ಐತಿಹಾಸಿಕ ಕ್ಷೇತ್ರಕ್ಕೆ ಕಳೆಗಟ್ಟಿದ ಉದ್ಯಾನ

7
ಅರಣ್ಯ ಇಲಾಖೆಯಿಂದ ಬನವಾಸಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿ

ಐತಿಹಾಸಿಕ ಕ್ಷೇತ್ರಕ್ಕೆ ಕಳೆಗಟ್ಟಿದ ಉದ್ಯಾನ

Published:
Updated:
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ

ಶಿರಸಿ: ಐತಿಹಾಸಿಕ ಕ್ಷೇತ್ರ ಬನವಾಸಿಗೆ ಬರುವ ಪ್ರವಾಸಿಗರಿಗೆ ಸಮಯ ಕಳೆಯಲು ಸುಂದರ ಉದ್ಯಾನವೊಂದು ರೂಪುಗೊಂಡಿದೆ. ಈ ಉದ್ಯಾನದಲ್ಲಿ ಮಕ್ಕಳಿಗೆ ಮನರಂಜನೆಯ ಜತೆಗೆ, ಅಪರೂಪದ ತಳಿಯ ಸಸ್ಯಗಳನ್ನು ನೋಡಬಹುದು.

ತಾಲ್ಲೂಕಿನ ಬನವಾಸಿಯಲ್ಲಿ ದಾಸನಕೊಪ್ಪ ರಸ್ತೆಯಲ್ಲಿ ತುಸು ದೂರದಲ್ಲಿ ಸಾಗಿದರೆ, ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾಣಸಿಗುತ್ತದೆ. ಒಟ್ಟು 22 ಹೆಕ್ಟೇರ್ ಪ್ರದೇಶದಲ್ಲಿ, ಪ್ರಸ್ತುತ 8 ಹೆಕ್ಟೇರ್‌ನಲ್ಲಿ ಅರಣ್ಯ ಇಲಾಖೆ ಈ ಉದ್ಯಾನವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ಸ್ಥಾನಿಕ ಸಸ್ಯಗಳು, ಮುತ್ತುಗ, ಅತ್ತಿ, ಕದಂಬ, ಆಲ, ಪನ್ನೇರಲು, ಚೆರ್ರಿ, ಮಹಾಗನಿ, ಸಿಲ್ವರ್ ಓಕ್‌ ಸೇರಿದಂತೆ ಸುಮಾರು 75 ವಿವಿಧ ಜಾತಿಯ ಗಿಡಗಳ ತಳಿಗಳು ಇವೆ.

ಸುಮಾರು ಒಂದೂವರೆ ಕಿ.ಮೀ ವಾಕಿಂಗ್ ಪಾತ್, ಮಕ್ಕಳ ಆಟಿಕೆ ಸಾಮಗ್ರಿಗಳು, ಪಾರಾಗೋಲಾ ನಿರ್ಮಿಸಲಾಗಿದೆ. ಅಲ್ಲಲ್ಲಿ ಕುಳಿತುಕೊಳ್ಳುವ ಬೆಂಚ್ ಹಾಕಿರುವುದರಿಂದ ಸಂಜೆಯ ವಾಯುವಿಹಾರಕ್ಕೆ ಬರುವವರಿಗೆ ಸಹಕಾರಿಯಾಗಿದೆ. ‘ಉದ್ಯಾನ ನಿರ್ಮಾಣ ಸಂಬಂಧ 2016ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. 2017ರಲ್ಲಿ ಮಂಜೂರು ದೊರೆತು, ಟ್ರೀ ಪಾರ್ಕ್ ಯೋಜನೆಯಡಿ ಅಂದಾಜು ₹ 40 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲಾಗಿದೆ’ ಎನ್ನುತ್ತಾರೆ ಬನವಾಸಿ ವಲಯ ಅರಣ್ಯಾಧಿಕಾರಿ ವಿನಯ್ ಭಟ್.

‘ಬರುವ ದಿನಗಳಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ₹ 25 ಲಕ್ಷ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. ಈ ಮಳೆಗಾಲದಲ್ಲಿ ಹೆಬ್ಬಲಸು, ಅರಗು, ಏಕನಾಯಕ, ಆಲೆ, ಬಿಳಿಮತ್ತಿ, ಸರಕಾ ಅಶೋಕ, ಮ್ಯಾಪಿಯಾ ಮೊದಲಾದ ಅಪರೂಪದ 50 ಜಾತಿಯ ಸಸಿಗಳನ್ನು ನಾಟಿ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕುಡಿಯುವ ನೀರಿನ ವ್ಯವಸ್ಥೆ, ಇನ್ನೂ ಒಂದು ಕಿ.ಮೀ ವಾಕಿಂಗ್ ಪಾತ್ ನಿರ್ಮಾಣ ಮಾಡಿದರೆ, ಬೆಳಿಗ್ಗೆ ವಾಕಿಂಗ್ ಬರುವವರಿಗೆ ಅನುಕೂಲವಾಗುತ್ತದೆ. ಜಿಮ್ ಸಾಮಗ್ರಿಗಳನ್ನು ಅಳವಡಿಸುವ ಯೋಚನೆಯಿದೆ. ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರು ಸಮಯ ಕಳೆಯಲು ಉದ್ಯಾನಕ್ಕೆ ಬರುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಸುತ್ತಲಿನ ಶಾಲಾ ಮಕ್ಕಳು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ. ಇದರಿಂದ ಅವರಿಗೆ ಅನೇಕ ಜಾತಿಯ ಗಿಡಗಳ ಪರಿಚಯವಾಗುತ್ತದೆ. ಉದ್ಯಾನ ಅಭಿವೃದ್ಧಿಗೆ ಮಾರ್ಗದರ್ಶನ ಮಾಡಲು ಸ್ಥಳೀಯವಾಗಿ 10 ಜನರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

‘ಬನವಾಸಿ ಕುಟುಂಬ ಸಮೇತರಾಗಿ ಬಂದರೆ, ದೇವಾಲಯ ಬಿಟ್ಟು ಬೇರೆ ಕಡೆಗಳಲ್ಲಿ ಸಮಯ ಕಳೆಯಲು ಉತ್ತಮ ಸ್ಥಳವಿರಲಿಲ್ಲ. ಹೊಸ ಉದ್ಯಾನವು ಈ ಕೊರತೆಯನ್ನು ನೀಗಿಸಿದೆ’ ಎಂದು ಪ್ರವಾಸಕ್ಕೆ ಬಂದಿದ್ದ ಸೊರಬದ ಸುಕನ್ಯಾ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !