ಎಂಜಿನಿಯರ್‌ಗಳಿಗೆ ನಗರಸಭೆ ಅಧ್ಯಕ್ಷರ ತರಾಟೆ

7
ಕೀಲುಕೋಟೆಯಲ್ಲಿ ಮ್ಯಾನ್‌ಹೋಲ್‌– ಯುಜಿಡಿ ಸಮಸ್ಯೆ

ಎಂಜಿನಿಯರ್‌ಗಳಿಗೆ ನಗರಸಭೆ ಅಧ್ಯಕ್ಷರ ತರಾಟೆ

Published:
Updated:
ಕೋಲಾರ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಸದಸ್ಯರು ಕೀಲುಕೋಟೆ ಬಡಾವಣೆಯಲ್ಲಿನ ಯುಜಿಡಿ ಸಮಸ್ಯೆಯನ್ನು ಗುರುವಾರ ಪರಿಶೀಲಿಸಿದರು.

ಕೋಲಾರ: ನಗರದ ಕೀಲುಕೋಟೆ ಬಡಾವಣೆಯ ವಿವಿಧೆಡೆ ಹಾಳಾಗಿರುವ ಒಳಚರಂಡಿ (ಯುಜಿಡಿ) ಪೈಪ್‌ ದುರಸ್ತಿ ಮಾಡದ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಎಂಜಿನಿಯರ್‌ಗಳನ್ನು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ತರಾಟೆಗೆ ತೆಗೆದುಕೊಂಡರು.

ಕೀಲುಕೋಟೆ ಬಡಾವಣೆಗೆ ಗುರುವಾರ ಭೇಟಿ ನೀಡಿ ಯುಜಿಡಿ ಮಾರ್ಗದ ಪರಿಶೀಲನೆ ನಡೆಸಿದ ಅಧ್ಯಕ್ಷರು, ‘ಕೇಶವನಗರ ಹಾಗೂ ಕೀಲುಕೋಟೆ ಬಡಾವಣೆಯ ವಿವಿಧೆಡೆ ಯುಜಿಡಿ ಮ್ಯಾನ್‌ಹೋಲ್‌ ಮತ್ತು ಪೈಪ್‌ಗಳು ಹಾಳಾಗಿ ತಿಂಗಳುಗಳೇ ಕಳೆದಿವೆ. ಆದರೂ ಈ ಬಗ್ಗೆ ಗಮನ ಹರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯುಜಿಡಿ ಪೈಪ್ ಹಾಳಾಗಿರುವುದರಿಂದ ಕೊಳಚೆ ನೀರು ಹೊರಗೆ ಹರಿದು ರಾಜಕಾಲುವೆಯಲ್ಲಿ ಶೇಖರಣೆಯಾಗುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆ, ಹಂದಿ ಹಾಗೂ ಬೀದಿ ನಾಯಿ ಕಾಟ ಹೆಚ್ಚಿದ್ದು, ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಪೈಪ್‌ ಮತ್ತು ಮ್ಯಾನ್‌ಹೋಲ್‌ ದುರಸ್ತಿಗೆ ಸ್ಥಳೀಯರು ಹಲವು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದರು.

‘ಈ ಹಿಂದೆಯೇ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೆ. ಆದರೆ, ಟೆಂಡರ್‌, ಅನುಮೋದನೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದೀರಿ. ನಗರಸಭೆ ಅಧಿಕಾರಿಗಳೇ ಪೈಪ್‌ ಮತ್ತು ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಲು ಮುಂದಾಗಿದ್ದರು. ಅದಕ್ಕೂ ಅವಕಾಶ ಕೊಡಲಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ಜನರ ಬಳಿ ನಾನು ಮಾತು ಕೇಳುವಂತಾಗಿದೆ’ ಎಂದು ಹರಿಹಾಯ್ದರು. ‘ನಗರದಲ್ಲಿ ಏನೇ ಸಮಸ್ಯೆ ಎದುರಾದರೂ ಜನ ಅಧಿಕಾರಿಗಳನ್ನು ಕೇಳುವುದಿಲ್ಲ. ಆಯಾ ವಾರ್ಡ್‌ನ ಸದಸ್ಯರನ್ನು ಪ್ರಶ್ನಿಸುತ್ತಾರೆ. ಸಣ್ಣ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ ನೀವು ಇನ್ನೇನು ಕೆಲಸ ಮಾಡುತ್ತೀರಿ?’ ಎಂದು ಪ್ರಶ್ನಿಸಿದರು.

ಕಾಲಾವಕಾಶ ಕೊಡಿ: ಇದಕ್ಕೆ ಪ್ರತಿಕ್ರಿಯಿಸಿದ ಕೆಯುಡಬ್ಲ್ಯೂಎಸ್‌ಡಿಬಿ ಸಹಾಯಕ ಎಂಜಿನಿಯರ್ ಅಶೋಕ್, ‘ಕೀಲುಕೋಟೆ ಮತ್ತು ಕೇಶವನಗರ ಭಾಗದಲ್ಲಿ ಹೊಸದಾಗಿ ಯುಜಿಡಿ ನಿರ್ಮಾಣ ಮಾಡಲಾಗಿದೆ. ರಸ್ತೆ ಸಮಸ್ಯೆ ಇರುವುದರಿಂದ ಸಂಪರ್ಕ ಕಲ್ಪಿಸಲಾಗುತ್ತಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ’ ಎಂದರು.

ಇದರಿಂದ ಗರಂ ಆದ ನಗರಸಭಾ ಸದಸ್ಯ ಕಾಶಿ ವಿಶ್ವನಾಥ್, ‘ಸುಳ್ಳು ಹೇಳುವುದನ್ನು ಮೊದಲು ಬಿಡಿ. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಈ ವಿಷಯವಾಗಿ ನಗರಸಭೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಮಾಡಿದ್ದೇನೆ. ಆ ಸಂದರ್ಭಕ್ಕೆ ಏನೋ ಸಬೂಬು ಹೇಳಿ ಹೋದ ನೀವು ಮತ್ತೆ ಇತ್ತ ತಲೆ ಹಾಕಿಲ್ಲ. ನಿಮಗೆ ಜನರ ಸಮಸ್ಯೆ ಅರ್ಥವಾಗುವುದಿಲ್ಲವೇ?’ ಎಂದು ಬಿಸಿ ಮುಟ್ಟಿಸಿದರು.

‘ಅಮೃತ್ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ಬಿಟ್ಟರೆ ಬೇರೆಲ್ಲೂ ಹೊಸದಾಗಿ ಯುಜಿಡಿ ಕಾಮಗಾರಿ ನಡೆದಿಲ್ಲ. ಹಳೆ ಪೈಪ್‌ಲೈನ್ ಮೂಲಕ ಹೊಸ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಲು ನಿರ್ಲಕ್ಷ್ಯ ತೋರುತ್ತಿದ್ದೀರಿ. ಎಂಜಿನಿಯರ್‌ಗಳನ್ನು ನಗರಸಭೆಯ ಸಾಮಾನ್ಯ ಸಭೆಗೆ ಕರೆಸಿ ಛೀಮಾರಿ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಎರಡು ದಿನದ ಗಡುವು: ಅಧ್ಯಕ್ಷರ ಸ್ಥಳ ಪರಿಶೀಲನೆ ವೇಳೆ ಅಶೋಕ್ ಹೇಳದೆ ಕೇಳದೆ ಜಾಗ ಖಾಲಿ ಮಾಡಿ ಕಚೇರಿಗೆ ಹೋಗಿದ್ದರು. ಬಳಿಕ ಅಧ್ಯಕ್ಷರು ಅವರಿಗೆ ಕರೆ ಮಾಡಿ ಪುನಃ ಸ್ಥಳಕ್ಕೆ ಕರೆಸಿಕೊಂಡು, ‘ಯಾಕೆ ತಪ್ಪಿಸಿಕೊಂಡು ಹೋಗುತ್ತೀರಾ? ಸಮಸ್ಯೆ ಪರಿಶೀಲನೆ ಮಾಡಲು ನಿಮಗೆ ತೊಂದರೆಯಾ? ಎರಡು ದಿನದಲ್ಲಿ ಯುಜಿಡಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಪ್ರಸಾದ್‌ಬಾಬು, ಹಿರಿಯ ಎಂಜಿನಿಯರ್ ಸುಧಾಕರ್‌ ಶೆಟ್ಟಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !