ಮಾದಕ ವಸ್ತುಗಳು ಅದೃಶ್ಯ ಕೊಲೆಗಾರರು

7

ಮಾದಕ ವಸ್ತುಗಳು ಅದೃಶ್ಯ ಕೊಲೆಗಾರರು

Published:
Updated:
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕೋಲಾರ: ‘ಮಾದಕ ವಸ್ತುಗಳು ಮನುಷ್ಯನ ಪಾಲಿಗೆ ಅದೃಶ್ಯ ಕೊಲೆಗಾರರು. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದೆ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕಿವಿಮಾತು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ನಾವು ಮದ್ಯದಂಗಡಿಗಳ ವಿರುದ್ಧ ಹೋರಾಟ ಮಾಡಬಾರದು. ಬದಲಿಗೆ ಮದ್ಯವ್ಯಸನಿಗಳ ವಿರುದ್ಧ ಹೋರಾಟ ಮಾಡಿ ಅವರ ಅಂತರಂಗ ಪ್ರವೇಶಿಸಿ ಜಾಗೃತಿ ಮೂಡಿಸಬೇಕು’ ಎಂದರು.

‘ಪೋಲಿಯೊ ಲಸಿಕೆ ಅಭಿಯಾನದ ಹಲವು ವರ್ಷಗಳ ನಿರಂತರ ಸಾಧನೆಯ ನಂತರ ಭಾರತವು ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಅದೇ ಮಾದರಿಯಲ್ಲಿ ಮಾದಕ ವಸ್ತುಗಳನ್ನು ಸಮಾಜದಿಂದ ದೂರ ಮಾಡಲು ನಿರಂತರ ಪ್ರಯತ್ನ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯಕ್ಕೆ ಮುನ್ನ ದೇಶದಲ್ಲಿ 500ಕ್ಕೆ 10 ಮಂದಿ ಮಾತ್ರ ಮದ್ಯವ್ಯಸನಿಗಳಿದ್ದರು. ಆದರೆ, ಇಂದು 100ಕ್ಕೆ 30 ಮಂದಿ ಮದ್ಯವ್ಯಸನಿಗಳಿದ್ದಾರೆ. 14 ವರ್ಷದಿಂದ 20 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಶೇ 60ರಷ್ಟಿರುವ ಯುವಕ ಯುವತಿಯರು ಆರೋಗ್ಯವಂತರಾಗಿದ್ದರೆ ಮಾತ್ರವೇ ಅಭಿವೃದ್ಧಿ ಸಾಧ್ಯ’ ಎಂದು ತಿಳಿಸಿದರು.

ದುಶ್ಚಟದತ್ತ ಸೆಳೆಯುತ್ತದೆ: ‘ಸಮಾಜದಲ್ಲಿ ಹಾಳಾಗಲು ಹೆಚ್ಚಿನ ಅವಕಾಶಗಳಿವೆ. ಅದೇ ರೀತಿ ಉತ್ತಮ ಬದುಕಿಗೂ ಅಷ್ಟೇ ಅವಕಾಶಗಳಿದ್ದು, ಅದರ ಆಯ್ಕೆಯಲ್ಲಿ ತಪ್ಪು ಮಾಡಬಾರದು. ಪೋಷಕರು ಮಕ್ಕಳ ಮೂಲಕ ತಂಬಾಕು ಉತ್ಪನ್ನಗಳನ್ನು ತರಿಸುವ ತಪ್ಪು ಮಾಡಿದರೆ ಭವಿಷ್ಯದಲ್ಲಿ ಆ ತಪ್ಪೇ ಮಕ್ಕಳನ್ನು ದುಶ್ಚಟದತ್ತ ಸೆಳೆಯುತ್ತದೆ’ ಎಂದು ಶಾಲೆಯ ಶಿಕ್ಷಕ ಸಿ.ಎಂ.ವೆಂಕಟರಮಣಪ್ಪ ಹೇಳಿದರು.

‘ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಕ್ಯಾನ್ಸರ್, ಜ್ಞಾಪಕಶಕ್ತಿ ಕುಂಠಿತ, ಶ್ವಾಸಕೋಶ ಸಂಬಂಧಿ ಕಾಯಿಲೆ ಬರುತ್ತವೆ ಎಂದು ವಿದ್ಯಾರ್ಥಿಗಳು ಪೋಷಕರಿಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

ಮದ್ಯ, ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳನ್ನು ಬಳಸುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಶಿಕ್ಷಕರಾದ ಶ್ರೀನಿವಾಸಲು, ಎಸ್‌.ಸತೀಶ್, ಭವಾನಿ, ಶ್ವೇತಾ, ಸುಗುಣಾ, ನಾರಾಯಣಸ್ವಾಮಿ, ಎಸ್.ಅನಂತಪದ್ಮನಾಭ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !