ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮ

7
ಬಾಬೂ ಜಗಜೀವನರಾಂ ಅವರ 32ನೇ ಸ್ಮರಣೆಯಲ್ಲಿ ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಅಭಿಮತ

ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮ

Published:
Updated:
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪ್ರೋ.ಕೋಡಿರಂಗಪ್ಪ ಮಾತನಾಡಿದರು

ಚಿಕ್ಕಬಳ್ಳಾಪುರ: ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರು ದೇಶವನ್ನು ಹಸಿವಿನಿಂದ ಮುಕ್ತಗೊಳಿಸಲು ಹಸಿರುಕ್ರಾಂತಿಗೆ ನಾಂದಿ ಹಾಡಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು’ ಎಂದು ಶಿಕ್ಷಣ ತಜ್ಞ ಪ್ರೋ.ಕೋಡಿರಂಗಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ್‌ರಾಂ ಅವರ 32ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

 ‘ದೇಶ ಕಂಡ ಅಪ್ರತಿಮ ಸಂಸದೀಯ ಪಟುವಾಗಿದ್ದ ಜಗಜೀವನರಾಂ ಅವರು ತಮ್ಮ ಜೀವನದುದ್ದಕ್ಕೂ ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದರು. ರಕ್ಷಣಾ ಸಚಿವರಾಗಿ‌‌‌ ಸೈನ್ಯದ ಬಲ ವೃದ್ಧಿಸಿದರು. ಕೃಷಿ ಸಚಿವರಾಗಿದ್ದ ವೇಳೆ ಹಸಿರುಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿದರು’ ಎಂದು ತಿಳಿಸಿದರು.

‘ಬುದ್ಧ, ಬಸವಣ್ಣ, ಡಾ.ಬಿ.ಆರ್‌.ಅಂಬೇಡ್ಕರ್‌, ಫುಲೆ ಅವರಂತೆ ಜಗಜೀವನ್‌ರಾಂ ಅವರು ಸಮಾಜದಲ್ಲಿದ್ದ ಅಸಮಾನತೆ, ಶೋಷಣೆ ವಿರುದ್ಧ ಹೋರಾಟಕ್ಕೆ ಶಕ್ತಿ ಮೀರಿ ಪ್ರಯತ್ನಪಟ್ಟರು’ ಎಂದರು.

‘ಯಾರನ್ನೂ ಕೂಡ ಜಾತಿ ನೆಲೆಯಿಂದ ಗುರುತಿಸಬಾರದು. ಶ್ರೀಮಂತ, ಬಡವರ ಮಕ್ಕಳಿಗೆ ಒಂದೇ ಸೂರಿನಡಿ ಸಮಾನ ಶಿಕ್ಷಣ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

‘ಕೆಲಸಕ್ಕಾಗಿ ಶಿಕ್ಷಣ ಅಭ್ಯಾಸ ಮಾಡಬಾರದು. ಮಾನವೀಯ ಮೌಲ್ಯಗಳು, ವಿಚಾರಗಳು, ಮಹನೀಯರ ಅಲೋಚನೆಗಳು, ಆದರ್ಶಗಳನ್ನು ಬೆಳೆಸುವಂತಹ ಶಿಕ್ಷಣ ಕಲಿಯಬೇಕು. ಯಾವ ದೇಶದಲ್ಲಿ ಶಿಕ್ಷಣ ಸಂಪತ್ತು ಇದೆಯೋ ಆ ದೇಶ ನಷ್ಟ ಹೊಂದುವುದಿಲ್ಲ. ನಿತ್ಯದ ಚಟುವಟಿಕೆಗಳಲ್ಲಿ ಮಹನೀಯರ ಆದರ್ಶ ತತ್ವಗಳನ್ನು ಪಾಲಿಸಿದಾಗ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುದತ್‌ ಹೆಗಡೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುನೇಗೌಡ, ಕೆ.ಸಿ.ರಾಜಾಕಾಂತ್‌, ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್ ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೇಜ ಆನಂದ ರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !