರೆಸಿಕೊಂಡಿರುವ ಕುಖ್ಯಾತ ಶಾರ್ಪ್‌ ಶೂಟರ್‌ ರಶೀದ್‌ ಮಲಬಾರಿಯನ್ನು ಅಬುಧಾಬಿ ಪೊಲೀಸರು ಮೇ ತಿಂಗಳಿನಲ್ಲಿ ಬಂಧಿಸಿದ್ದಾರೆ ಎಂಬ ವದಂತಿ ಹಬ್ಬಿದೆ.

ಕೊಲೆ, ಬೆದರಿಕೆ, ಗುಂಡಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರಶೀದ್ ಮಲಬಾರಿಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಹೈಕೋರ್ಟ್‌ ಆತನಿಗೆ ಜಾಮೀನು ಮಂಜೂರು ಮಾಡಿತ್ತು. 2014ರ ಜುಲೈ 21ರಂದು ಕಾರಾಗೃಹದಿಂದ ಬಿಡುಗಡೆಯಾಗಿದ್ದ. ಆ ಬಳಿಕ ತಲೆಮರೆಸಿಕೊಂಡಿದ್ದಾನೆ.

2014ರ ಜುಲೈ 24ರಂದು ಮಂಗಳೂರಿನಲ್ಲಿ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆಗಿನಿಂದಲೇ ತಪ್ಪಿಸಿಕೊಂಡಿದ್ದ ಆತ ತಲೆಮರೆಸಿಕೊಂಡಿದ್ದಾನೆ. ಪೊಲೀಸರು, ಗುಪ್ತದಳದ ಅಧಿಕಾರಿಗಳು ರಶೀದ್‌ಗಾಗಿ ದೀರ್ಘ ಕಾಲದಿಂದ ಶೋಧ ನಡೆಸುತ್ತಿದ್ದಾರೆ. ಈತನ ಪತ್ತೆಗಾಗಿ ಮಂಗಳೂರು ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದರು.

ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಆಧರಿಸಿ ಇಂಟರ್‌ಪೋಲ್‌ ಮೂಲಕ ರೆಡ್‌ ಕಾರ್ನ್‌ ನೋಟಿಸ್ ಜಾರಿ ಮಾಡಲಾಗಿತ್ತು. ಇಂಟರ್‌ಪೋಲ್ ಮಾಹಿತಿ ಆಧರಿಸಿ ಅಬುಧಾಬಿ ಪೊಲೀಸರು ರಶೀದ್‌ನನ್ನು ಬಂಧಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆತನ ಸಂಬಂಧಿಕರಿಂದಲೇ ಈ ಮಾಹಿತಿ ಹೊರಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ‘ರಶೀದ್ ಮಲಬಾರಿಯನ್ನು ಬಂಧಿಸಲಾಗಿದೆ ಎಂಬ ವದಂತಿಯಷ್ಟೇ ನಮಗೂ ಗೊತ್ತಿದೆ. ಆದರೆ, ಅದು ಖಚಿತವಾಗಿಲ್ಲ. ಈ ಸಂಬಂಧ ಪೊಲೀಸ್‌ ಇಲಾಖೆಯ ಪ್ರಧಾನ ಕಚೇರಿಗೆ ಮಾಹಿತಿ ನೀಡಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಇಂಟರ್‌ಪೋಲ್‌ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !