ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ

5

ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ

Published:
Updated:

ಬೆಂಗಳೂರು: ‘ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ...’  ಹೈಕೋರ್ಟ್‌ನಲ್ಲಿ ಬೆಳಕಿಗೆ ಬಂದ ಲಂಚ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಸಭಾಧ್ಯಕ್ಷ ರಮೇಶಕುಮಾರ್‌ ಅವರು ಪುರಂದರ ದಾಸರ ಈ ಸಾಲನ್ನು ಉದ್ಧರಿಸಿದರು.

‘ಭೂಮಿಯ ವ್ಯಾಜ್ಯವನ್ನು ಇತ್ಯರ್ಥಪಡಿಸಲು ವ್ಯಕ್ತಿಯೊಬ್ಬ ತಮಗೆ ಲಂಚ ನೀಡಲು ಬಂದಿದ್ದ ಎಂದು ಹಿಂದಿನ ಮುಖ್ಯ ನ್ಯಾಯಮೂರ್ತಿಯೊಬ್ಬರು ಕೋರ್ಟ್‌ ಕಲಾಪ ನಡೆಯುತ್ತಿರುವಾಗಲೇ ಬಹಿರಂಗಪಡಿಸಿದ್ದರು. ಅವರೇಕೆ ಕೊನೆಗೂ ದೂರು ಕೊಡಲಿಲ್ಲ ಎನ್ನುವುದು ಗೊತ್ತಾಗಲೇ ಇಲ್ಲ’ ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಹೇಳಿದರು.

‘ಇದನ್ನೇ ರಾಜಕೀಯ ವ್ಯಕ್ತಿ ಮಾಡಿದ್ದರೆ ಹಿಂಡಿ ಹಾಕಿರೋರು. ಹುದ್ದೆಯ ಘನತೆಯೇ ಬೇರೆ, ವೈಯಕ್ತಿಕ ನಡವಳಿಕೆಯೇ ಬೇರೆ’ ಎಂದು ಬಿಜೆಪಿಯ ವಿ.ಸೋಮಣ್ಣ ವ್ಯಾಖ್ಯಾನಿಸಿದರು. ‘ಲಂಚದ ಆಮಿಷ ಒಡ್ಡಿದ್ದು ಯಾರು ಎನ್ನುವುದು ಗೊತ್ತಾಗಬೇಕಿತ್ತು. ಪ್ರಕರಣವನ್ನು ನ್ಯಾಯಮೂರ್ತಿಯವರು ಲಾಜಿಕಲ್‌ ಎಂಡ್‌ಗೆ ಒಯ್ಯಬೇಕಿತ್ತು’ ಎಂದು ರಮೇಶಕುಮಾರ್‌ ಪ್ರತಿಕ್ರಿಯಿಸಿದರು.

‘ಹೈಕೋರ್ಟ್‌ನಲ್ಲಿ ಈ ಹಿಂದೆ ಗೋವಿಂದ ಭಟ್‌ ಎಂಬ ಮುಖ್ಯ ನ್ಯಾಯಮೂರ್ತಿ ಇದ್ದರು. ತಮ್ಮ ಕೆಳಗಿನವರ ಮೇಲೆ ಅವರು ಲಂಚದ ಆರೋಪ ಮಾಡಿದ್ದರು. ನಿಖರ ಪ್ರಕರಣವಿದ್ದರೆ ಹೇಳಬೇಕು ಎಂದು ನ್ಯಾಯಮೂರ್ತಿ ವಿಶ್ವೇಶ್ವರ ಎಂಬುವರು ಪಟ್ಟು ಹಿಡಿದಿದ್ದರು. ಕೊನೆಗೆ ಆಗಿದ್ದೇನು ಗೊತ್ತೆ? ಅವರಿಗೆ ಬಡ್ತಿ ಸಿಗದಂತೆ ನೋಡಿಕೊಳ್ಳಲಾಯಿತು’ ಎಂದು ನೆನಪಿಸಿಕೊಂಡರು.

‘ಭ್ರಷ್ಟರ ವಿವರ ಇರುವ ಪ್ರಶಾಂತ್‌ ಭೂಷಣ್‌ ಅವರ ಕವರ್‌ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅದನ್ನು ತೆರೆಯುವ ಧೈರ್ಯವನ್ನು ಯಾರೂ ಮಾಡಿಲ್ಲ’ ಎಂದು ಹೇಳಿದರು. ಕೋರ್ಟ್‌ನಲ್ಲಿ ಚರ್ಚೆಯಾದ ಪೋಡಿ ಪ್ರಕರಣಗಳ ಬಗೆಗೆ ರಾಮಸ್ವಾಮಿಯವರು ಇದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದಾಗ ಸಭಾಧ್ಯಕ್ಷರು ಪುರಂದರದಾಸರ ಹಾಡಿನ ಸಾಲು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !