ಅಮ್ಮನ ಕೈರುಚಿ; ‘ಅಕ್ಕ’ನ ಪ್ರೀತಿ!

7

ಅಮ್ಮನ ಕೈರುಚಿ; ‘ಅಕ್ಕ’ನ ಪ್ರೀತಿ!

Published:
Updated:
ಅಕ್ಕ

ತುಳುನಾಡಿನ ಆಚರಣೆಗಳು ಜನಪ್ರಿಯತೆ ಪಡೆದಂತೆ ಇಲ್ಲಿನ ಆಹಾರ ಸಂಸ್ಕೃತಿಯೂ ಜಗದ್ವಿಖ್ಯಾತಿಗಳಿಸಿದೆ. ಇಲ್ಲಿನ ಜನರ ಮನೆಗಳ ನಿತ್ಯದ ಮೆನುವಿನಲ್ಲಿ ಮೀನಿನ ಖಾದ್ಯಗಳು ಕಾಯಂ ಸ್ಥಾನಪಡೆದಿವೆ. ಕರಾವಳಿ ಭಾಗದ ಹೋಟೆಲ್‌ಗಳಲ್ಲಿ ಸಿಗುವಷ್ಟು ಮೀನಿನ ತಿನಿಸುಗಳ ವೈವಿಧ್ಯವನ್ನು ಬೇರೆಡೆ ಕಾಣುವುದೂ ಅಪರೂಪವೆನ್ನಿ. ಮಹಿಳೆಯರ ಆರ್ಥಿಕ ಸಬಲೀಕರಣ, ಶುಚಿತ್ವಕ್ಕೆ ಆದ್ಯತೆ, ಕಡಿಮೆ ಬೆಲೆ ಹಾಗೂ ಬದ್ಧತೆ ಈ ನಾಲ್ಕು ಮಂತ್ರಗಳನ್ನು ಪಠಿಸುತ್ತಾ ಗ್ರಾಹಕರಿಗೆ ಉತ್ಕೃಷ್ಟ ರುಚಿಯ ಮೀನಿನ ಖಾದ್ಯಗಳನ್ನು ಒದಗಿಸುತ್ತ ಜನಪ್ರಿಯತೆ ಗಳಿಸಿದೆ ಪಾಣೆಮಂಗಳೂರಿನ ಮೆಲ್ಕರ್‌ನಲ್ಲಿರುವ ‘ಅಕ್ಕ’ ಕೋಸ್ಟಲ್‌ಫುಡ್‌ ಹೋಟೆಲ್‌.

34 ಆಸನಗಳುಳ್ಳ ಹೋಟೆಲ್‌ನ ಒಳಗಡೆ ಕಾಲಿಡುತ್ತಿದ್ದಂತೆ ಕಾವಾ ವಿದ್ಯಾರ್ಥಿಯೊಬ್ಬರ ಕೈಚಳಕದಲ್ಲಿ ರೂಪುಗೊಂಡ ಒಳಾಂಗಣ ವಿನ್ಯಾಸ ಮನಕ್ಕೆ ಆಪ್ತ ಅನುಭವ ನೀಡುತ್ತದೆ. ಟೇಬಲ್‌ ಮೇಲೆ ಕುಳಿತು ಆರಾಮದ ಅನುಭವ ಪಡೆಯುಷ್ಟರಲ್ಲಿ ನಗುತುಳುಕಿಸುತ್ತಾ ಬರುವ ಹೆಣ್ಣು ಮಗಳೊಬ್ಬರು ಗಮನ ಸೆಳೆಯುತ್ತಾರೆ. ಕಂಚಿನ ಲೋಟದಲ್ಲಿ ನೀರು ಕೊಟ್ಟು ಉಪಚರಿಸುತ್ತಾರೆ. ಲೋಟ ತುಟಿಗಿಟ್ಟು ತಣ್ಣನೆಯ ನೀರು ಗುಟುಕರಿಸಿದರೆ ಕರಾವಳಿ ಬಿಸಿಲಿನ ತಾಪ ಕ್ಷಣಾರ್ಧದಲ್ಲೇ ಮರೆಯಾಗುತ್ತದೆ. ಮೆನು ಕೈಗೆತ್ತಿಕೊಂಡು ಕಣ್ಣಾಡಿಸಿದರೆ ನಮ್ಮ ಕಣ್ಣು ಆಚೀಚೆ ಸರಿಯದಂತೆ ಸೆಳೆಯುವುದು ಮಾತ್ರ ಮೀನಿನ ಖಾದ್ಯಗಳ ಪಟ್ಟಿ.

ಬಂಗುಡೆ, ಅಂಜಲ್‌, ಮಾಂಜಿ ಹಾಗೂ ಕಾಣೆ ಮೀನಿನ ಖಾದ್ಯಗಳು ಇಲ್ಲಿನ ಸಿಗ್ನೇಚರ್‌ ತಿನಿಸುಗಳು. ಪ್ರತಿದಿನವೂ ತಾಜಾ ಮೀನು ತರಿಸಿ ಅದರಿಂದ ಫ್ರೈ ಹಾಗೂ ಇನ್ನಿತರೆ ತಿನಿಸುಗಳನ್ನು ಮಾಡಿ ಕೊಡುತ್ತಾರೆ. ಪಾಣೆಮಂಗಳೂರಿಗೆ ಮಂಗಳೂರು ಮೀನು ಮಾರುಕಟ್ಟೆ ಹತ್ತಿರವಿದ್ದರೂ ಕೂಡ ‘ಅಕ್ಕ’ ಹೋಟೆಲ್‌ಗೆ ಮೀನು ಸರಬರಾಜಾಗುವುದು ಬೈಂದೂರು ಮೀನು ಮಾರುಕಟ್ಟೆಯಿಂದ. ಮಂಗಳೂರಿನ ಮೀನುಗಾರರು ಒಮ್ಮೆ ಸಮುದ್ರಕ್ಕೆ ಇಳಿದರೆ ಅವರು ಮರಳಿ ತೀರಕ್ಕೆ ಬರುವುದು ವಾರದ ನಂತರವೇ. ದೊಡ್ಡ ಬೋಟ್‌ನಲ್ಲಿ ಮೀನು ಶಿಕಾರಿಗೆ ತೆರಳುವುದರಿಂದ ಬೇಟೆಯಾಡಿದ ಮೀನುಗಳೆಲ್ಲವನ್ನೂ ಐಸ್‌ನಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಾರೆ. ಆದರೆ, ಉಡುಪಿ ಜಿಲ್ಲೆಯ ಮೀನುಗಾರರು ಶಿಕಾರಿ ಮಾಡುವುದು ಪುಟ್ಟ ದೋಣಿಗಳಲ್ಲಿ. ಬೆಳಿಗ್ಗೆ ಸಮುದ್ರಕ್ಕೆ ಇಳಿದು ಸಂಜೆ ವೇಳೆಗೆ ದಡಕ್ಕೆ ಹಿಂತಿರುಗಿ ತಾಜಾ ಮೀನು ತರುತ್ತಾರೆ. ಹಾಗಾಗಿ, ಅಕ್ಕ ಹೋಟೆಲ್‌ನ ಮೀನಿನ ಖಾದ್ಯಗಳನ್ನು ತಿನ್ನುವಾಗ ನಾಲಗೆಯಲ್ಲಿನ ರುಚಿಮೊಗ್ಗುಗಳು ಅರಳುತ್ತವೆ.

‘ಅಕ್ಕ’ ಹೋಟೆಲ್‌ನ ರುಚಿಕರ ಖಾದ್ಯಗಳ ಗುಟ್ಟು ಅಡಗಿರುವುದು ತಾಜಾ ಮೀನು ಮತ್ತು ಮನೆಯಲ್ಲಿ ತಯಾರಿಸಿದ ಮಸಾಲ ಪದಾರ್ಥಗಳ ಬಳಕೆಯಲ್ಲಿ. ಹಾಗೆಯೇ, ಇಲ್ಲಿ ಕೆಲಸ ಮಾಡುವ ಕರಾವಳಿ ಹೆಣ್ಣುಮಕ್ಕಳ ಕೈರುಚಿಯಲ್ಲಿ. ‘ಹಣ ಮಾಡಬೇಕು ಅಂತ ಹೋಟೆಲ್‌ ತೆರೆದಿಲ್ಲ. ಎಲ್ಲರೂ ಆಹಾರೋದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಪ್ಯಾಶನ್‌ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಹೋಟೆಲ್‌ಗೆ ಬಂದ ಗ್ರಾಹಕರು ಮನೆಯಲ್ಲೇ ಕುಳಿತು ಊಟ ಮಾಡಿದಂತಹ ಅನುಭವ ಕಟ್ಟಿಕೊಡಬೇಕು. ಈ ಉದ್ದೇಶದಿಂದಲೇ ನಾವು ಹೋಟೆಲ್‌ಗೆ ಬಂದವರನ್ನು ಗ್ರಾಹಕರಂತೆ ಕಾಣದೆ ಅತಿಥಿಗಳಂತೆ ಭಾವಿಸಿ ಉಪಚರಿಸುತ್ತೇವೆ’ ಎನ್ನುತ್ತಾರೆ ಹೋಟೆಲ್‌ನ ಮಾಲಕಿ ರೇಖಾ.

ಅಂದಹಾಗೆ, ‘ಅಕ್ಕ’ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗರೊಬ್ಬರನ್ನು ಬಿಟ್ಟರೆ ಉಳಿದ ಕೆಲಸಗಾರರೆಲ್ಲರೂ ಹೆಣ್ಣು ಮಕ್ಕಳು. ಏಕೆ ಹೀಗೆ ಎಂದು ಕೇಳಿದರೆ ರೇಖಾ ಅವರ ತಮ್ಮ ಕಿಶೋರ್‌ ಕುಮಾರ್‌ ಉತ್ತರಿಸಿದ್ದು ಹೀಗೆ: ‘ಮಹಿಳಾ ಕೆಲಸಗಾರರು ಇರುವುದು ಅಕ್ಕ ಹೋಟೆಲ್‌ನ ವಿಶೇಷತೆಗಳಲ್ಲಿ ಒಂದು. ಇದರ ಹಿಂದೆ ಮಹಿಳಾ ಸಬಲೀಕರಣದ ಉದ್ದೇಶವೂ ಇದೆ. ಹಾಗೆಯೇ, ನಮ್ಮ ಗ್ರಾಹಕರಿಗೆ ಕರಾವಳಿ ಖಾದ್ಯಗಳ ಅಪ್ಪಟ ಕೈರುಚಿ ಉಣಬಡಿಸುವ ಇರಾದೆಯೂ ಇದೆ. ಹೆಣ್ಣು ಮಕ್ಕಳು ಕೆಲಸ ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅವರೂ ಅಷ್ಟೇ ಶೇ 100ರಷ್ಟು ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಅಮ್ಮ ಅಥವಾ ಅಜ್ಜಿಯರು ಹೇಳಿಕೊಟ್ಟ ಅಡುಗೆ ವಿಧಾನವನ್ನು ಬಳಸಿ ಖಾದ್ಯ ತಯಾರಿಸಿ ಪ್ರೀತಿಯಿಂದ ಉಣಬಡಿಸುತ್ತಾರೆ. ಅಕ್ಕ ಹೋಟೆಲ್‌ ಜನಪ್ರಿಯತೆ ಪಡೆದಿರುವುದಕ್ಕೆ ನಮ್ಮಲ್ಲಿ ಕೆಲಸ ಮಾಡುವ ಮಹಿಳೆಯರೇ ಮುಖ್ಯ ಕಾರಣ’.

ಇನ್ನು ಇಲ್ಲಿ ಸಿಗುವ ಮೀನಿನ ಖಾದ್ಯಗಳ ರುಚಿಯ ಬಗ್ಗೆ ಹೇಳಲೇಬೇಕು. ರೆಸ್ಟೊರೆಂಟ್‌ಗಳಲ್ಲಿ ಸಿಗುವ ಮೀನಿನ ಖಾದ್ಯಗಳ ಬೆಲೆ ದುಬಾರಿ. ಆದರೆ, ಇಲ್ಲಿನ ಮೀನಿನ ಖಾದ್ಯಗಳ ಬೆಲೆ ಜೇಬನ್ನು ಹಗುರಾಗಿಸುವುದಿಲ್ಲ. ಮನೆಯಲ್ಲೇ ತಯಾರಿಸಿದ ಮಸಾಲೆ ಬಳಸಿ ಮಾಡಿದ ಅಂಜಲ್‌ ತವಾ ಫ್ರೈ ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುತ್ತದೆ. ತಾಜಾ ಮೀನಿಗೆ ಮನೆಯ ಮಸಾಲೆ ಬೆರೆತಿರುವುದರಿಂದ ಘಮಘಮಿಸುವ ಅಂಜಲ್‌ ಫಿಶ್‌ ಮೀನುಪ್ರಿಯರ ಮನದಲ್ಲಿ ತಿನ್ನುವ ಆಸೆಯನ್ನು ಪ್ರೇರೇಪಿಸುತ್ತದೆ. ಅಂತೆಯೇ, ಇಲ್ಲಿ ಸಿಗುವ ಪ್ರಾನ್‌ ಮಂಚೂರಿಯ ರುಚಿ ಕೂಡ ಅದ್ಭುತ.

ಅಕ್ಕ ಹೋಟೆಲ್‌ನಲ್ಲಿ ಮರುವಾಯಿ ಸುಕ್ಕಾವನ್ನು ಮಿಸ್‌ ಮಾಡದೇ ಸವಿಯಬೇಕು. ಒಳಕಲ್ಲಿನಲ್ಲಿ ರುಬ್ಬಿದ ಮಸಾಲೆ ಹಾಕಿ ಈ ತಿನಿಸು ತಯಾರಿಸುವುದರಿಂದ ಇದರ ರುಚಿ ಪರಮಾದ್ಭುತ ಎನ್ನಬಹುದು. ಮರುವಾಯಿ ಚಿಪ್ಪಿನೊಳಗಿರುವ ಮಾಂಸವನ್ನು ಕಚ್ಚಿ ತಿನ್ನುವಾಗ ತರಿತರಿಯಾಗಿ ಸಿಗುವ ತೆಂಗಿನಕಾಯಿ ತುರಿಯ ತಾಜಾತನ, ಬೆಳ್ಳುಳ್ಳಿ–ಮೆಂತ್ಯೆಯ ಪರಿಮಳ, ಉತ್ಕೃಷ್ಟ ತೆಂಗಿನೆಣ್ಣೆಯಿಂದ ಸಮೃದ್ಧವಾದ ಈ ಖಾದ್ಯದ ಸವಿರುಚಿಯನ್ನು ತಿಂದೇ ತಿಳಿಯಬೇಕು.

ಪಾಣೆಮಂಗಳೂರು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿದೆ. ಚಿಕ್ಕಮಗಳೂರಿಗೆ ಹೋಗಬೇಕಾದರೂ ಇದೇ ರಸ್ತೆ ಹಾದು ಹೋಗಬೇಕು. ಹಾಗಾಗಿ, ‘ಅಕ್ಕ’ ಹೋಟೆಲ್‌ಗೆ ಬರುವ ಗ್ರಾಹಕರಲ್ಲಿ ಹೆಚ್ಚಾಗಿ ಹೊರಗಿನವರೇ ಇದ್ದಾರೆ. ಒಮ್ಮೆ ಇಲ್ಲಿ ಮೀನಿನ ಖಾದ್ಯಗಳ ರುಚಿ ಉಂಡವರು ತಿರುಗಿ ಬರದೇ ಇರಲಾರರು. ಮಂಗಳೂರಿಗೆ ಬರುವ ಯೋಚನೆ ಇದ್ದವರು ‘ಅಕ್ಕ’ ಹೋಟೆಲ್‌ನಲ್ಲಿ ಮೀನೂಟ ಸವಿಯುವ ಪ್ಲಾನ್‌ ಹಾಕಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !