ಸೋತವನ್ನು ಮೇಲೆತ್ತುವ ಕೆಲಸವಾಗಲಿ

7
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟವಿಜ್ಞಾನ ವಿಭಾಗದ ಮುಖ್ಯಸ್ಥ ಮೋಹನ ನಾಯ್ಕ ಅಭಿಮತ

ಸೋತವನ್ನು ಮೇಲೆತ್ತುವ ಕೆಲಸವಾಗಲಿ

Published:
Updated:
ಶಿರಸಿಯಲ್ಲಿ ಭಾನುವಾರ ನಡೆದ ಆರ್ಯ ಈಡಿಗ ಸಂಘದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು

ಶಿರಸಿ: ಪ್ರತಿಭೆ ಇದ್ದವರನ್ನು ಮಾತ್ರ ಪ್ರೋತ್ಸಾಹಿಸುವ ಕಾರ್ಯವಾಗದೇ, ಜೀವನದಲ್ಲಿ ಸೋತವರನ್ನು ಮೇಲೆತ್ತುವ ಕೆಲಸ ಸಮಾಜದಿಂದ ಆಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟವಿಜ್ಞಾನ ವಿಭಾಗದ ಮುಖ್ಯಸ್ಥ ಮೋಹನ ನಾಯ್ಕ ಹೇಳಿದರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಕೇವಲ ಎಂಜಿನಿಯರ್, ಡಾಕ್ಟರ್‌ ಆಗುವಂತೆ ಮಕ್ಕಳ ಮೇಲೆ ಒತ್ತಡ ಹೇರದೆ, ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಬೇಕು. ಉದ್ಯೋಗ ಮಾಡಲು ಸಾಕಷ್ಟು ಕ್ಷೇತ್ರಗಳಿವೆ. ಇದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು. ಹೆಚ್ಚಿನ ಅಂಕಗಳಿಸಿದವರನ್ನು ಪ್ರೋತ್ಸಾಹಿಸುವ ಜತೆಗೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಾರ್ಗ ತೋರಿಸಬೇಕು ಎಂದು ತಿಳಿಸಿದರು.

ಈ ಹಿಂದೆ ಈಡಿಗ ಸಮುದಾಯದವರಿಗೆ ಶಿಕ್ಷಣ ಪರಿಜ್ಞಾನ ಇರಲಿಲ್ಲ. ಈಗ ಸಮುದಾಯದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಪಾಲಕರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪ್ರವೃತ್ತಿ ಇನ್ನಷ್ಟು ಹೆಚ್ಚಬೇಕು. ಸಮುದಾಯ ವೇಗವಾಗಿ ಉನ್ನತಿ ಹೊಂದುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಕೊಡಿಸುವ ಪ‍್ರಯತ್ನವಾಗಬೇಕು ಎಂದು ಹೇಳಿದರು.

ಪ್ರತಿಭಾ ಪುರಸ್ಕಾರದ ಅಂಗವಾಗಿ 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಅಂಗವಿಕಲ ಕ್ರೀಡಾಪಟು ಪ್ರಕಾಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರಾದ ಕುಮಾರ ನಾಯ್ಕ, ಶ್ರೀಧರ ನಾಯ್ಕ, ಎಸ್.ವಿ.ನಾಯ್ಕ, ತಿಮ್ಮಯ್ಯ ನಾಯ್ಕ, ಆರ್.ಐ.ನಾಯ್ಕ ಅವರನ್ನು ಗೌರವಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ವಿ.ಜಿ.ನಾಯ್ಕ, ಆರ್.ಜಿ.ನಾಯ್ಕ, ನಿವೃತ್ತ ಕಮಾಂಡೆಂಟ್ ಎಸ್.ಎಚ್.ನಾಯ್ಕ, ಕೆನರಾ ಬ್ಯಾಂಕ್ ಶಿರಸಿ ಶಾಖೆ ಮುಖ್ಯಸ್ಥ ಮನೋಜ ನಾಯ್ಕ, ಮುಂಡಗೋಡ ಘಟಕದ ಅಧ್ಯಕ್ಷ ನಾಗರಾಜ ನಾಯ್ಕ, ಶಿರಸಿ ಘಟಕದ ಅಧ್ಯಕ್ಷ ಎಸ್.ಡಿ.ನಾಯ್ಕ ಇದ್ದರು.  ಖಜಾಂಚಿ ಎಸ್.ಬಿ.ನಾಯ್ಕ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !